ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಗೆ ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ರಾ ರಾ ರಕ್ಕಮ್ಮ, ಟ್ರೇಲರ್ ವಿಕ್ರಾಂತ್ ರೋಣ ಪ್ರಪಂಚದ ಅಧ್ಬುತ ಲೋಕವನ್ನು ಸಿನಿಪ್ರಿಯರಿಗೆ ಪರಿಚಯಿಸಿದೆ. ಜುಲೈ 28ಕ್ಕೆ ಸಿನಿಮಾ ನೋಡಿ ಕಣ್ತುಂಬಿಕೊಳ್ಳೊದೊಂದು ಬಾಕಿ ಎನ್ನುತ್ತಿದ್ದ ಅಭಿಮಾನಿ ಬಳಗಕ್ಕೆ ಕಿಚ್ಚನ ಅಂಗಳದಿಂದ ಮತ್ತೊಂದು ಸೂಪರ್ ಡೂಪರ್ ಸರ್ಪ್ರೈಸ್ ಸಿಕ್ಕಿದೆ.
ವಿಕ್ರಾಂತ್ ರೋಣ ಸಿನಿಮಾ ಕೂಡ ಮೆಟಾ ವರ್ಸ್ ಲೋಕಕ್ಕೆ ಕಾಲಿಟ್ಟಿದ್ದು. ಎನ್ ಎಫ್ ಟಿ ಸಂಸ್ಥೆ ‘ಕಿಚ್ಚ ವರ್ಸ್’ ಮೂಲಕ ವಿಕ್ರಾಂತ್ ರೋಣವನ್ನು ಪ್ರಸ್ತುತ ಪಡಿಸಲಿದೆ. ಕಿಚ್ಚ ವರ್ಸ್’ ಅನ್ನು ಎನ್ ಎಫ್ ಟಿ ಸಂಸ್ಥೆ ವಿಕ್ರಾಂತ್ ರೋಣ ಚಿತ್ರತಂಡದೊಂದಿಗೆ ಲಾಂಚ್ ಮಾಡಿದೆ. ಎನ್ ಎಫ್ ಟಿ ಸಂಸ್ಥೆ ಸೃಷ್ಟಿಸಿರುವ ಕಿಚ್ಚ ವರ್ಸ್ ಜಗತ್ತು ಕಿಚ್ಚನಿಗೂ ಸಖತ್ ಸರ್ಪ್ರೈಸ್ ಆಗಿದ್ದು ಮೊದಲ ಬಾರಿ ಇದರ ಬಗ್ಗೆ ಕೇಳಿದಾಗ ಹೇಗಿರುತ್ತೋ ಎಂಬ ಕಾಲ್ಪನಿಕ ಲೋಕದಲ್ಲಿದ್ದೆ. ನನಗೂ ಇದು ಅರ್ಥವಾಗಿರಲಿಲ್ಲ. ಆದ್ರೆ ಅದನ್ನು ಸ್ವತಃ ನಾನೇ ನೋಡಿದಾಗ. ಅನುಭವಿಸಿದಾಗ ತುಂಬಾನೇ ಖುಷಿ ಪಟ್ಟೆ. ತುಂಬಾನೇ ಅಧ್ಬುತ ಕೆಲಸವನ್ನು ಈ ತಂಡ ಮಾಡಿದೆ ಖಂಡಿತ ಎಲ್ಲರಿಗೂ ಇಂತಹದ್ದೇ ಒಂದು ಒಳ್ಳೆಯ ಅನುಭವವನ್ನು ಇದು ನೀಡಲಿದೆ ಎಂಬ ಭರವಸೆ ಇದೆ ಎಂದು ನಟ ಕಿಚ್ಚ ಸುದೀಪ ಕಿಚ್ಚ ವರ್ಸ್ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಕಿಚ್ಚ ವರ್ಸ್ ಕಿಚ್ಚನ ಜಗತ್ತಾಗಿದ್ದು ಈ ಲೋಕದಲ್ಲಿ ನೀವು ಕಿಚ್ಚನ ಜೊತೆ ಮಾತನಾಡಬಹುದು, ಅವರ ಜೊತೆ ಸಮಯ ಕಳೆಯಬಹುದು ಹೀಗೆ ನಿಮ್ಮ ನೆಚ್ಚಿನ ನಟನೊಂದಿಗೆ ಕಾಲ ಕಳೆಯಲು ಕಿಚ್ಚ ವರ್ಸ್ ಅವಕಾಶ ಮಾಡಲಿದ್ದು, ಕಿಚ್ಚನ ಅಭಿಮಾನಿಗಳಿಗೆ ಇದು ತುಂಬಾನೇ ಖುಷಿ ಕೊಡಲಿದೆ. ಕಿಚ್ಚ ವರ್ಸ್ ಲೋಕವನ್ನು ಪ್ರವೇಶಿಸಲು ಎನ್ ಎಫ್ ಟಿ ಮೆಂಬರ್ ಶಿಪ್ ಕಾರ್ಡ್ ಪ್ರತಿಯೊಬ್ಬರು ಹೊಂದಿರಬೇಕು ಎಂದು ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸ್ಥಾಪಕಿ ಪ್ರಿಯಾ ಸುದೀಪ್ ಕಿಚ್ಚ ವರ್ಸ್ ಬಗ್ಗೆ ತಿಳಿಸಿದ್ದಾರೆ.
