ಪ್ರೀತಿಯ ಚೌಕಟ್ಟಿನೊಳಗೆ ಸಂಬಂಧಗಳ ಪಯಣ..ಪಯಣದ ದಾರಿಯಲ್ಲಿ ಬದುಕಿನ ಮೌಲ್ಯಗಳ ಅನಾವರಣ- ಹೀಗೆಂದವರು ನಿರ್ದೇಶಕ ಯತಿರಾಜ್ . ಪತ್ರಕರ್ತನಾಗಿ, ನಟನಾಗಿ ಇದೀಗ ನಿರ್ದೇಶಕನಾಗಿ ಹೆಚ್ಚು ಚಾಲ್ತಿಯಲ್ಲಿರುವ ಅವರು ತಮ್ಮ ಹೊಸ ಚಿತ್ರ “ಸಂಜು” ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
‘ಮೈಸೂರಿನ ಸಂತೋಷ್ ಡಿ ಎಂ ನಿರ್ಮಿಸುತ್ತಿರುವ “ಸಂಜು” ಅಗಮ್ಯ ಪಯಣಿಗ.. ಇದೇ ತಿಂಗಳ 14 ರಿಂದ ಚಿತ್ರೀಕರಣ ಆರಂಭಿಸಲಿದೆ. ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳ ತಲ್ಲಣಗಳಿವೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ತತ್‌ಕ್ಷಣದ ನಿರ್ಧಾರಗಳು ನಮ್ಮ ಬದುಕಿನಲ್ಲಿ ಎಷ್ಟೆಲ್ಲಾ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಮಡಿಕೇರಿ ಮತ್ತು ವಿರಾಜಪೇಟೆ ಸುತ್ತಮುತ್ತಲಿನ ಹಸಿರಿನ ಪರಿಸರದಲ್ಲಿ ಕಟ್ಟಿಕೊಡುವ ಪ್ರಯತ್ನ . ಅದಕ್ಕಾಗಿ ಮೂರ್ನಾಡುವಿನಲ್ಲಿ ಬಸ್ ಸ್ಟಾಪ್ ಮತ್ತು ಟೀ ಶಾಪಿನ ಸೆಟ್ ಕೂಡ ಹಾಕಲಾಗುತ್ತಿದೆ ಎಂದು ಚಿತ್ರದ ಕುರಿತು ಯತಿರಾಜ್ ಹೇಳಿದರು.
ಇನ್ನೂ ಚಿತ್ರದ ನಾಯಕನಾಗಿ ಮನ್ವೀತ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ‘ಅ್ಯಂಗರ್’ ಅನ್ನುವ ಸಿನಿಮಾದಲ್ಲಿ ನಟಿಸಿದ್ದ ಅವರಿಗೆ ‘ಸಂಜು’ ಎರಡನೇ ಚಿತ್ರ. ರಂಗಭೂಮಿಯ ನಂಟಿದ್ದರೂ ಪಾತ್ರದ ಪರಕಾಯ ಪ್ರವೇಶ ಪಡೆಯಲು ನಿರ್ದೇಶಕ ಜೊತೆಗೆ ಸತತ ತಾಲೀಮು ನಡೆಸಲಾಗುತ್ತಿದೆ ಎಂಬ ಮಾಹಿತಿ ನೀಡಿದರು. ಆರಂಭದಲ್ಲಿ ನಾಟಕವೊಂದರ ಡೈಲಾಗ್ ಮೂಲಕ ವೇದಿಕೆ ಏರಿದ ಮನ್ವೀತ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ನಾಯಕಿಯಾಗಿ ನಟಿಸುತ್ತಿರುವ ರೇಖಾದಾಸ್ ಪುತ್ರಿ ಶ್ರಾವ್ಯ ‘ ಚಿತ್ರದಲ್ಲಿ ಸರಸ್ವತಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ .ಮೊದಲ ಹದಿನೈದು ದೃಶ್ಯಗಳಲ್ಲಿ ನನಗೆ ಮಾತುಗಳಿಲ್ಲ. ಕೇವಲ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಬೇಕಿದೆ. ಇದೊಂಥರ ವಿಭಿನ್ನ ಪ್ರಯೋಗ ‘ ಎಂದು ತಮ್ಮ ಪಾತ್ರದ ಕುರಿತು ಹೇಳಿಕೊಂಡರು.
ನಾಯಕನ ತಾಯಿಯಾಗಿ ಸಂಗೀತಾ, ನಾಯಕಿಯ ತಂದೆಯಾಗಿ ಬಲರಾಜವಾಡಿ ಹಾಗೂ ಕಾಮಿಡಿ ಕಿಲಾಡಿಗಳು ಸಂತು, ಕುರಿ ರಂಗ, ಬೌ ಬೌ ಜಯರಾಮ್, ಶಂಕರ್ ಭಟ್, ಕಾತ್ಯಾಯಿನಿ, ಮಿಥಾಲಿ, ಪ್ರಕಾಶ್ ಶಣಯ್, ಚೇತನ್ ರಾಜ್, ಮಂಜು ಕವಿ, ನಾಗರತ್ನ, ಫ್ರೆಂಚ್ ಬಿರಿಯಾನಿ,
ಫ್ರೆಂಚ್ ಬಿರಿಯಾನಿ ಖ್ಯಾತಿಯ ಜೂ.ಯೋಗಿಬಾಬು ಮಹಂತೇಶ್ ಸೇರಿದಂತೆ ಹಲವಾರು ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಥ್ರಿಲ್ಲರ್ ಮಂಜು ಎರಡು ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡುತ್ತಿದ್ದಾರೆ.
ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ‘ ಪ್ರೇಮ ಗೀತೆಯೊಂದನ್ನು ಜನಪದ ಶೈಲಿಯಲ್ಲಿ ಹೇಳುವ ಪ್ರಯತ್ನ ನಡೆಯುತ್ತಿದೆ’ ಎಂದರೆ, ಛಾಯಾಗ್ರಾಹಕ ವಿದ್ಯಾನಾಗೇಶ್ ನೆರೆದಿದ್ದವರ ಆಶೀರ್ವಾದ ಬೇಡಿದರು. ನಿರ್ಮಾಪಕರ ಪರವಾಗಿ ವೇದಿಕೆಯಲ್ಲಿದ್ದ ಅನಿಲ್ ಮತ್ತು ಪ್ರದೀಪ್ ‘ ನಿರ್ದೇಶಕರು ಹೇಳಿದ್ದನ್ನು ಕೊಡುವುದೇ ನಮ್ಮ ಕರ್ತವ್ಯ’ ಎಂದರು.