ಕ್ರೀಡಾ ಕ್ಷೇತ್ರದಲ್ಲಿ ಭರ್ಜರಿ ಸಾಧನೆ ಮಾಡಿರುವ ಎ.ವಿ.ರವಿ, ಕನ್ನಡ ಚಿತ್ರರಂಗದಲ್ಲಿ ಜಿಮ್ ರವಿ ಎಂದೇ ಪರಿಚಿತ.
ಪ್ರಸ್ತುತ ಜಿಮ್ ರವಿ ನಾಯಕರಾಗಿ ನಟಿಸಿರುವ “ಪುರುಷೋತ್ತಮ” ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಯಶಸ್ವಿ 6 ನೇ ವಾರ ಪೂರೈಸಿ 7ನೇ ವಾರದತ್ತ ದಾಪುಗಾಲು ಹಾಕಿದೆ. ಕೊರೋನ ನಂತರ ಹೊಸ ನಟನೊಬ್ಬನ ಚಿತ್ರಕ್ಕೆ ಇಷ್ಟು ಒಳ್ಳೆಯ ಪ್ರತಿಕ್ರಿಯೆ ದೊರಕುತ್ತಿರುವುದು ಇದೇ ಮೊದಲು.
ಕ್ರೀಡಾ ರಂಗದಲ್ಲಿ ಈವರೆಗೂ ಮುನ್ನೂರಕ್ಕೂ ಹೆಚ್ಚು ಚಿನ್ನದ ಪದಕ ಪಡೆದಿರುವ ಜಿಮ್ ರವಿ, ಬಾಡಿ ಬಿಲ್ಡಿಂಗ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ ಹಾಗೂ ಭಾರತ ತಂಡದ ಕೋಚ್ ಆಗೂ ಕಾರ್ಯ ನಿರ್ವಹಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟರಿಗೆ ಜಿಮ್ ರವಿ ಟ್ರೈನರ್ ಕೂಡ ಆಗಿ ಹೆಸರು ಮಾಡಿದವರು.
ದಕ್ಷಿಣ ಭಾರತದ ಮೇರು ಕಲಾವಿದರೊಂದಿಗೆ ಕಾರ್ಯ ನಿರ್ವಹಿಸಿರುವ ಜಿಮ್ ರವಿ, ಕನ್ನಡ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ 150ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ನಾಯಕರಾಗಿ ಇದು ಮೊದಲ ಚಿತ್ರ.
ಚಿತ್ರ ನೋಡಿದವರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.
ಅದರಲ್ಲೂ ಮಹಿಳಾ ಪ್ರೇಕ್ಷಕರಿಗೆ ಮನಸ್ಸಿಗೆ ತುಂಬಾ ಹತ್ತಿರವಾಗಿದೆ ಈ ಚಿತ್ರ. ಗಂಡ-ಹೆಂಡತಿ ಹೇಗೆ ಜೀವನ ನಡೆಸಬೇಕು ಹಾಗೂ ಡೈವರ್ಸ್ ಕುರಿತು ಈ ಚಿತ್ರದಲ್ಲಿ ಬಂದಿರುವ ಸಂದೇಶ ಹೆಂಗಳೆಯರ ಮನ ಗೆದ್ದಿದೆ. ಉತ್ತಮ ಕಥೆ ಆಯ್ಕೆ ಮಾಡಿಕೊಂಡಿರುವುದಕ್ಕೆ ಜನ ಜಿಮ್ ರವಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಇನ್ನೂ ಖುಷಿಯ ವಿಚಾರವೆಂದರೆ, ಚಿತ್ರ ನೋಡಿ ಸಂತೋಷಪಟ್ಟಿರುವ ಕಲರ್ಸ್ ವಾಹಿನಿ, ವೂಟ್ ಹಾಗೂ ಕಲರ್ಸ್ ಕನ್ನಡಕ್ಕಾಗಿ ಭಾರೀ ಮೊತ್ತಕ್ಕೆ ಈ ಚಿತ್ರದ ಡಿಜಿಟಲ್ ಹಕ್ಕನ್ನು ಖರೀದಿಸಿದ್ದಾರೆ. ಹೊಸ ನಟನೊಬ್ಬನ ಚಿತ್ರಕ್ಕೆ ಇಂತಹ ಮೊತ್ತ ದೊರಕಿರುವುದು ಇದೇ ಪ್ರಥಮಬಾರಿ ಎನ್ನುತ್ತಾರೆ ಜಿಮ್ ರವಿ.
ಜಿಮ್ ರವಿ ನಾಯಕರಾಗಷ್ಟೇ ಅಲ್ಲದೆ, ಈ ಚಿತ್ರದ ನಿರ್ಮಾಪಕರೂ ಹೌದು. ಅಪೂರ್ವ ಈ ಚಿತ್ರದ ನಾಯಕಿ. ಎ.ವಿ.ಹರೀಶ್, ಮೈಸೂರು ಪ್ರಭು, ಕ್ರಿಸ್ಟಿ ಹಿಮಾನುಯಲ್, ಕಿರಣ್, ಶರಣ್, ಅಂಕಿತ ಮೂರ್ತಿ
ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಐವತ್ತನೇ ದಿನದ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು ಜಿಮ್ ರವಿ ತಯಾರಿ ನಡೆಸಿದ್ದಾರೆ. ಕನ್ನಡ, ತೆಲುಗು, ತಮಿಳು ಚಿತ್ರರಂಗದ ಸಾಕಷ್ಟು ಗಣ್ಯರು ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅದೇ ಸಂದರ್ಭದಲ್ಲಿ ಜಿಮ್ ರವಿ ತಮ್ಮ ಮುಂದಿನ ಚಿತ್ರದ ಘೋಷಣೆ ಮಾಡಲಿದ್ದಾರೆ.
ರವಿ ಸ್ ಜಿಮ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ
ವಿಜಯ್ ರಾಮೇಗೌಡ ಈ ಚಿತ್ರ ಅರ್ಪಿಸಿದ್ದಾರೆ. ಅಮರನಾಥ್ ಎಸ್ ವಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ, ಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.