ನಮ್ಮ ಹೈಕ್ಳು ಚಿತ್ರ ಲಾಂಛನದಲ್ಲಿ ಸ್ನೇಹಲತ ಅವರು ನಿರ್ಮಿಸಿರುವ
” ರಕ್ಕಂ” ಚಿತ್ರ ಜುಲೈ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೆ.ಸೆಂದಿಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ನಮ್ಮ ತಂಡದಲ್ಲಿ ಹೆಚ್ಚಿನವರಿಗೆ ಇದು ಮೊದಲ ಚಿತ್ರವಿರಬಹುದು, ಆದರೆ ಎಲ್ಲರಿಗೂ ರಂಗಭೂಮಿ, ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವವಿದೆ. ನಾನು ಮೂಲತಃ ರಂಗಭೂಮಿ ಕಲಾವಿದ. ಎನ್ ಎಸ್ ಡಿ ಯಲ್ಲಿ ತರಬೇತಿ ಪಡೆದುಕೊಂಡಿದ್ದೇನೆ. ಪುನೀತ್ ರಾಜ್‍ಕುಮಾರ್ ಅವರು ನಡೆಸಿಕೊಡುತ್ತಿದ್ದ “ಕನ್ನಡದ ಕೋಟ್ಯಾಧಿಪತಿ” ಸೇರಿದಂತೆ ಅನೇಕ ರಿಯಾಲಿಟಿ ಶೋಗಳಿಗೆ ಕೆಲಸ ಮಾಡಿದ್ದೇನೆ. ಈಗ ಹಂಸಲೇಖ ಅವರ ಬಳಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದು ಮೊದಲ ನಿರ್ದೇಶನದ ಚಿತ್ರ. ಕೋವಿಡ್ ಪೂರ್ವದಲ್ಲಿ ನಿರ್ಮಾಣವಾದ ಚಿತ್ರವಿದು. ಪ್ರಧಾನಮಂತ್ರಿಗಳು ಡಿಮಾನಿಟೇಸೇಶನ್ ಮಾಡಿದ ಸಮಯದಲ್ಲಿ ಹುಟ್ಡಿದ ಕಥೆ ಇದು. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದರೂ ತಪ್ಪಾಗಲಾರದು. “ರಕ್ಕಂ” ಎಂದರೆ ಹಣದ ಗಂಟು ಎಂಬ ಅರ್ಥವಿದೆ.
ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆದಿದೆ. ರಣಧೀರ್ ಗೌಡ ನಾಯಕನಾಗಿ ನಟಿಸಿದ್ದಾರೆ. ಅಮೃತ ನಾಯರ್ ನಾಯಕಿ. ಹಿರಿಯ ಕಲಾವಿದ ನಂಜಪ್ಪ ಬೆನಕ, ಹಿರಿಯ ನಿರ್ದೇಶಕ ಬಿ.ರಾಮಮೂರ್ತಿ ಅವರು ಸೇರಿದಂತೆ ಸಾಕಷ್ಟು ಜನ ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ಇದೇ 29 ರಂದು ನಮ್ಮ ಚಿತ್ರ ತೆರೆಗೆ ಬರಲಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ ಸೆಂದಿಲ್. ನಿರ್ದೇಶಕರು ಹೇಳಿದ ಕಥೆ ನನಗೆ ತುಂಬಾ ಹಿಡಿಸಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ ಎಂದರು ನಿರ್ಮಾಪಕಿ ಸ್ನೇಹಲತ
ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ಹಾಗೂ ರಂಗಾಯಣದಲ್ಲಿ ಅಭಿನಯ ಕಲಿತಿದ್ದೀನಿ. ಸಹಾಯಕ ನಿರ್ದೇಶಕನಾಗೂ ದುಡಿದಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ರಂಗ ಎಂಬುದು ನನ್ನ ಪಾತ್ರದ ಹೆಸರು. ಎರಡು ಶೇಡ್ ಗಳಲ್ಲಿ ಅಭಿನಯಿಸಿದ್ದೇನೆ. ಮೊದಲು ಹಳ್ಳಿಯವನಾಗಿ ನಂತರ ಪಟ್ಟಣವಾಸಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಾಯಕ ರಣಧೀರ್ ಗೌಡ.
ಚಿತ್ರದಲ್ಲಿ ನಟಿಸಿರುವ ಹಿರಿಯ ಕಲಾವಿದ ನಂಜಪ್ಪ ಬೆನಕ, ನಿರ್ದೇಶಕ ಬಿ.ರಾಮಮೂರ್ತಿ, ನಟರಾದ ವಿನಯ್ ಪಾಂಡವಪುರ, ದಯಾನಂದ್,
ಸಹ ನಿರ್ದೇಶಕ ಗೋಪಾಲ್, ಛಾಯಾಗ್ರಾಹಕ ಶ್ಯಾಮ್, ಸಂಗೀತ ನಿರ್ದೇಶಕ ಶ್ರೀವತ್ಸ, ಗಾಯಕ ರವೀಂದ್ರ ಸೊರಗಾವಿ, ನೃತ್ಯ ನಿರ್ದೇಶಕರಾದ, ಚಾಮರಾಜ್, ಅರುಣ್ ಹಾಗೂ ಕಾರ್ಯಕಾರಿ ನಿರ್ಮಾಪಕ ಸಂದೇಶ್ “ರಕ್ಕಂ” ಚಿತ್ರದ ಬಗ್ಗೆ ಮಾತನಾಡಿದರು. ನಿರ್ಮಾಪಕ ಸಂಜಯ್ ಬಾಬು, ನಿರ್ದೇಶಕ ಮಾ ಚಂದ್ರು
ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.