Love360 4/5
ಈ ಕಾಲದಲ್ಲಿ ಯಾರಿರ್ತಾರೆ ಇವನಂತೆ…?
ನಿಜಕ್ಕೂ ರಾಮನೇ ಅವನು. ಜಾನುಗಾಗಿ ಜೀವನವನ್ನು ಮುಡಿಪಾಗಿಟ್ಟವನು. ಜಗವೇ ನೀನೂ ಗೆಳತಿಯೇ, ನನ್ನಾ ಜೀವದಾ ಒಡತಿಯೇ, ಉಸಿರೇ ನೀನೂ ಗೆಳತಿಯೇ…. ನನ್ನನ್ನು ನಡೆಸೋ ಸಾಥಿಯೇ…. ಈ ಅದ್ಭುತ ಸಾಲುಗಳಿಗೆ ಅನ್ವರ್ಥದಂತೆ ಬದುಕುವವನು ರಾಮ್…
ಎಲ್ಲವೂ ಸರಿಯಿದ್ದ ಹೆಣ್ಣುಮಕ್ಕಳನ್ನೇ ಕಾಪಾಡಿಕೊಳ್ಳುವುದು ಕಷ್ಟ ಈ ಕಾಲದಲ್ಲಿ. ಈ ಘಳಿಗೆಯಲ್ಲಿ ನಡೆದಿದ್ದು ಇನ್ನೊಂದು ಘಳಿಗಗೆ ನೆನಪಿರೋದಿಲ್ಲ ಅವಳಿಗೆ. ಇಂಥಾ ಹುಡುಗಿಯ ಪರ್ಮನೆಂಟು ನೆನಪು, ಪ್ರಜ್ಞೆ ಎಲ್ಲವೂ ಅವನೊಬ್ಬನೇ… ರಾಮ್.. ʻಬಂಗಾರಾʼ ಅಂತಾ ಅವಳನ್ನು ಆತ ಕರೆಯೋ ರೀತಿಯೇ ಚೆಂದ ಚೆಂದ…
ನಾಯಿ, ನರಿ, ತೋಳ, ರಣಹದ್ದು, ಗಿಡುಗಗಳಿಗೆ ಆಹಾರವಾಗದಂತೆ ಜೀವದಂತಾ ಹುಡುಗಿಯನ್ನು ಪೊರೆಯುವುದು ಆ ಹುಡುಗನ ಪಾಲಿಗೆ ಪ್ರತಿ ಕ್ಷಣದ ಸವಾಲು. ಕಣ್ಣರೆಪ್ಪೆ ಒಂದು ಸಲ ಮುಚ್ಚಿ ತೆರೆಯೋದರೊಳಗೆ ಏನಾದರೊಂದು ಯಡವಟ್ಟು ಎದುರಾಗಿರುತ್ತದೆ. ಕೈ ಹಿಡಿದು ಬದುಕಿಡೀ ಜೊತೆ ಸಾಗಬೇಕು ಅಂದುಕೊಂಡವನಿಗೆ ಪದೇ ಪದೇ ಕೈತಪ್ಪಿಸಿಕೊಂಡು ಹೋದವಳನ್ನು ಹುಡುಕಾಡುವುದು, ಜೋಪಾನ ಮಾಡುವುದೇ ನಿತ್ಯ ಕಾಯಕ ಎನ್ನುವಂತಾಗಿರುತ್ತದೆ. ಸಮುದ್ರದ ದಡದಲ್ಲಿ ಕೂತು ಮೆಕ್ಯಾನಿಕ್ ಕೆಲಸ ಮಾಡುವ ಹುಡುಗನ ಬದುಕಲ್ಲಿ ಸಮಸ್ಯೆಗಳು ಅಲೆ ಅಲೆಯಾಗಿ ಬಂದು ಅಪ್ಪಳಿಸುತ್ತವೆ. ಇಬ್ಬರೂ ಅನಾಥರು. ಜೊತೆಗೇ ಬಾಳಬೇಕು ಅಂತಾ ತೀರಾ ಚಿಕ್ಕ ವಯಸ್ಸಿಗೇ ನಿರ್ಧರಿಸಿರುತ್ತಾರೆ. ಅದರಂತೆ ಮದುವೆಗೆ ಮುಂಚೆಯೇ ಒಟ್ಟಿಗೇ ಬಾಳ್ವೆ ನಡೆಸುತ್ತಿರುತ್ತಾರೆ. ತಾನು ತಂದುಕೊಟ್ಟ ಮದುವೆ ಸೀರೆ ಅವಳನ್ನು ಆವರಿಸಿ, ಕೊರಳಿಗೆ ತಾಳಿ ಬಿದ್ದ ಮೇಲಷ್ಟೇ ಅವಳನ್ನು ಮುಟ್ಟ ಬೇಕು ಎನ್ನುವ ಪರಮ ಪ್ರಾಮಾಣಿಕ ಅವನು. ಇಷ್ಟು ಮುದ್ದಾದ ಜೋಡಿಯ ಮೇಲೆ ಜಗದ ಕ್ರೂರ ನೆರಳು ಬೀಳದಿರಲು ಸಾಧ್ಯವಾ? ಪಾಪಿ ಮನಸ್ಸುಗಳು