ದ್ರತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿ ತ್ರಿವಿಕ್ರಮ್ ಸಪಲ್ಯ ನಿರ್ಮಿಸುತ್ತಿರುವ, ಸುಧೀರ್ ಅತ್ತಾವರ್ ನಿರ್ದೇಶನದ “ಕರಿ ಹೈದ….ಕರಿ ಅಜ್ಜ …”.ಸಿನೆಮಾದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ನಟಿಸಿದ್ದಾರೆ.
ಯುರೋಪಿನಾದ್ಯಂತ ಪ್ರಸಿದ್ದಿ ಪಡೆದ ” ಸಂದೀಕನ್” ಟಿವಿ ಸೀರಿಸ್ ನಲ್ಲಿ ನಟಿಸಿರುವ ಕಬೀರ್ ಬೇಡಿ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
“ಕರಿ ಹೈದ ಕರಿ ಅಜ್ಜ” ಚಿತ್ರದ ತಮ್ಮ ಪಾತ್ರದ ಬಗ್ಗೆ “ಕಬೀರ್ ಬೇಡಿ” ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಸುಧೀರ್ ಅತ್ತಾವರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ನಟಿಸಿದ್ದು ಖುಷಿಯಾಗಿದೆ. “ಕೊರಗಜ್ಜ” ದೈವದ ಕುರಿತಾದ ಈ ಚಿತ್ರದಲ್ಲಿ ರಾಜನ ಪಾತ್ರ ನನ್ನದು. ಶೃತಿ, ಭವ್ಯ, ಭರತ್ ಸೂರ್ಯ ಮುಂತಾದ ಕಲಾವಿದರ ಜೊತೆ ಅಭಿನಯಿಸಿದ್ದ ಅನುಭವವನ್ನು ಹಂಚಿಕೊಂಡ ಕಬೀರ್ ಬೇಡಿ, ಬೆಂಗಳೂರಿನ ನೃತ್ಯ ಗ್ರಾಮಕ್ಕೆ ಬರುತ್ತಿದ್ದುದ್ದನ್ನು ಹಾಗೂ ಗಿರೀಶ್ ಕಾರ್ನಾಡ್ ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು.
ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣವಾಗಿದೆ. ಬೆಳ್ತಂಗಡಿ ಆಸುಪಾಸಿನಲ್ಲೇ ಹೆಚ್ಚು ಚಿತ್ರೀಕರಣವಾಗಿದೆ. ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರ ಕುಟುಂಬದವರಿಗೆ “ಕೊರಗಜ್ಜ”ನ ಕುರಿತಾದ ಚಿತ್ರ ಮಾಡುವ ಹಂಬಲವಿತ್ತು. ಈ ಕಥೆ ಮೆಚ್ಚಿ ಅವರು ನಿರ್ಮಾಕ್ಕೆ ಮುಂದಾದರು. . ಕೊರಗಜ್ಜನ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ, ಕೊರಗಜ್ಜನ ಜನಾಂಗದ ಮಹನೀಯರೊಂದಿಗೆ ಚರ್ಚೆ ಮಾಡಿ 12ನೇ ಶತಮಾನದಲ್ಲಿದ್ದ ಕೊರಗಜ್ಜನ ಬಗ್ಗೆ ಯಾರಿಗೂ ಗೊತ್ತಿರದ ನಿಜ ಬದುಕಿನ ವಿಷಯವನ್ನು ತಿಳಿಸುವ ಪ್ರಯತ್ನ ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ. ಭರತ್ ಸೂರ್ಯ “ಕೊರಗಜ್ಜ” ನ ಪಾತ್ರದಲ್ಲಿ ಕಾಣಿಸಿಕೊಳುತ್ತಿದ್ದಾರೆ. ಕಬೀರ್ ಬೇಡಿ, ಶೃತಿ, ಭವ್ಯ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವಿದ್ಯಾಧರ್ ಶೆಟ್ಟಿ ಸಂಕಲನದ ಜೊತೆಗೆ ಇತಿಹಾಸದ ದಾಖಲೆ ಮತ್ತು ಪುರಾವೆಗಳನ್ನು ಕಲೆ ಹಾಕಿದ್ದಾರೆ. ಪವನ್ ವಿ ಕುಮಾರ್ ಮತ್ತು ಗಣೇಶ್ ಕೆಳಮನೆ ಛಾಯಾಗ್ರಹಣ, ಸುಧೀರ್- ಕೃಷ್ಣ ರವಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ ಎಂದು ಮಾಹಿತಿ ನೀಡಿದ ನಿರ್ದೇಶಕ ಸುಧೀರ್ ಅತ್ತಾವರ್, ಕಲಾ ನಿರ್ದೇಶನವನ್ನು ತಾವೇ ಮಾಡಿರುವುದಾಗಿ ಹೇಳಿದರು.
ನಮ್ಮ ಕುಟುಂಬದವರಿಗೆ “ಕೊರಗಜ್ಜ” ನ ಮೇಲೆ ವಿಶೇಷ ಭಕ್ತಿ. ಹಾಗಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರತಂಡದ ಪ್ರೋತ್ಸಾಹದಿಂದ ಚಿತ್ರ ಉತ್ತಮವಾಗಿ ಮೂಡಿ ಬರುತ್ತಿದೆ. ಅಂದುಕೊಂಡಂತೆ ಆದರೆ, ಏಪ್ರಿಲ್ ಅಥವಾ ಮೇ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದರು ನಿರ್ಮಾಪಕ ತ್ರಿವಿಕ್ರಮ ಸಪಲ್ಯ.
ಕಬೀರ್ ಬೇಡಿ ಅವರಂತಹ ಮಹಾನ್ ನಟನ ಜೊತೆ ಅಭಿನಯಿಸಿದ್ದು ತುಂಬಾ ಸಂತೋಷವಾಗಿದೆ. ನಾನು ಈ ಚಿತ್ರದಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸುಧೀರ್ ಅತ್ತಾವರ್ ಒಳ್ಳೆಯ ಚಿತ್ರ ನಿರ್ದೇಶಿಸುತ್ತಿದ್ದಾರೆ. ನಿಮ್ಮೆಲ್ಲರ ಬೆಂಬಲವಿರಲಿ ಎಂದರು ಹಿರಿಯ ನಟಿ ಭವ್ಯ.