ಅಂಬರೀಶ, ಚಕ್ರವರ್ತಿ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಕಾಣಿಸಿಕೊಂಡು ನಂತರ ಟಕ್ಕರ್ ಚಿತ್ರದ ಮೂಲಕ ನಾಯಕನಟನಾಗಿ ಲಾಂಚ್ ಆದವರು ಮನೋಜ್ ಕುಮಾರ್.
ಟಕ್ಕರ್ ನಂತರ ಮನೋಜ್ ಏನು ಮಾಡುತ್ತಿದ್ದಾರೆ ಅನ್ನೋದು ಎಲ್ಲರ ಪ್ರಶ್ನೆಯಾಗಿತ್ತು. ಈಗ ಇವರು ಮತ್ತೆ ಎರಡು ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಸಕ್ರಿಯರಾಗಲಿದ್ದಾರೆ.
ಮನೋಜ್ ನಟನೆಯ ಹೊಸ ಚಿತ್ರಕ್ಕೆ ʻಧರಣಿʼ ಎಂಬ ಶೀರ್ಷಿಕೆ ಇಡಲಾಗಿದೆ. ಕಳೆದ ಮೂರ್ನಾಲ್ಕು ತಿಂಗಳುಗಳ ಹಿಂದೆಯೇ ʻಧರಣಿʼಯ ಕೆಲಸಗಳು ಆರಂಭಗೊಂಡಿದ್ದು, ಕಥೆ ಕೂಡಾ ಸಿದ್ದಗೊಂಡಿದೆ. ಸದ್ಯ ಚಿತ್ರೀಕರಣಕ್ಕೆ ಬೇಕಾದ ತಯಾರಿ ನಡೆಸಲಾಗುತ್ತಿದೆ. ಯಂಗ್ ಥಿಂಕರ್ಸ್ ಫಿಲಂಸ್ ಲಾಂಛನದಲ್ಲಿ ಜಿ.ಕೆ.ಉಮೇಶ್ ಕೆ. ಗಣೇಶ್ ಐತಾಳ್ ಅವರು ನಿರ್ಮಿಸುತ್ತಿರುವ ಮೂರನೇ ಚಿತ್ರ ಇದಾಗಿದೆ. ʻʻನನ್ನ ಹಿಂದಿನ ಚಿತ್ರಕ್ಕೂ ʻಧರಣಿʼಗೂ ಅಜಗಜಾಂತರ ವ್ಯತ್ಯಾಸವಿದೆ. ಅದು ಸೈಬರ್ ಕ್ರೈಂ ಕಥಾವಸ್ತು ಹೊಂದಿತ್ತು. ʻಧರಣಿʼಯಲ್ಲಿ ಸಿಟಿ ಲೈಫ್ ಕಾಣೋದೇ ಇಲ್ಲ. ಇದು ಪಕ್ಕಾ ದೇಸೀ ಸೊಗಡಿನ ಸಿನಿಮಾ. ತೀರಾ ಹೊಸದೆನ್ನುವ ಎಲಿಮೆಂಟುಗಳು ಇದರಲ್ಲಿವೆ. ಜೊತೆಗೆ ಕಾಡುವ ಕತೆಯೂ ಇರಲಿದೆ. ಈಗ ʻಕಂಟೆಂಟ್ ಓರಿಯೆಂಟೆಂಡ್ ಸಿನಿಮಾʼ ಅಂತಾರಲ್ಲಾ ಆ ತರಹದ್ದು. ನೈಜತೆಯ ಜೊತೆಗೇ ಕಮರ್ಷಿಯಲ್ ಅಂಶಗಳೂ ಇರುತ್ತವೆ. ಖಂಡಿತಾ ನನ್ನನ್ನು ಇಲ್ಲಿ ಕಂಪ್ಲೀಟ್ ಹೊಸ ಲುಕ್ನಲ್ಲಿ ನಿರೀಕ್ಷಿಸಬಹುದು. ಈ ಚಿತ್ರದ ಬಗ್ಗೆ ಹೇಳಿಕೊಳ್ಳುವುದು ಸಾಕಷ್ಟಿದೆ. ಹಂತಹಂತವಾಗಿ ಅವನ್ನೆಲ್ಲಾ ಹಂಚಿಕೊಳ್ಳುತ್ತೇನೆʼʼ ಅನ್ನೋದು ಮನೋಜ್ ಅವರ ಮಾತು.
ʻಧರಣಿʼ ಹೊಸ ವರ್ಷದ ಆರಂಭಕ್ಕೆ ಚಿತ್ರೀಕರಣ ಆರಂಭಿಸಲಿದೆ. ಚೇತನ್ ನಿರ್ದೇಶನ, ಶಶಾಂಕ್ ಶೇಷಗಿರಿ ಸಂಗೀತ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಸುರೇಶ್ ಬಾಬು ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ಭಾಸ್ಕರ್ ಆಚಾರ್ ನಿರ್ಮಾಣ ಮೇಲ್ವಿಚಾರಣೆ ಈ ಚಿತ್ರಕ್ಕಿದೆ.