ಈ ಸುಂದರ ನೆನಪಿನೊಂದಿಗೆ ಬಿಡುಗಡೆಯಾಯಿತು “ಲವ್ 360” ಚಿತ್ರದ ಮತ್ತೊಂದು ಹಾಡು
ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವವರು ನಿರ್ದೇಶಕ ಶಶಾಂಕ್. ಅವರ ನಿರ್ದೇನದಲ್ಲಿ ಮೂಡಿಬಂದಿದ್ದ “ಮೊಗ್ಗಿನ ಮನಸ್ಸು” ಚಿತ್ರ ಬಿಡುಗಡೆಯಾಗಿ ಹದಿನಾಲ್ಕು ವರ್ಷಗಳಾಗಿದೆ. ಈ ಸುಂದರ ನೆನಪಿನೊಂದಿಗೆ ಪ್ರಸ್ತುತ ಅವರು ನಿರ್ದೇಶಿಸಿರುವ “ಲವ್ 360” ಚಿತ್ರದ “ಭೋರ್ಗರೆದು” ಎಂಬ ಹಾಡು ಬಿಡುಗಡೆಯಾಗಿದೆ. ಶಶಾಂಕ್ ಅವರೆ ಬರೆದಿರುವ ಈ ಹಾಡನ್ನು ಕೀರ್ತನ್ ಹೊಳ್ಳ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ನಾನು “ಲವ್ 360” ಸಿನಿಮಾದ ಈ ಹಾಡನ್ನು ಇಂದು ಬಿಡುಗಡೆ ಮಾಡಲು ಪ್ರಮುಖ ಕಾರಣವಿದೆ. ಅದೇನೆಂದರೆ, ನನ್ನ ನಿರ್ದೇಶನದ “ಮೊಗ್ಗಿನ ಮನಸ್ಸು” ಚಿತ್ರ ತೆರೆಕಂಡು ಇಂದಿಗೆ(ಜಲೈ 18)ಹದಿನಾಲ್ಕು ವರ್ಷಗಳಾಗಿದೆ. ಹಾಗಾಗಿ ಇಂದು ಆ ಚಿತ್ರದ ನೆನಪುಗಳೊಂದಿಗೆ “ಲವ್ 360” ಚಿತ್ರದ ಮೂರನೇ ಹಾಡನ್ನು ಬಿಡುಗಡೆ ಮಾಡಿದ್ದೇವೆ. “ಮೊಗ್ಗಿನ ಮನಸ್ಸು” ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದ ಗಂಗಾಧರ್ ಅವರಿಂದ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಆ ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಅವರನ್ನು ಆಹ್ವಾನಿಸಿದ್ದೆ. ಕಾರ್ಯದೊತ್ತಡದಿಂದ ಅವರಿಗೆ ಬರಲಾಗಲಿಲ್ಲ . ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ಶುಭಾ ಪುಂಜಾ ಮುಂತಾದವರು ಅಭಿನಯಿಸಿದ್ದ ಸಿನಿಮಾವದು. ಚಿತ್ರ ಹಾಗೂ ಹಾಡುಗಳು ಈಗಲೂ ಜನಪ್ರಿಯ. ಮುಂದೊಂದು ದಿನ “ಮೊಗ್ಗಿನ ಮನಸ್ಸು ಭಾಗ 2” ಮಾಡುವ ಆಸೆಯಿದೆ. ಆ ಚಿತ್ರವನ್ನೂ ಹೊಸ ಕಲಾವಿದರೊಂದಿಗೆ ಮಾಡುತ್ತೇನೆ. ಇನ್ನು ಇಂದು ಬಿಡುಗಡೆಯಾಗಿರುವ “ಲವ್ 360” ಚಿತ್ರದ “ಭೋರ್ಗರೆದು” ಹಾಡನ್ನು ನಾನೇ ಬರೆದಿದ್ದೇನೆ. ಕೀರ್ತನ್ ಹೊಳ್ಳ ಹಾಡಿದ್ದಾರೆ. ಇನ್ನೊಂದು ಹಾಡಿದೆ. ಅದನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ.
ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಜನಪ್ರಿಯವಾಗಿದೆ. ಅದರಲ್ಲೂ ಸಿದ್ ಶ್ರೀರಾಮ್ ಹಾಡಿರುವ “ಜಗವೇ ನೀನು ಗೆಳತಿಯೆ” ಹಾಡಂತೂ ನಾವು ಅಂದುಕೊಂಡದಕ್ಕಿಂತ ದೊಡ್ಡ ಯಶಸ್ಸು ಕಂಡಿದೆ. ರೀಲ್ಸ್ ನಲ್ಲೂ ಈ ಹಾಡಿಗೆ ಹೆಜ್ಜೆ ಹಾಕುತ್ತಿರುವವರು ಹೆಚ್ಚಾಗಿದ್ದಾರೆ ಎಂದು ನಿರ್ದೇಶಕ ಶಶಾಂಕ್ ಮಾಹಿತಿ ನೀಡಿದರು.
ನಮ್ಮ ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ. “ಜಗವೇ ನೀನು” ಹಾಡಿನಿಂದ ಈಗಾಗಲೇ ಜನ ನನ್ನನ್ನು ಹೋದ ಕಡೆ ಎಲ್ಲಾ ಗುರುತಿಸುತ್ತಿದ್ದಾರೆ. ಚಿತ್ರದ ಗೆಲುವಿನ ಖುಷಿಯನ್ನು ಈ ಹಾಡು ನನಗೆ ಈಗಾಗಲೇ ನೀಡಿದೆ. ಇಂತಹ ಅದ್ಭುತ ಹಾಡು ಕೊಟ್ಟಿರುವ ನಿರ್ದೇಶಕರಿಗೆ ಹಾಗೂ ಮೆಚ್ಚಿಕೊಂಡಿರುವ ಕಲಾರಸಿಕರಿಗೆ ಧನ್ಯವಾದ. ಇಂದು ಬಿಡುಗಡೆಯಾಗಿರುವ ಹಾಡು ಕೂಡ ಜನರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು ನಾಯಕ ಪ್ರವೀಣ್.
ಬಿಡುಗಡೆಯಾಗಿರುವ ಎರಡು ಹಾಡುಗಳು ಗೆದ್ದಿದೆ. ಹಿರಿಯರು, ಕಿರಿಯರು ಎಲ್ಲಾ ವಯಸ್ಸಿನವರಿಗೂ “ಜಗವೇ ನೀನು ಗೆಳತಿಯೆ” ಹಾಡು ಇಷ್ಟವಾಗಿದೆ. ಚಿತ್ರ ಕೂಡ ಎಲ್ಲರ ಮನ ಗೆಲ್ಲುತ್ತದೆ ಎಂದರು ನಾಯಕಿ ರಚನಾ ಇಂದರ್.
“ಲವ್ 360” ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿರುವುದಕ್ಕೆ ಆನಂದ್ ಆಡಿಯೋ ಶ್ಯಾಮ್ ಸಂತಸಪಟ್ಟರು. ಚಿತ್ರೀಕರಣದ ಅನುಭವಗಳನ್ನು ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ ಮಾಧ್ಯಮದ ಮುಂದೆ ಹಂಚಿಕೊಂಡರು.