Somu Sound Engineer 3\5
ಈ ವಾರ ಬಿಡುಗಡೆಯಾಗಿರುವ ʻಸೋಮು ಸೌಂಡ್ ಇಂಜಿನಿಯರ್ʼ somu sound engineer review ಸಿನಿಮಾದ ಬಗ್ಗೆ ಕ್ಯೂರಿಯಾಸಿಟಿ ಹುಟ್ಟಲು ಸಾಕಷ್ಟು ಕಾರಣಗಳಿದ್ದವು. ದುನಿಯಾ ಸೂರಿ ಮತ್ತು ದುನಿಯಾ ವಿಜಯ್ ಅವರ ಜೊತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅಭಿ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದದ್ದು. ಸಲಗ ಸಿನಿಮಾದಿಂದ ಪ್ರಖ್ಯಾತಿ ಪಡೆದಿದ್ದ ಕೆಂಡ ಈ ಚಿತ್ರದ ಮುಖಾಂತ ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿರುವುದು. ಉತ್ತರ ಕರ್ನಾಟಕದ ನೆಲದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ ಅಂತಾ ಸ್ವತಃ ಚಿತ್ರ ತಂಡ ಹೇಳಿಕೊಂಡಿದ್ದು. ಎಲ್ಲದಕ್ಕಿಂತಾ ಮುಖ್ಯವಾಗಿ ಮುತ್ತಿನಂಥಾ ಮಾತುಗಳನ್ನು ಪೋಣಿಸುವ ಮಾಸ್ತಿ ಸಂಭಾಷಣೆ, ನೈಜವಾಗಿ ಚಿತ್ರೀಕರಿಸುವ ಕ್ರಿಯಾಶೀಲ ಛಾಯಾಗ್ರಾಹಕ ಶಿವು ಸೇನಾ ಛಾಯಾಗ್ರಹಣ ಮತ್ತು ಚರಣ್ ರಾಜ್ ಅವರ ಸಂಗೀತ – ಮೊದಲ ಸಿನಿಮಾಗೇ ಇಷ್ಟು ಬಲಶಾಲಿ ತಂಡವನ್ನು ಕಟ್ಟಿಕೊಂಡಿದ್ದ ಅಭಿ ಬಗ್ಗೆ ಕನ್ನಡ ಚಿತ್ರರಂಗದ ವಲಯದಲ್ಲಿ ವಿಪರೀತ ನಿರೀಕ್ಷೆಯಿತ್ತು. ಆ ಭರವಸೆಯನ್ನು ಅಭಿ ಎನ್ನುವ ಈ ನವನಿರ್ದೇಶಕ ಉಳಿಸಿಕೊಂಡರಾ ಇಲ್ಲವಾ ಅನ್ನೋದು ಈಗ ಉಳಿದಿರುವ ಪ್ರಶ್ನೆ!
ಮದುವೆ ಬಯಸ್ಸಿಗೆ ಬಂದ ಹುಡುಗ. ಮಾವನ ಮಗಳಿಗೆ ಎಳವೆಯಿಂದಲೂ ಸೋಮನ ಕಡೆಗೇ ಸೆಳೆತ. ಅಪ್ಪ ಊರಿಡೀ ʻದೇವ್ರಂಥಾ ಮನ್ಷʼ ಅನಿಸಿಕೊಂಡವರು. ಅಕ್ಕನಿಗೂ ಮದುವೆ ನಿಕ್ಕಿಯಾಗಿರುತ್ತದೆ. ಅಮ್ಮನಿಗೆ ಮಗನೆಂದರೆ ತುಂಬಾನೇ ಪ್ರೀತಿ. ಸೋಮು ಕೂಡಾ ದುಷ್ಟನಲ್ಲ, ಕೇಡುಗನಲ್ಲ. ಆದರೆ, ಜಗತ್ತಿಗೆ ಹೊಂದಿಕೊಳ್ಳುವ ಬದಲು, ಆ ಜಗತ್ತೇ ನನಗೆ ಹೊಂದಿಕೊಳ್ಳಲಿ ಅಂದುಕೊಳ್ಳುವ ಪೈಕಿ. ಬ್ಯಾಡ ಬ್ಯಾಡ ಅಂದರೂ ತಂಟೆ, ತಕರಾರುಗಳು ಇವನನ್ನು ಹುಡುಕಿಕೊಂಡು ಬರುತ್ತವೆ. ಹಾಗಂತ ಕಾಲು ಕೆರೆದುಕೊಂಡು ಕ್ಯಾತೆ ತೆಗೆದುಕೊಂಡುಬಂದವರನ್ನು ಸುಮ್ಮನೇ ಕಳಿಸೋ ಸಪ್ಪೆ ಗಿರಾಕಿಯಲ್ಲ ಈ ಸೋಮು. ಬಡಿದಾಟಕ್ಕೆ ನಿಂತರೆ ಮುಖಮೂತಿ ನೋಡದೆ ಗುಮ್ಮುವ ಪಂಟ್ರು.