ನಿನ್ನೆಯಿಂದ ಎನ್ ಎಫ್ ಟಿ ಸ್ಕೆಚ್ ಕಾಂಪಿಟೇಶನ್ ಆರಂಭವಾಗಿದ್ದು ವಿಕ್ರಾಂತ್ ರೋಣ ಚಿತ್ರದ ಅಧ್ಬುತ ಸ್ಕೆಚ್ ಮಾಡಿದವರಿಗೆ ಎನ್ ಎಫ್ ಟಿ ಮೆಂಬರ್ ಶಿಪ್ ನೀಡಲಾಗುವುದು. ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ ವಿಕ್ರಾಂತ್ ರೋಣ ಚಿತ್ರದ ಸ್ಕೆಚ್ ಬಿಡಿಸಿ kichchaverse.ioನಲ್ಲಿ ಅಪ್ ಲೋಡ್ ಮಾಡಬೇಕು. ಎನ್ ಎಫ್ ಟಿ ಡ್ರಾಪ್ ಕೂಡ ಜುಲೈ 24ರಿಂದ ನಡೆಯಲಿದೆ. ಹೀಗೆ ಎನ್ ಎಫ್ ಟಿ ಯ ಕಿಚ್ಚ ವರ್ಸ್ ಹಲವಾರು ಇವೆಂಟ್ ಗಳನ್ನು ಹೊಂದಿದ್ದು ಈ ಮೂಲಕ ತಮ್ಮ ನೆಚ್ಚಿನ ನಟನೊಂದಿಗೆ ಆತ್ಮೀಯವಾಗಿ ಕಾಲ ಕಳೆಯಲು ಅವಕಾಶ ಮಾಡಿಕೊಡಲಿದೆ.
ಮತ್ತೊಂದು ಹೆಮ್ಮೆಯ ಸಂಗತಿಯಂದ್ರೆ ಜಗತ್ತಿನಲ್ಲೇ ಮೊದಲ ಬಾರಿ ವಿಕ್ರಾಂತ್ ರೋಣ ಸಿನಿಮಾವನ್ನು ಎನ್ ಎಫ್ ಟಿ ಪ್ರೀಮಿಯರ್ ಶೋ ನಡೆಸುತ್ತಿದೆ. ಹೊರದೇಶಗಳಲ್ಲಿ ಕನ್ನಡ ಸಿನಿಮಾವನ್ನು ಪ್ರೀಮಿಯರ್ ಶೋ ನಡೆಸುತ್ತಿರೋದು ಇದೇ ಮೊದಲು. ಇದು ವಿಕ್ರಾಂತ್ ರೋಣ ಸಿನಿಮಾದ ಹೆಗ್ಗಳಿಕೆ. ಜುಲೈ 27ಕ್ಕೆ ದುಬೈನಲ್ಲಿ ಈ ಪ್ರೀಮಿಯರ್ ಶೋ ನಡೆಯಲಿದೆ. ಇದೆಲ್ಲದಕ್ಕೂ ಎನ್ ಎಫ್ ಟಿ ಮೆಂಬರ್ ಶಿಪ್ ಅಗತ್ಯವಿದೆ ಎಂದು ಕಾಫಿ ಅಂಡ್ ಬನ್ ಇನೋವೇಷನ್ಸ್ ಸಂಸ್ಥೆ ಸಿಇಓ ಜಾಕೀರ್ ಹುಸೇನ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು, ಸುದೀಪ್ ಪತ್ನಿ ಪ್ರಿಯಾ ಸುದೀಪ್ ಸೇರಿದಂತೆ ಹಲವರು ಭಾಗಿಯಾಗಿದ್ದರು.