ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೇ ತಿಂಗಳು 28 ರಂದು ಆಯೋಜಿಸಿರುವ ” ಕೋಟಿ ಕಂಠ ಗಾಯನ ” ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ಹಾಗೂ ಸ್ಪಂದನೆ ವ್ಯಕ್ತವಾಗುತ್ತಿದೆ. ಆದರೆ ಕನ್ನಡ ಚಿತ್ರರಂಗ ಮಾತ್ರ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿರುವುದು ರಾಜ್ಯ ಸರ್ಕಾರದ ಬೇಸರಕ್ಕೆ ಕಾರಣವಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕನ್ನಡ ಸಂಸ್ಕ್ರತಿ ಇಲಾಖೆಯಿಂದ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.
ಹಲವು ಸ್ಟಾರ್ ನಟರಿಗೆ ಖುದ್ದಾಗಿ ಕರೆ ಮಾಡಿ ವಿನಂತಿಸಲಾಗಿದೆ. ಕಾರ್ಯಕ್ರಮಕ್ಕಾಗಿ ವಿಡಿಯೋ ಸಂದೇಶ ನೀಡುವುದಕ್ಕೂ ಕೆಲ ಕಲಾವಿದರು ಬಾಯ್ಬಿಟ್ಟು ಸಂಭಾವನೆ ಕೇಳಿದ್ದಾರೆ ಎಂದು ಅಸಮಾಧಾನ ಹೊಸಹಾಕಿದೆ ಕನ್ನಡದ ಕೆಲಸಕ್ಕೆ, ಕನ್ನಡದ ಹಾಡಿಗೆ ಧ್ವನಿಯಾಗುವುದಕ್ಕೆ ಕನ್ನಡ ಚಿತ್ರರಂಗ ನಿರಾಸಕ್ತಿ ತೋರುತ್ತಿರುವುದು ಈಗ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಅಕ್ಟೋಬರ್ 28 ರಂದು ಬೆಳಗ್ಗೆ ನಡೆಯುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” , ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು, ಡಾ.ಚನ್ನವೀರ ಕಣವಿ ಅವರ “ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ “, ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವಾ “ ಪ್ರಸ್ತುತ ಪಡಿಸಲಾಗುತ್ತಿದೆ.
ಇದು ಅಲ್ಲದೆ ಡಾ.ಡಿ.ಎಸ್.ಕರ್ಕಿಯವರ “ಹಚ್ಚೇವು ಕನ್ನಡದ ದೀಪ “ ಹಾಗೂ ಡಾ. ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು “ ಎಂಬ ಆರು ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಗುತ್ತದೆ. ಇದನ್ನು ಹೊರತುಪಡಿಸಿಯೂ ಆಸಕ್ತರು ಬೇರೆ ಕನ್ನಡ ಗೀತೆಗಳನ್ನು ಸಮಯದ ಮಿತಿ ಆಧರಿಸಿ ಪ್ರಸ್ತುಪಡಿಸಬಹುದಾಗಿದೆ