ಚಿತ್ರ ಆರಂಭವಾದಗಿನಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ “ಅನ್ ಲಾಕ್ ರಾಘವ” Unlock Raghava ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಹೃದಯಶಿವ ಅವರು ಬರೆದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿ, ಸಾಯಿ ವಿಘ್ನೇಶ್ ಹಾಡಿರುವ “ನನ್ನ ಹುಡುಗಿ” ಎಂಬ ಹಾಡು ನಾಯಕ ಮಿಲಿಂದ್ ಹುಟ್ಟುಹಬ್ಬದಂದು A2 music ಮೂಲಕ ಬಿಡುಗಡೆಯಾಗಿ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಹಾಡು ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಹೆಚ್ಚಿನ ಮಾಹಿತಿ ನೀಡಿದರು.
ಹಲವು ವಿಶೇಷಗಳನ್ನು ಹೊಂದಿರುವ “ಅನ್ ಲಾಕ್ ರಾಘವ” ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಪ್ರಥಮಪ್ರತಿ ಬರಲಿದೆ. ನಾಯಕ ಮಿಲಿಂದ್ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಹಾಡಿನ ಚಿತ್ರೀಕರಣ ಚಿತ್ರದುರ್ಗದಲ್ಲಿ ಎರಡು ದಿನಗಳ ಕಾಲ ನಡೆದಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿತ್ತು. ಮಿಲಿಂದ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದೆ. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿದೆ. ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ನಿರ್ಮಾಪಕರಿಗೆ ಹಾಗೂ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ದೀಪಕ್ ಮಧುವನಹಳ್ಳಿ.
ಸತ್ಯಪ್ರಕಾಶ್ ಅವರು ಈ ಚಿತ್ರದ ಕಥೆ ಬರೆದಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡಿದ್ದಾರೆ. ನನ್ನ ಮಗ ಮಿಲಿಂದ್ ನಾಯಕನಾಗಿ ನಟಿಸಿರುವ ಈ ಚಿತ್ರ ಎಲ್ಲರ ಸಹಕಾರದಿಂದ ಉತ್ತಮವಾಗಿ ಮೂಡಿಬರುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಮಂಜುನಾಥ.ಡಿ. ಮತ್ತೊಬ್ಬ ನಿರ್ಮಾಪಕರಾದ ಗಿರೀಶ್ ಕುಮಾರ್ ಸಹ ಚಿತ್ರದ ಕುರಿತು ಮಾತನಾಡಿ, ಮಿಲಿಂದ್ ಅವರಿಗೆ ಶುಭಾಶಯ ತಿಳಿಸಿದರು.
ಹೃದಯಶಿವ ಅವರು ಬರೆದು ಅನೂಪ್ ಸೀಳಿನ್ ಸಂಗೀತ ನೀಡಿ, “ವರಾಹ ರೂಪಂ” ಹಾಡಿನ ಖ್ಯಾತಿಯ ಸಾಯಿವಿಘ್ನೇಶ್ ಹಾಡಿರುವ ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರದುರ್ಗದ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿರುವ ಈ ಹಾಡು ನನ್ನ ಹುಟ್ಟುಹಬ್ಬದಂದು ಬಿಡುಗಡೆಯಾಗಿರುವುದು ಖುಷಿಯಾಗಿದೆ ಎನ್ನುತ್ತಾರೆ ನಾಯಕ ಮಿಲಿಂದ್.
ನಾಯಕಿ ರೆಚೆಲ್ ಡೇವಿಡ್ ಸಹ ಹಾಡಿನ ಬಗ್ಗೆ ಮಾತನಾಡಿ, ಮಿಲಿಂದ್ ಅವರಿಗೆ ಶುಭಾಶಯ ಕೋರಿದರು. ಛಾಯಾಗ್ರಾಹಕ ಲವಿತ್, ಸಂಕಲನಕಾರ ಅಜಯ್ ಹಾಗೂ ನೃತ್ಯ ಸಂಯೋಜಕ ಮುರಳಿ ಮಾಸ್ಟರ್ ಹಾಡಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.