ಎಷ್ಟು ಹೊಸ ಕತೆಗಾರರು ಬರುತ್ತಿದ್ದಾರೆ ಎಂದರೆ ಕನ್ನಡದಲ್ಲಿ ವರ್ಷಕ್ಕೆ ನಾಲ್ಕೂವರೆ ಸಾವಿರ ಕತೆಗಳು ಪತ್ರಿಕೆ, ವೆಬ್‌ಸೈಟು, ಫೇಸ್‌ಬುಕ್ಕು, ಆನ್‌ಲೈನ್ ಮ್ಯಾಗಜಿನ್, ಕಥಾಸಂಕಲನಗಳಲ್ಲಿ ಪ್ರಕಟ ಆಗುತ್ತವೆ. ಹೊಸ ತಲೆಮಾರಿನ ಹುಡುಗ ಹುಡುಗಿಯರು ಆಸಕ್ತಿಯಿಂದ ಕತೆ ಬರೆಯುತ್ತಿದ್ದಾರೆ.
ಇದೀಗ ಕತೆ ಬರೆಯುವ ಕಲೆಯ ಕುರಿತು ಕನ್ನಡದಲ್ಲಿ ಸಮಗ್ರವಾದ ಪುಸ್ತಕ ಬಂದಿದೆ. ಕತೆ ಎಂದರೆ ಏನು? ನಾನೂ ಕತೆ ಬರೆಯಬಹುದಾ? ಕತೆಯಲ್ಲಿ ಏನೇನಿರಬೇಕು? ಬೇರೆ ಬೇರೆ ಶೈಲಿಯ ಕತೆಗಳನ್ನು ಒಬ್ಬನೇ ಕತೆಗಾರ ಬರೆಯಬಹುದಾ? ಕಟ್ಟಿದ ಕತೆ ಮತ್ತು ಹುಟ್ಟಿದ ಕತೆಯ ನಡುವಿನ ವ್ಯತ್ಯಾಸ ಏನು? ಕತೆಯಲ್ಲಿ ಕತೆಗಾರ ಒಂದು ಪಾತ್ರ ಆಗಿರುತ್ತಾನಾ? ಕತೆಗಾರರು ಬರೆಯುವ ಕತೆಗಳೆಲ್ಲ ಸುಳ್ಳಾ ನಿಜವಾ? ಕತೆಗಳನ್ನು ಓದುವುದು ಹೇಗೆ? ಸಣ್ಣ ಕತೆ ಎಷ್ಟು ಸಣ್ಣದಿರಬೇಕು? ಕತೆಗೂ ಕಾದಂಬರಿಗೂ ನೀಳ್ಗತೆಗೂ ವ್ಯತ್ಯಾಸ ಏನು? ನಾನು ಬರೆಯುವ ಕತೆಯನ್ನು ಮತ್ತೊಬ್ಬರೂ ಬರೆಯಬಹುದಾ? ಕತೆ ಚೆನ್ನಾಗಿದೆಯೋ ಇಲ್ಲವೋ ಎಂದು ಗೊತ್ತಾಗುವುದು ಹೇಗೆ?
ಹೀಗೆ ಕತೆಯ ಕುರಿತು ನೂರೆಂಟು ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರವಿದೆ. ಕನ್ನಡದ 12 ಅತ್ಯುತ್ತಮ ಕತೆಗಳೂ ಇವೆ. ಕತೆಗಾರ ಆಗಬಯಸುವ ಎಲ್ಲರೂ ಓದಲೇಬೇಕಾದ ಸಮಗ್ರ ಕೃತಿ ಜೋಗಿ ಅವರ ಕತೆಗಾರರ ಕೈಪಿಡಿ. ಇದು ನವೆಂಬರ್ 19, 2023ರ ಭಾನುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿಪಿ ವಾಡಿಯಾ ಸಭಾಂಗಣದಲ್ಲಿ ಬಿಡುಗಡೆ ಆಗುತ್ತಿದೆ.