ಊರ ತುಂಬಾ ಕಿತಾಪತಿ, ಕಿರಿಕ್ಕು ಮಾಡುತ್ತಲೇ ಸಮಾಜ ಸೇವೆ ಮಾಡಲು ಸಾಧ್ಯವಾ? ನೋಡುಗರನ್ನೆಲ್ಲಾ ನಕ್ಕು ನಗಿಸಿ ಪೊಲೀಸ್ ಸ್ಟೇಷನ್ ಪಾಲಾಗುವ ಹೀರೋ. ಒಳಿತು ಮಾಡಿಯೂ ಯಾಕೆ ಪೊಲೀಸರ ಅತಿಥಿಯಾಗುತ್ತಾರೆ ಅನ್ನೋದು ʻಕಿರಿಕ್ ಶಂಕರ್ʼನ ಅಸಲೀ ಕತೆ.
ಪುಟ್ಟದೊಂದು ಹಳ್ಳಿಯಲ್ಲಿ ಸಣ್ಣ ಪುಟ್ಟ ಕಿತಾಪತಿ ಮಾಡುತ್ತಾ ತಿರುಗುವ ನಾಲ್ವರು ಪುಂಡರು, ಅಡ್ಡ ದಾರಿಯಲ್ಲಿ ಕಾಸು ಮಾಡುವ ಖಯಾಲಿಗಿಳಿದಿರುತ್ತಾರೆ. ಇಂಥವರ ನಡುವೆ ಬೆಳಕಿನಂತಾ ಹುಡುಗಿ ಉದಯಿಸುತ್ತಾಳೆ. ದಟ್ಟ ದರಿದ್ರರ ಬದುಕಿನಲ್ಲಿ ಅಷ್ಟೈಶ್ವರ್ಯ ಸಿಕ್ಕಂತಾಗುತ್ತದೆ. ಮೈಗಳ್ಳರಂತೆ ಬದುಕುತ್ತಿರುವ ಇವರ ಪ್ರತಿಭೆಯನ್ನು ಆಕೆ ಗುರುತಿಸುತ್ತಾಳೆ. ಬದುಕು ಅಂದರೇನು ಅಂತಾ ತೋರಿಸಿಕೊಡುತ್ತಾಳೆ. ಅಷ್ಟರಲ್ಲಿ ಎದುರಾಗುವ ಸಮಸ್ಯೆಯೊಂದು ಎಲ್ಲರ ಜಂಗಾಬಲ ಕುಗ್ಗಿಸಿಬಿಡುತ್ತದೆ. ಅದೇನು ಅನ್ನೋದನ್ನು ಥೇಟರಿನಲ್ಲೇ ನೋಡಬೇಕು.
ಹಾಸ್ಯದ ಜೊತೆಗೆ ಸೆಂಟಿಮೆಂಟು, ಎಮೋಷನ್ನು, ಸಸ್ಪೆನ್ಸಿನ ಜೊತೆಗೆ ಆಕ್ಷನ್ ಕೂಡಾ ಸೇರಿಕೊಂಡಿರುವ ಪಕ್ಕಾ ಕಮರ್ಷಿಯಲ್ ಪ್ಯಾಕೇಜ್ ಕಿರಿಕ್ ಶಂಕರ್.
ಎಂದಿನಂತೆ ಲೂಸ್ ಮಾದ ಪಾತ್ರವೇ ತಾವಾಗಿದ್ದಾರೆ. ಅದ್ವಿಕಾ ರೆಡ್ಡಿ ಚೆಲುವು ಪರದೆಯನ್ನಾವರಿಸಿದೆ. ರಿತೇಶ್ ಕಾಮಿಡಿ ವರ್ಕೌಟ್ ಆಗಿದೆ. ಇಡೀ ಸಿನಿಮಾವನ್ನು ವೀರಸಮರ್ಥ ಸಂಗೀತ ಕಳೆಗಟ್ಟಿಸಿದೆ. ಅಪಾರ ಅನುಭವ ಇರುವ ಅನಂತರಾಜು ಸ್ವಲ್ಪ ಅಪ್ಟೇಡ್ ಆಗಿ, ಕಥೆಯನ್ನು ಸೆಲೆಕ್ಟ್ ಮಾಡಿಕೊಳ್ಳಬಹುದಿತ್ತು. ಅದನ್ನು ಹೊರತಾಗಿ ಒಂದು ಸಲ ನೋಡಲು ʻಕಿರಿಕ್ ಶಂಕರ್ʼ ಏನೂ ಕೊರತೆ ಮಾಡೋದಿಲ್ಲ!