ಮಹಿರ ಸಿನಿಮಾ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಗಮನಸೆಳೆದವರು ಮಹೇಶ್ ಗೌಡ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ ಮಾಡಿ ಪ್ರೇಕ್ಷಕಕುಲ ರಂಜಿಸಿದ್ದ ಮಹೇಶ್ ಈ ಬಾರಿ ವಿಭಿನ್ನ ಬಗೆಯ ಕಥಾಹಂದರದೊಂದಿಗೆ ಪ್ರತ್ಯಕ್ಷರಾಗಿದ್ದಾರೆ. ತೊನ್ನು (ವಿಟಿಲಿಗೋ) ಸಮಸ್ಯೆಯನ್ನು ಪ್ರಧಾನವಾಗಿಟ್ಟುಕೊಂಡು ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಎಂಬ ಚಿತ್ರ ನಿರ್ದೇಶಿಸಿ, ನಟಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಸಿದ್ದಿ ವಿನಾಯಕ ದೇಗುಲದಲ್ಲಿ ನೆರವೇರಿದೆ. ವಿಟಿಲಿಗೋ ಸಮಸ್ಯೆ ಇರುವ ಅನುಷಾ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದು,
ಮತ್ತೋರ್ವ ವಿಟಿಲಿಗೋ ರವಿ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ನಿರ್ದೇಶನ ಮಹೇಶ್ ಗೌಡ ತಮ್ಮಲ್ಲಿರುವ ವಿಟಿಲಿಗೋ ಸಮಸ್ಯೆಗೆ ಕಾಮಿಡಿ ಹಾಗೂ ರೋಮ್ಯಾಂಟಿಕ್ ಟಚ್ ಕೊಟ್ಟು ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಕಥೆ ರೂಪಿಸಿದ್ದಾರೆ. ಹೊನ್ನುಡಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರೋ, ಮಹೇಶ್ ಗೌಡ ನಿರ್ದೇಶನದ ಸಿನಿಮಾ `ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಶಿವ ಎಂಬ ಪಾತ್ರಕ್ಕೆ ನಿರ್ದೇಶಕ ಮಹೇಶ್ ಜೀವ ತುಂಬಿದ್ದಾರೆ. ಇನ್ನು ಮಹೇಶ್‌ಗೆ ಜೋಡಿಯಾಗಿ ಅಗ್ನಿಸಾಕ್ಷಿ ಹಾಗೂ ಸೀತಾರಾಮ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಹಳ್ಳಿ ಹುಡುಗಿಯಾಗಿ ಕವಿತಾ ಪಾತ್ರದಲ್ಲಿ ನಟಿಸಿದ್ದಾರೆ.
ಶಿವನ ಸಮಸ್ಯೆ ಗೊತ್ತಿದ್ರು ಬಾಳ ಸಂಗಾತಿಯಾಗಿ ಕವಿತಾ ಬರುತ್ತಾಳೆ. ಸಮಸ್ಯೆ ಗೊತ್ತಿದ್ರು ಕವಿತಾ ತನ್ನನ್ನ ಯಾಕೆ ಮದುವೆ ಆಗಿದ್ದಾಳೆ ಅನ್ನೋ ಗೊಂದಲದಲ್ಲಿರೋ ನಾಯಕನ ಕಥೆ. ಈ ಗೊಂದಲದ ಮಧ್ಯೆಯೇ ಸಾಗುವ ಒಂದು ಮುದ್ದಾದ ಲವ್ ಸ್ಟೋರಿ ಬಿಳಿ ಚುಕ್ಕಿ ಹಳ್ಳಿ ಹಕ್ಕಿ. ವರಮಹಾಲಕ್ಷ್ಮೀ ಆಶೀರ್ವಾದದೊಂದಿಗೆ ಇಂದಿನಿಂದ ಚಿತ್ರತಂಡ ಶೂಟಿಂಗ್ ಚಾಲು ಮಾಡಿದೆ. ಕಿರಣ್ ಸಿಎಚ್ಎಂ ಕ್ಯಾಮೆರಾ, ರಿಯೋ ಆಂಟೋನಿ ಸಂಗೀತ ಸಿನಿಮಾಕ್ಕಿದೆ. ಕೊಪ್ಪ, ಶೃಂಗೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.