ಹುಡುಗಿಯನ್ನು ಕಾಡಿಸಿ, ಪೀಡಿಸಿ, ಚೇಡಿಸುತ್ತವೆ. ಅಣಕ ಮಾಡಿ ಕುಹಕದಿಂದ ನಗುತ್ತವೆ. ಅವಳ ಈ ಮರೆವಿನ ಗುಣಕ್ಕೆ ರೋಗಗ್ರಸ್ತ ಸಮಾಜ ʻಲೂಸು, ಮೆಂಟ್ಲು, ಹುಚ್ಚಿʼ ಎಂಬಿತ್ಯಾದಿ ಹಣೆಪಟ್ಟಿ ಕಟ್ಟಿರುತ್ತದೆ. ಅವಳು ಹುಚ್ಚಿ ಅಲ್ಲ ಅಂತಾ ಈತ ಎಷ್ಟೇ ಅರಚಿದರೂ ಯಾರಿಗೂ ಕೇಳಿಸುವುದಿಲ್ಲ.ಆಘಾತಕಾರಿ ವಿಚಾರವೆಂದರೆ, ಕೊಲೆಯೊಂದರ ಸುಳಿಯಲ್ಲಿ ಹುಡುಗಿ ಸಿಲುಕಿ ಬೀಳುತ್ತಾಳೆ. ನಿಜಕ್ಕೂ ಇವಳೇ ಆ ಕೊಲೆ ಮಾಡಿದ್ದಾ? ಈ ಆರೋಪದಿಂದ ಮುಕ್ತವಾಗಲು ಸಾಧ್ಯವೇ ಆಗುವುದಿಲ್ಲವಾ? ಜೀವಕ್ಕೆ ಜೀವ ಅಂಟಿಕೊಂಡಂತೆ ತಿರುಗಾಡುವ ಇಬ್ಬರು ಬೇರೆಯಾಗಿಬಿಡುತ್ತಾರಾ? ಇವರಿಬ್ಬರ ಬಾಳಲ್ಲಿ ಏನೆಲ್ಲಾ ಘಟನೆಗಳು ನಡೆದುಹೋಗುತ್ತವೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂದರೆ ʻಲವ್ 360ʼ ಎನ್ನುವ ಪ್ರೇಮಕಾವ್ಯವನ್ನೊಮ್ಮೆ ನೋಡಲೇ ಬೇಕು.ʻಲವ್ ಸ್ಟೋರಿʼಗೇ ಬ್ರಾಂಡ್ ಆಗಿರುವ ಶಶಾಂಕ್ ನಿರ್ದೇಶನದ ಸಿನಿಮಾ ಲವ್ 360. ಹೊಸಬರೊಂದಿಗೆ ಸಿನಿಮಾ ಮಾಡಿ, ಅವರಿಗೆ ಸ್ಟಾರ್ ಪಟ್ಟ ದೊರಕಿಸಿಕೊಡುತ್ತಾ ಬಂದ ಡೈರೆಕ್ಟರ್ ಶಶಾಂಕ್. ಇವರು ಹೆಸರಾಂತ ಹೀರೋಗಳೊಂದಿಗೆ ಕೆಲಸ ಮಾಡಿದ್ದಕ್ಕಿಂತಾ ಹೊಸಬರೊಂದಿಗೆ ಕೆಲಸ ಮಾಡಿದಾಗಲೇ ಹೆಚ್ಚು ಗಮನ ಸೆಳೆಯೋದು. ಈ ಸಲ ಕೂಡಾ ಪ್ರವೀಣ್ ಎನ್ನುವ ಹೊಚ್ಚಹೊಸ ಮುಖವನ್ನು ಶಶಾಂಕ್ ಪರಿಚಯಿಸಿದ್ದಾರೆ. ಲವ್, ಆಕ್ಷನ್ ಜೊತೆಗೆ ಎಮೋಷನ್ ಕ್ಯಾರಿ ಮಾಡುವ ಹೀರೋ ಒಬ್ಬನ ಅವಶ್ಯಕತೆ ಇತ್ತು. ಆ ಜಾಗವನ್ನು ತುಂಬಬಲ್ಲ ಶಕ್ತಿ ಶಾಲಿ ಪ್ರವೀಣ್ಗೆ ಇದೆ ಅನ್ನೋದನ್ನು ಲವ್ 360 ಸಿನಿಮಾ ರುಜುವಾತು ಮಾತಿದೆ. ಹೆಂಗೇ ನಾವು ಅನ್ನೋ ಡೈಲಾಗಿಂತಾಲೇ ಫೇಮಸ್ಸಾಗಿರುವ ರಚನಾ ಇಂದರ್ ಪ್ರತಿಭೆಯ ಅನಾವರಣಕ್ಕೆ ಈ ಚಿತ್ರಕ್ಕಿಂತಾ ಬೇರೆ ಪಾತ್ರ ಸಿಗಲಾರದು. ಆಕೆಯ ಸಹಜ ಮುಗ್ಧತೆ, ಸೌಂದರ್ಯವೆಲ್ಲಾ ಚಿತ್ರಕ್ಕೆ ಪೂರಕವಾಗಿ ಸಹಕರಿಸಿದೆ.