ಇಂಥ ಸೋಮನ ಬದುಕಿನಲ್ಲಿ ಅದೊಂದು ದುರ್ಘಟನೆ ನಡೆದುಹೋಗುತ್ತದೆ. ಅಲ್ಲಿಂದೆಲ್ಲವೂ ಸಮಸ್ಯೆಗಳ ಸರಮಾಲೆ. ಸಾಡೇಸಾತಿ ಹೆಗಲಿಗೇರಿದಂಥಾ ಫೀಲು. ನಿಂತು-ಕುಂತಲ್ಲೆಲ್ಲಾ ಮೆತ್ತಿಕೊಳ್ಳುವ ಆರೋಪಗಳು. ಅವಮಾನ, ಅವಾಂತರಗಳು ಅಷ್ಟದಿಕ್ಕುಗಳಿಂದಲೂ ಅಟಕಾಯಿಸಿಕೊಳ್ಳಲು ಶುರುವಾಗುತ್ತವೆ. ಸೋಮನ ಬಾಳಲ್ಲಿ ಎದುರಾಗುವ ಆ ಕಂಟಕ ಯಾವುದು? ಇದರಿಂದ ಸೋಮು ಹೊರಬರುತ್ತಾನಾ? ಬಯಸಿದ್ದನ್ನೆಲ್ಲಾ ಪಡೆಯುತ್ತಾನಾ? ಅಸಲಿಗೆ ಇವನ ಹೆಸರಿನ ಜೊತೆಗೆ ಸೌಂಡ್ ಇಂಜಿನಿಯರ್ ಎನ್ನುವ ಬಿರುದು ಯಾಕೆ ಬರುತ್ತವೆ ಅನ್ನೋದೆಲ್ಲಾ ಕುತೂಹಲ ಮತ್ತು ಕಾಡುವ ಅಂಶಗಳು.
ಸೀದಾಸಾದಾ ಹುಡುಗನೊಬ್ಬನ ಬದುಕಿನ ಗಾಥೆಯಂತೆ ಸೋಮು ಸೌಂಡ್ ಇಂಜಿನಿಯರ್ ಮೂಡಿಬಂದಿದೆ. ಅಮ್ಮನನ್ನು ನೋಡಿಕೊಳ್ಳದ ಮಗ, ಅಜ್ಜಿಯನ್ನು ಹುಡುಕೊಕೊಂಡುಬರುವ ಮೊಮ್ಮಗನ ಉಪಕಥೆ ಹೆಚ್ಚು ಇಷ್ಟವಾಗುತ್ತದೆ. ಒಂದು ಊರು, ಅಲ್ಲಿನ ಜನ, ಅದರಲ್ಲಿ ಒಬ್ಬ ಹುಡುಗನ ಕಥೆಯನ್ನು ನಾಜೂಕಾಗಿ ಹೆಕ್ಕಿರುವ ನಿರ್ದೇಶಕ ಅಭಿ, ಅದನ್ನು ಜಾಣ್ಮೆಯಿಂದ ಕಟ್ಟುವಲ್ಲಿ ಸ್ವಲ್ಪ ಎಡವಿದ್ದಾರಾ? ಅನ್ನಿಸುತ್ತದೆ. ಮೊದಲ ಭಾಗ ಸುಖಾಸುಮ್ಮನೇ ದೃಶ್ಯಗಳು ಜರುಗುತ್ತಿರುತ್ತವೆ. ದ್ವಿದೀಯ ಭಾಗಕ್ಕೆ ಜಾರಿದ ನಂತರವಷ್ಟೇ ಕಥೆ ಟೇಕಾಫ್ ಆಗೋದು. ತಾನು ಬೆಳೆದು ಬಂದ, ಕಂಡುಂಡ ಎಲ್ಲ ಘಟನಾವಳಿಗಳನ್ನೂ ಅಭಿ ಒಂದೇ ಹಿಡಿತಕ್ಕೆ ಹಿಡಿಯುವ ಪ್ರಯತ್ನ ಮಾಡಿದರಾ? ಎಲ್ಲವನ್ನೂ ಹೇಳಿಬಿಡುವ ಧಾವಂತದಲ್ಲಿ ಸಿನಿಮಾದ ಗ್ರಾಫ್ ಮರೆತುಬಿಟ್ಟರಾ? ಬಹುತೇಕ ಚೊಚ್ಚಲ ಸಿನಿಮಾ ನಿರ್ದೇಶಕರು ಮಾಡುವ ಯಡವಟ್ಟನ್ನೇ ಅಭಿ ಕೂಡಾ ರಿಪೀಟ್ ಮಾಡಿದರಾ? ಸೋಮು ಸೌಂಡ್ ಇಂಜಿನಿಯರ್ ನೋಡಿದಾಗ ಹೀಗನ್ನಿಸುತ್ತದೆ.
