ಕರನಾಡ ಚಕ್ರವರ್ತಿ ಶಿವರಾಜಕುಮಾರ್ , ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅಭಿನಯದ, ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹಾಗೂ ಯೋಗರಾಜ್ ಭಟ್ ನಿರ್ದೇಶನದ “ಕರಟಕ ದಮನಕ” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಈ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇಂದಿಗೆ ಈ ಚಿತ್ರ ಪ್ರಾರಂಭವಾಗಿ ಒಂದು ವರ್ಷಗಳಾಗಿದೆ ಎಂದು ಮಾತು ಆರಂಭಿಸಿದ ನಿರ್ದೇಶಕ ಯೋಗರಾಜ್ ಭಟ್, “ಕರಟಕ ದಮನಕ” ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಇಬ್ಬರನ್ನು ಹೆಚ್ಚು ಸಲ ಒಟ್ಟಾಗಿ ನೋಡಿದಾಗ “ಕರಟಕ ದಮನಕ” ಎನ್ನುವುದು ಉಂಟು. ನಮ್ಮ ಚಿತ್ರದಲ್ಲಿ ಈ ಪಾತ್ರಗಳನ್ನು ಶಿವಣ್ಣ ಹಾಗೂ ಪ್ರಭುದೇವ ಮಾಡಿದ್ದಾರೆ. ಅವರಿಬ್ಬರ ಎನರ್ಜಿ ನೋಡಿದರೆ ನಿಜಕ್ಕೂ ಖುಷಿಯಾಗುತ್ತದೆ. ರಾಕ್ ಲೈನ್ ವೆಂಕಟೇಶ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆಯ ಏಳು ಹಾಡುಗಳು ಚಿತ್ರದಲ್ಲಿದೆ. ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಾಹಕರು. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಾಯಕಿಯರು. ಮುಖ್ಯ ಮಂತ್ರಿ ಚಂದ್ರು ಹಾಗೂ ತನಿಕೆಲ್ಲ ಭರಣಿ ಅವರಂತಹ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಾನು ಹಾಗೂ ರಾಕ್ ಲೈನ್ ವೆಂಕಟೇಶ್ ಅವರು ಸಹ ನಟಿಸಿದ್ದೇವೆ. ತೊಂಭತ್ತು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡಿನ ಚಿತ್ರೀಕರಣ ಬಾಕಿ ಇದೆ ಎಂದರು.
ನಮ್ಮ ಸಂಸ್ಥೆಯಿಂದ ಶಿವರಾಜಕುಮಾರ್ ಅವರ ಚಿತ್ರ ಬಂದು ಬಹಳ ವರ್ಷಗಳಾಗಿತ್ತು. ಪ್ರಭುದೇವ ಅವರ ಚಿತ್ರ ನಿರ್ಮಾಣ ಮಾಡುವುದು ನನ್ನ ಕನಸಾಗಿತ್ತು. ಈ ಇಬ್ಬರು ನಟರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಯೋಗರಾಜ್ ಭಟ್ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಹರಿಕೃಷ್ಣ ಸುಮಧುರ ಹಾಡುಗಳನ್ನು ನೀಡುತ್ತಿದ್ದಾರೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದರು.
ರಾಕ್ ಲೈನ್ ಪ್ರೊಡಕ್ಷನ್ಸ್ ನನ್ನ ಕುಟುಂಬವಿದಂತೆ. ಇನ್ನು ಯೋಗರಾಜ್ ಭಟ್ ಅವರ ಚಿತ್ರಗಳು ನನಗೆ ಇಷ್ಟ. ಅವರ ಎಷ್ಟೋ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿದ್ದೇನೆ. ಅವರ ನಿರ್ದೇಶನದಲ್ಲಿ ನಟಿಸುತ್ತಿರುವುದು ಸಂತೋಷ. ಗೆಳೆಯ ಪ್ರಭುದೇವ ಹಾಗೂ ನಾನು ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದೇವೆ. ಈ ಚಿತ್ರದಲ್ಲೂ ನಾವಿಬ್ಬರು ಸ್ನೇಹಿತರಾಗಿಯೇ ನಟಿಸುತ್ತಿದ್ದೇವೆ ಎಂದು ಶಿವರಾಜಕುಮಾರ್ ತಿಳಿಸಿದರು.
ಶಿವರಾಜಕುಮಾರ್ ಅವರ ಎನರ್ಜಿ ನೋಡಿದರೆ ಖುಷಿಯಾಗುತ್ತದೆ. ಅವರ ಜೊತೆ ನಟಿಸುತ್ತಿರುವುದು ಹೆಚ್ಚಿನ ಸಂತಸ ತಂದಿದೆ. ಯೋಗರಾಜ್ ಭಟ್ ಅವರ ನಿರ್ದೇಶನ ಹಾಗೂ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದರು ಪ್ರಭುದೇವ.
ನಾಯಕಿಯರಾದ ನಿಶ್ವಿಕಾ ನಾಯ್ಡು, ಪ್ರಿಯ ಆನಂದ್, ಹಿರಿಯ ಕಲಾವಿದರಾದ ಮುಖ್ಯ ಮಂತ್ರಿ ಚಂದ್ರು, ತನಿಕೆಲ್ಲ ಭರಣಿ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಛಾಯಾಗ್ರಹಣದ ಬಗ್ಗೆ ಸಂತೋಷ್ ರೈ ಪಾತಾಜೆ ಮಾತನಾಡಿದರು.