ಗ್ಲೋಬಲ್ ಸ್ಟಾರ್ ರಾಮ್ ಚರಣ್ ”ವಿ ಮೆಗಾ ಪಿಕ್ಚರ್ಸ್” ಮೂಲಕ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಮೆಗಾ ಸ್ಟಾರ್ ಕುಡಿಗೆ ಗೆಳೆಯ ಯುವಿ ಕ್ರಿಯೇಷನ್ ವಿಕ್ರಮ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ. ಯುವ ಪ್ರತಿಭೆಗಳಿಗೆ ಅವಕಾಶ ನೀಡಲಿದೆಂದು ಪ್ರಾರಂಭಿಸಿರುವ ವಿ ಮೆಗಾ ಪಿಕ್ಚರ್ಸ್ ಜೊತೆ ಅಭಿಷೇಕ್ ಅಗರ್ ವಾಲ್ ಕೈ ಜೋಡಿಸಿದ್ದಾರೆ. ದಿ ಕಾಶ್ಮೀರಿ ಫೈಲ್ಸ್, ಕಾರ್ತಿಕೇಯ ಸಿನಿಮಾದಂತಹ ಪ್ಯಾನ್ ಇಂಡಿಯಾ ಹಿಟ್ ಸಿನಿಮಾ ಕೊಟ್ಟಿರುವ ಅಭಿಷೇಕ್ ಅಗರ್ ವಾಲ್ ಆರ್ಟ್ ಬ್ಯಾನರ್ ಹಾಗೂ ರಾಮ್ ಚರಣ್ ಸಾರಥ್ಯದ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ನಿರ್ಮಾಣಕ್ಕಿಳಿದಿವೆ.
ಈ ಎರಡು ಸಂಸ್ಥೆಗಳ ಚೊಚ್ಚಲ ಪ್ಯಾನ್ ಇಂಡಿಯಾ ಚಿತ್ರ ಯಾವುದು ಎಂಬ ಕುತೂಹಲಕ್ಕೀಗ ತೆರೆ ಬಿದ್ದಿದೆ. ವಿ ಮೆಗಾ ಪಿಕ್ಚರ್ಸ್ ಹಾಗೂ ಅಭಿಷೇಕ್ ಅಗರ್ ವಾಲ್ ಆರ್ಟ್ ಬ್ಯಾನರ್ ನ ಚೊಚ್ಚಲ ಸಿನಿಮಾ ವೀರ ಸಾವರ್ಕರ್ 140ನೇ ಜನ್ಮೋತ್ಸವದ ಶುಭ ಸಂದರ್ಭದಲ್ಲಿ ಘೋಷಣೆ ಮಾಡಲಾಗಿದೆ. ಪವರ ಪ್ಯಾಕ್ಡ್ ವಿಡಿಯೋ ಮೂಲಕ ರಾಮ್ ತಮ್ಮ ನಿರ್ಮಾಣದ ಚೊಚ್ಚಲ ಪ್ಯಾನ್ ಇಂಡಿಯಾ ಚಿತ್ರ ಯಾವುದು ಎಂಬ ಪ್ರಶ್ನೆಗೆ ಉತ್ತರಕೊಟ್ಟಿದ್ದಾರೆ. ವಿ ಮೆಗಾ ಪಿಕ್ಚರ್ಸ್ ಹಾಗೂ ಅಭಿಷೇಕ್ ಅಗರ್ ವಾಲ್ ಆರ್ಟ್ ಬ್ಯಾನರ್ ಜಂಟಿಯಾಗಿ ದಿ ಇಂಡಿಯನ್ ಹೌಸ್ ಎಂಬ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಾರ್ತಿಕೇಯ, ಕಾರ್ತಿಕೇಯ-೨ ನಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳ ಡೈನಾಮಿಕ್ ಹೀರೋ ನಿಖಿಲ್ ಸಿದ್ದಾರ್ಥ್ ನಾಯಕನಾಗಿ ದಿ ಇಂಡಿಯನ್ ಹೌಸ್ ನಲ್ಲಿ ಬಣ್ಣ ಹಚ್ಚಿದ್ದು, ಬಾಲಿವುಡ್ ದಂತಕಥೆ ಅನುಪಮ್ ಕೇರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವಪ್ರತಿಭೆ ರಾಮ್ ವಂಶಿ ಕೃಷ್ಣ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

ಭಾರತೀಯ ಇತಿಹಾಸದಲ್ಲಿ ಮರೆತುಹೋದ ಅಧ್ಯಾಯ, 1905ರಲ್ಲಿ ನಡೆದ ಲಂಡನ್ ಕ್ರಾಂತಿ ಜೊತೆ ಪ್ರೇಮಕಥೆಯಾಧಾರಿತ ಕಥಾಹಂದರ ಹೊಂದಿರುವ ದಿ ಇಂಡಿಯನ್ ಹೌಸ್ ಸಿನಿಮಾ ಮೂಲಕ ನಿಖಿಲ್ ಮತ್ತೊಂದು ಕಥೆಯನ್ನು ಬೆನ್ನಟ್ಟಿದ್ದಾರೆ. ಸ್ಪೈ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ನಿಖಿಲ್ ಸಿದ್ದಾರ್ಥ್ ಈ ಸಿನಿಮಾ ಮೂಲಕ ಮತ್ತೊಮ್ಮೆ ಮ್ಯಾಜಿಕ್ ಮಾಡುವ ತವಕದಲ್ಲಿದ್ದಾರೆ.