ಹಾಗಂತ, ಇದು ಸರಾಸರಿಗಿಂತಾ ಕೆಳಗಿನ ಸಿನಿಮಾ ಅಂತಲೂ ಅನ್ನಲು ಸಾಧ್ಯವಿಲ್ಲ. ಅಭಿಯ ತಪ್ಪುಗಳನ್ನೆಲ್ಲಾ ಮುಚ್ಚುವಂತಾ ಸಂಭಾಷಣೆ, ಮನಸ್ಸಿನಾಳಕ್ಕಿಳಿಯುವ ಹಿನ್ನೆಲೆ ಸಂಗೀತ ಮತ್ತು ಎಲ್ಲವೂ ನಿಜಕ್ಕೂ ಕಣ್ಣೆದುರೇ ಘಟಿಸುತ್ತಿವೆ ಅನ್ನುವಂತಿರುವ ಸಿನಿಮಾಟೋಗ್ರಫಿ ಈ ಚಿತ್ರದಲ್ಲಿದೆ.
ಹೀರೋ ಶ್ರೇಷ್ಠ (ಕೆಂಡ) ಹೆಚ್ಚು ನಟಿಸಲು ಪ್ರಯತ್ನಿಸದೇ ಸಹಜವಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿ ನಿವಿಶ್ಕಾ ಪಾಟೀಲ್ ನಿಜಕ್ಕೂ ಇಷ್ಟವಾಗುತ್ತಾಳೆ. ಗಿರೀಶ್ ಜತ್ತಿಯವರಂತಾ ಅದ್ಭುತ ನಟನಿಗೆ ಇಲ್ಲಿ ಹೇಳಿಮಾಡಿಸಿದ ಪಾತ್ರ ಸಿಕ್ಕಿದೆ. ಅಪೂರ್ವ ಕೂಡಾ ಸೀರಿಯಲ್ಲಿಂದ ಹೊರಗೆ ಬಂದು ನಟಿಸಿದ್ದಾರೆ. ಸ್ಪಂದನಾ ಪ್ರಸಾದ್-ಶಿವು ಪಾತ್ರನಿರ್ವಹಣೆ ಕೂಡಾ ಸಹಜ. ಕೆಂಡನ ಸ್ನೇಹಿತನ ಪಾತ್ರದಲ್ಲಿ ನಟಿಸಿರುವ ಇಬ್ಬರು ಹುಡುಗರ ಅಭಿನಯ ಕೂಡಾ ಚೆಂದ. ಅಷ್ಟು ಚೆಂದಗೆ ನಟಿಸಿರುವ ಯಶ್ ಶೆಟ್ಟಿಯವರ ಪಾತ್ರವನ್ನು ಇನ್ನಷ್ಟು ಬಳಸಿಕೊಳ್ಳಬಹುದಿತ್ತು. ಚರಣ್ ರಾಜ್ ಹಿನ್ನೆಲೆ ಸಂಗೀತ, ಶಿವುಸೇನಾ ಛಾಯಾಗ್ರಹಣದ ಜೊತಗೆ ಮಾಸ್ತಿಯವರು ತೂಕದ ಮಾತುಗಳನ್ನು ಬೆರೆಸೊ ಸೌಂಡ್ ಇಂಜಿನಿಯರ್ ಸೋಮೂನ ಸತ್ವ ಹೆಚ್ಚಿಸಿದ್ದಾರೆ