ಈಗಾಗಲೇ ತನ್ನ ವಿಭಿನ್ನ ಶೀರ್ಷಿಕೆ, ವಿಶೇಷ ಲುಕ್-ಪೋಸ್ಟರ್ ನಿಂದ ಗಮನ ಸೆಳೆದಿರುವ ‘ಅನ್ ಲಾಕ್ ರಾಘವ’ ಸಿನಿತಂಡ ಕಾರ್ಮಿಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದೆ. ವಿಶ್ವ ಕಾರ್ಮಿಕ ದಿನ ಪ್ರಯುಕ್ತ ಬೆಂಗಳೂರು ನಗರದ ವಿವಿಧೆಡೆ ಸಂಚರಿಸಿ, ಹಲವು ಚಿತ್ರಮಂದಿರಗಳ ಕಾರ್ಮಿಕರು, ರೈಲ್ವೆ ಸ್ಟೇಷನ್ ಕೂಲಿ ಕಾರ್ಮಿಕರು, ಆಟೋರಿಕ್ಷಾ ಚಾಲಕರು ಹೀಗೆ ವಿವಿಧ ಕಾರ್ಮಿಕರನ್ನು ಭೇಟಿಮಾಡಿ ಅವರೊಂದಿಗೆ ‘ಅನ್ ಲಾಕ್ ರಾಘವ’ ಚಿತ್ರತಂಡ ಸಾಕಷ್ಟು ಸಮಯ ಕಳೆದಿದೆ. ಸಿನಿಮಾದ ನಾಯಕ ಮಿಲಿಂದ್ ತಾವೇ ಆಟೋರಿಕ್ಷಾ ವಾಹನ ಚಲಾಯಿಸಿಕೊಂಡು ರಿಕ್ಷಾ ಚಾಲಕರ ಬಳಿ ತೆರಳಿದ್ದು ವಿಶೇಷ.
“ಎಲ್ಲೆಡೆ ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡು, ತಮ್ಮವನೆಂದು ಆಪ್ತವಾಗಿ ಮಾತನಾಡಿಸಿದ್ದಾರೆ. ಎಲ್ಲರೂ ತೋರಿದ ಪ್ರೀತಿಗೆ ಪ್ರೋತ್ಸಾಹಕ್ಕೆ ನಾನು ಕೃತಜ್ಞ..” ಎನ್ನುವಾಗ ‘ಅನ್ಲಾಕ್ ರಾಘವ’ ಚಿತ್ರದ ನಾಯಕ ಮಿಲಿಂದ್ ಭಾವುಕರಾಗಿದ್ದರು.
ಡಬ್ಬಿಂಗನ್ನು ಸಂಪೂರ್ಣಗೊಳಿಸಿರುವ ‘ಅನ್ ಲಾಕ್ ರಾಘವ’ ಇನ್ನೇನು ತೆರೆಗೆ ಬರುವ ತಯಾರಿ ನಡೆಸುತ್ತಿದೆ. ‘ಅನ್ ಲಾಕ್ ರಾಘವ’ ಚಿತ್ರವನ್ನು ಸತ್ಯ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ಮಂಜುನಾಥ್ ದಾಸೇಗೌಡ, ಡಿ ಸತ್ಯಪ್ರಕಾಶ್ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದು, ದೀಪಕ್ ಮಧುವನಹಳ್ಳಿ ಅವರು ನಿರ್ದೇಶನ ಮಾಡುತಿದ್ದಾರೆ.
ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು, ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ.
ಧನಂಜಯ್ ಮಾಸ್ಟರ್ ಹಾಗೂ ಮುರಳಿ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿದ್ದು, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಮಿಲಿಂದ್ ನಾಯಕನಾಗಿ ಹಾಗೂ ರೇಚಲ್ ದೇವಿಡ್ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗೂರು ಸುರೇಶ್, ಅಥರ್ವ ಪ್ರಕಾಶ್, ಶ್ರೀದತ್ತ, ಬೃಂದಾ ವಿಕ್ರಮ್ ಮೊದಲಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.