ಇಕ್ಕಟ್, ಬಡವ ರಾಸ್ಕಲ್ ಸಿನಿಮಾಗಳ ಖ್ಯಾತಿಯ ಪ್ರತಿಭಾನ್ವಿತ ಕಲಾವಿದ ನಾಗಭೂಷಣ್ ಅವರಿಗಿಂದು ಜನ್ಮದಿನದ ಸಂಭ್ರಮ. ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಟಗರು ಪಲ್ಯ ಸಿನಿಮಾ ಬಳಗದಿಂದ ವಿಶೇಷ ಉಡುಗೊರೆ ಸಿಕ್ಕಿದೆ. ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸುತ್ತಿರುವ ಮೂರನೇ ಚಿತ್ರ ಟೈಟಲ್ ಟ್ರ್ಯಾಕ್ ನಾಯಕ ನಾಗಭೂಷಣ್ ಬರ್ತ್ ಡೇ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಧನಂಜಯ್ ಕ್ಯಾಚಿ ಮ್ಯಾಚಿ ಪದಗಳನ್ನು ಸೇರಿಸಿ ಸಾಹಿತ್ಯ ರಚಿಸಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಹಾಡಿಗೆ ಕಂಠ ಕುಣಿಸಿದ್ದಾರೆ.

ಯುವ ನಿರ್ದೇಶಕ ಉಮೇಶ್ ಕೆ ಕೃಪಾ ನಿರ್ದೇಶನದ ಚೊಚ್ಚಲ ಚಿತ್ರವಾಗಿರುವ ಟಗರು ಪಲ್ಯ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಾಗಭೂಷಣ್ ನಾಯಕನಾಗಿ ನಟಿಸಿದ್ದಾರೆ. ಮಂಡ್ಯ ಹಳ್ಳಿಗಳಲ್ಲಿ ನಡೆಯುವ ಆಚರಣೆ ಸುತ್ತಾ ಇಡೀ ಸಿನಿಮಾವನ್ನು ನಿರ್ದೇಶಕ ಉಮೇಶ್ ಕೆ. ಕೃಪಾ ಕಟ್ಟಿಕೊಟ್ಟಿದ್ದಾರೆ. ಹಿರಿಯ ಕಲಾವಿದರಾದ ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗವಿರುವ “ಟಗರು ಪಲ್ಯ” ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಎಸ್ ಕೆ ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಟೈಟಲ್ ಟ್ರ್ಯಾಕ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.
