ಕೋತಿ, ನಾಯಿ, ಹಸು, ಹುಲಿ, ಹಾವು, ನೊಣಗಳೆಲ್ಲಾ ತೆರೆ ಮೇಲೆ ರಾರಾಜಿಸಿವೆ. ಈಗ ಮೇಕೆ ಕೂಡಾ ಚಿತ್ರವೊಂದರಲ್ಲಿ ಪ್ರಮುಖ ಪಾತ್ರವಾಗಿ ಕಾಣಿಸಿಕೊಳ್ಳುತ್ತಿದೆ. ಅದೂ ಕನ್ನಡ ಸಿನಿಮಾದಲ್ಲಿ!
ಅದ್ಭುತ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಿರ್ದೇಶಕರ ಪಟ್ಟಿ ದೊಡ್ಡದಿದೆ. ಆ ಪ್ರಮುಖರ ಹೆಸರಲ್ಲಿ ಮುಲಾಜಿಲ್ಲದೇ ಸೇರಿಸಬಹುದಾದ ನಿರ್ದೇಶಕ ಪಿ.ಹೆಚ್. ವಿಶ್ವನಾಥ್.
ಪಂಚಮವೇದ, ಮುಂಜಾನೆಯ ಮಂಜು, ಶ್ರೀಗಂಧ, ರಂಗೋಲಿ, ಅಂಡಮಾನ್ ಥರದ ಚೆಂದದ ಸಿನಿಮಾ ಕೊಟ್ಟವರು ವಿಶ್ವನಾಥ್. ಕನ್ನಡ ಮಾತ್ರವಲ್ಲದೆ, ತಮಿಳು, ತುಳು ಚಿತ್ರಗಳನ್ನೂ ಡೈರೆಕ್ಟ್ ಮಾಡಿದ ವಿಶ್ವನಾಥ್ ಅರುಣೋದಯ ಸಿನಿಮಾದ ನಂತರ ಕನ್ನಡ ಚಿತ್ರರಂಗದಿಂದ ದೂರವೇ ಉಳಿದುಬಿಟ್ಟಿದ್ದರು. ಪಿ.ಹೆಚ್. ವಿಶ್ವನಾಥ್ ಇನ್ನು ಸಿನಿಮಾ ನಿರ್ದೇಶನ ಮಾಡೋದೇ ಇಲ್ಲವೇನೋ ಅಂದುಕೊಂಡು ಎಲ್ಲರೂ ಸುಮ್ಮನಾಗಿದ್ದರು. ಈಗ ವಿಶ್ವನಾಥ್ ಮೈ ಕೊಡವಿಕೊಂಡು ಮತ್ತೆ ಮೇಲೆದಿದ್ದಾರೆ!
ಆಡೇ ನಮ್ ಗಾಡು ಎನ್ನುವ ಸಿನಿಮಾವನ್ನು ಸದ್ದಿಲ್ಲದೇ ರೂಪಿಸಿದ್ದಾರೆ. ರಾಮರಾಮರೇ ಖ್ಯಾತಿಯ ನಟರಾಜ್, ಮಂಜುನಾಥ್ ಜಂಬೆ ಮತ್ತು ಖಾಸಗೀ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಲೇ, ಚಿತ್ರರಂಗದಲ್ಲೂ ಗುರುತಿಸಿಕೊಳ್ಳುತ್ತಿರುವ ಅಜಿತ್ ಬೊಪ್ಪನಹಳ್ಳಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಈಗಾಗಲೇ ಚಿತ್ರೀಕರಣವನ್ನು ಪೂರೈಸಿದೆ. ಮೈಸೂರಿನಲ್ಲಿ ಬಹುತೇಕ ಚಿತ್ರೀಕರಣಗೊಂಡಿರುವ ಆಡೇ ನಮ್ ಗಾಡು ಸಿನಿಮಾಗೆ ಹೊಸ್ಮನೆ ಮೂರ್ತಿ ಕಲಾನಿರ್ದೇಶನ ಮಾಡಿದ್ದಾರೆ. ಹಿರಿಯ ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಮೂರು ಜನ ಪಾತ್ರಧಾರಿಗಳೊಂದಿಗೆ ಮೇಕೆ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರೋದು ಇದರ ವಿಶೇಷ. ಮೂವರು ಯುವಕರ ಜೊತೆ ಸೇರುವ ಒಂದು ಆಡು. ಅದರಿಂದ ಸೃಷ್ಟಿಯಾಗುವ ಘಟನಾವಳಿಗಳ ಸುತ್ತ ಆಡೇ ನಮ್ ಗಾಡು ಚಿತ್ರವನ್ನು ರೂಪಿಸಲಾಗಿದೆ. ತಮಾಷೆಯ ಸಂಗತಿಗಳನ್ನು ಹೇಳುತ್ತಲೇ ತುಂಬಾ ಗಂಭೀರವಾದ ವಿಚಾರವನ್ನೂ ಇದರಲ್ಲಿ ಅನಾವರಣಗೊಳಿಸಿದ್ದಾರಂತೆ. ಅದೇನು ಅನ್ನೋದು ಚಿತ್ರ ತೆರೆಗೆ ಬಂದಮೇಲಷ್ಟೇ ಗೊತ್ತಾಗಲಿದೆ.
ರಾಮರಾಮರೇ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟರಾಜ್ ಪ್ರತಿಭಾವಂತ ನಟ. ಸೀರಿಯಸ್ ಪಾತ್ರಗಳನ್ನು ನಿಭಾಯಿಸಿದ್ದ ನಟ ಈ ಸಲ ಕಾಮಿಡಿ ಜಾನರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಪಿ.ಹೆಚ್. ವಿಶ್ವನಾಥ್ ಥರದ ಅನುಭವೀ ತಂತ್ರಜ್ಞರ ನಿರ್ದೇಶನವೂ ಇರುವುದರಿಂದ ಆಡೇ ನಮ್ ಗಾಡು ಎಲ್ಲರನ್ನೂ ಸೆಳೆಯಬಹುದು!