ಪೊಲೀಸ್ ಅಧಿಕಾರಿಯಾಗಿ ಗೋಪಾಲ್ ದೇಶಪಾಂಡೆ, ವೈದ್ಯೆಯಾಗಿ ಕಾವ್ಯಾಶಾಸ್ತ್ರಿ, ಬಾಬು ಹಿರಣ್ಣಯ್ಯ ಚೆಂದದ ಅಭಿನಯ ನೀಡಿದ್ದಾರೆ. ಡ್ಯಾನಿ ಕುಟ್ಟಪ್ಪ ಬೆಚ್ಚಿಬೀಳಿಸುತ್ತಾರೆ. ಡ್ರಗ್ ಪೆಡ್ಲರ್ ಪಾತ್ರಧಾರಿಯಾಗಿ ಸುಜಿತ್ ಹೆಚ್ಚು ಗಮನ ಸೆಳೆಯುತ್ತಾರೆ. ವಿಭಾಶೆಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಕನ್ಯಾ ಗಿರೀಶ್ ಕೂಡಾ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದಾರೆ. ಕಡೆಯಲ್ಲಿ ಬಂದು ಟ್ವಿಸ್ಟ್ ನೀಡುವ ಮಹಂತೇಶ್ ಪಾತ್ರದ ಕಲ್ಪನೆ ಮತ್ತು ಪೋಷಣೆ ವಿಚಿತ್ರ ಅನ್ನಿಸಿದರೂ ಅಟ್ರಾಕ್ಟ್ ಮಾಡುತ್ತದೆ….ಸಿನಿಮಾದಲ್ಲಿ ಇವರಿಬ್ಬರ ಲವ್ ಸ್ಟೋರಿ ಮಾತ್ರ ಇಲ್ಲ. ಗಂಡನಿಂದ ದೂರಾಗಿ ಬಂದು ಮತ್ತೊಬ್ಬನ ಮೇಲೆ ಮನಸ್ಸಿಡುವ ವೈಧ್ಯೆ, ಕಾಸು ಪಡೆದು ಭ್ರಷ್ಟ ಅನ್ನಿಸಿಕೊಂಡರೂ ಮಾನವೀಯತೆ ಮರೆಯದ ಪೊಲೀಸು, ಡ್ರಗ್ಸ್ ಜಾಲದ ಒಳಸುಳಿ, ಮಗಳ ವಯಸ್ಸಿನ ಹುಡುಗಿಯನ್ನು ಹೆಂಡತಿ ಅನ್ನುವ ಶ್ರೀಮಂತ, ಅಪ್ಪನನ್ನೇ ಮುಗಿಸಲು ಸ್ಕೆಚ್ಚು ಹಾಕುವ ಮಗಳು, ಕಾಮುಕರು, ಬಯಕೆ ತೀರಿಸಿಕೊಳ್ಳಲು ಬರುವ ವಿಕಾರ ಮನಸ್ಥಿತಿಯವನು… ಹೀಗೆ ಹತ್ತು ಹಲವು ಪಾತ್ರಗಳ ನಡುವೆ ತೆರೆದುಕೊಳ್ಳುವ ಪ್ಯೂರ್ ಪ್ರೇಮ ಪ್ರಸಂಗ ಲವ್ 360.