ತಾವು ಮಾಡದ ಸಾಧನೆಯನ್ನು ತಮ್ಮ ಮಕ್ಕಳಾದರೂ ನೆರವೇರಿಸಲಿ ಅನ್ನೋ ಬಯಕೆ ಹೆತ್ತವರಿಗಿರುತ್ತದೆ. ಅಪ್ಪನಿಗಂತೂ ಆಸೆ ಪಟ್ಟಿದ್ದು ಈಡೇರಲಿಲ್ಲ. ನಾನಾದರೂ ಇದೇ ಕ್ಷೇತ್ರದಲ್ಲಿ ಹೆಸರು ಮಾಡಿ, ತಂದೆಯನ್ನು ಖುಷಿ ಪಡಿಸಬೇಕು – ಅಂತಾ ಬಯಸುವ ಮಕ್ಕಳೂ ಇರ್ತಾರೆ.
ಇಲ್ಲಿ ಹೊನ್ನವಳ್ಳಿ ಕೃಷ್ಣ ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದವರು. ಸಾಕಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದವರು. ಆದರೆ, ನಿರ್ದೇಶಕನಾಗಬೇಕು ಎನ್ನುವ ಅವರ ಬಯಕೆ ಈಡೇರಲೇ ಇಲ್ಲ. ʻಹರಿಕಥೆ ಅಲ್ಲ ಗಿರಿಕಥೆʼ ಚಿತ್ರದಲ್ಲಿ ಹೊನ್ನವಳ್ಳಿ ಕೃಷ್ಣನಾಗೇ ಇವರು ಪಾತ್ರ ನಿರ್ವಹಿಸಿದ್ದಾರೆ. ಇವರ ಮಗ ಗಿರಿಗೆ ʻʻತಾನೊಬ್ಬ ನಿರ್ದೇಶಕನಾಗಬೇಕು. ಮೊದಲ ಸಿನಿಮಾವನ್ನು ತನ್ನಪ್ಪ ಕೂತು ವೀಕ್ಷಿಸುವಾಗ, ಅವರ ಮುಖದ ಭಾವನೆಗಳನ್ನು ನಿಂತು ತಾನು ನೋಡಬೇಕು.ʼʼ ಅನ್ನೋದು ಪರಮ ಗುರಿ.
ಹೇಳಿ ಕೇಳಿ ಈ ಚಿತ್ರರಂಗದಲ್ಲಿ ಪ್ರತಿಭೆ ಇದ್ದವರಿಗೆಲ್ಲಾ ಅವಕಾಶ ಸಿಗುವುದಿಲ್ಲವಲ್ಲಾ? ಎಷ್ಟೇ ನಿರ್ಮಾಪಕರ ಮನೆ ಬಾಗಿಲು ಅಲೆದರೂ ಛಾನ್ಸು ಮಾತ್ರ ಸಿಕ್ಕಿರುವುದಿಲ್ಲ. ಪಾತ್ರೆ ಪಗಡೆಯಿಂದ ಹಿಡಿದು ಸೈಟು, ಮನೆಗಳಿಗೆಲ್ಲಾ ಲೋನು ಕೊಡುವ ಬ್ಯಾಂಕುಗಳು ಸಿನಿಮಾ ಮಾಡಲು ಮಾತ್ರ ಸಾಲ ಕೊಡೋದಿಲ್ಲ. ತಾನೇ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಬೇಕು ಅಂದರೆ ಜೇಬಲ್ಲಿ ಬಿಡಿಗಾಸೂ ಇರುವುದಿಲ್ಲ. ಇದೇ ಹೊತ್ತಲ್ಲಿ ವಿಲನ್ ಆಗಲು ಬಯಸಿದ ಗಿರಿ ಮತ್ತು ನಟಿಯಾಗಲೇಬೇಕು ಅಂತಾ ತೀರ್ಮಾನಿಸಿದ ಗಿರಿಜಾ ಥಾಮಸ್ ಕೂಡಾ ಜೊತೆಯಾಗುತ್ತಾರೆ. ಅಲ್ಲಿಗೆ ಮೂವರು ಗಿರಿಗಳ ಮಹಾಸಂಗಮವಾಗುತ್ತದೆ. ಎಲ್ಲೆಲ್ಲಿಂದಲೋ ಬಂದು ಒಂದು ಸೇರಿದ 3 ಮಂದಿ ಗಿರಿಗಳ ಗುರಿ ಮಾತ್ರ ಒಂದೇ ಆಗಿರುತ್ತದೆ.
ಅಂದುಕೊಂಡಿದ್ದನ್ನು ಸಾಧಿಸಲು ಇವರು ರೂಪಿಸುವ ತಂತ್ರ ಯಾವುದು? ಅದು ಫಲಿಸುತ್ತಾ? ಇವರೆಲ್ಲರ ಆಸೆ ಈಡೇರುತ್ತಾ? ಸಿನಿಮಾ ತಯಾರಾಗುತ್ತದಾ? ಹೊನ್ನವಳ್ಳಿ ಕೃಷ್ಣ ಅದನ್ನು ನೋಡಿ ಸಂತೃಪ್ತರಾಗುತ್ತಾರಾ? ಅನ್ನೋದು ಚಿತ್ರದ ಕೊನೇ ಭಾಗದಲ್ಲಿ ಗೊತ್ತಾಗುತ್ತದೆ. ಅಲ್ಲೀತನಕ ಗಿರಿ ಗ್ಯಾಂಗ್ ಸೃಷ್ಟಿಸುವ ಯಡವಟ್ಟುಗಳು, ಅವರ ಅಸಹಾಯಕತೆ, ಏನೇ ಆದರೂ ಛಲ ಬಿಡದ ಅವರ ನಡೆಗಳೆಲ್ಲವೂ ನೋಡುವ ಮನಸ್ಸುಗಳನ್ನು ಭರ್ತಿ ಉಲ್ಲಾಸಗೊಳಿಸುತ್ತದೆ. ಹಾಸ್ಯಪ್ರಧಾನ ಸಿನಿಮಾ ಇದಾದರೂ ಸಿದ್ದಸೂತ್ರಗಳಿಂದ ಹೊರಬಂದು ಸಿನಿಮಾ ಕಟ್ಟಿದ್ದಾರೆ. ತಮಿಳಿನ ಸೂದು ಕಾವುಂ ನಲ್ಲಿಅನುಸರಿಸಿರುವ ತಂತ್ರಗಳು ಇಲ್ಲೂ ಬಳಕೆಯಾದಂತಿವೆ.
ಬದುಕಿನಲ್ಲಿ ಏನಾದರೊಂದು ಸಾಧಿಸಬೇಕು ಅಂತಾ ಒಬ್ಬೊಬ್ಬರಲ್ಲೂ ಏನಾದರೊಂದು ಬಯಕೆ ಇದ್ದೇ ಇರುತ್ತದೆ. ಈ ಹೋರಾಟ, ಓಡಾಟಗಳಲ್ಲಿ ಹಲವು ವಿಚಿತ್ರ ಕ್ಯಾರೆಕ್ಟರುಗಳೂ ಎದುರಾಗುತ್ತವೆ. ಹಾಗೆ ಇಲ್ಲೂ ಕಾಮಿಡಿ ಪೊಲೀಸ್, ಸ್ವಾರ್ಥ ರಾಜಕಾರಣಿ, ಪಾಪ್ ಸಿಂಗರ್, ಬಿಟ್ಟಿ ದುಡ್ಡಲ್ಲಿ ಮಜಾ ಉಡಾಯಿಸಲು ಬಂದ ಮೆಕ್ಯಾನಿಕ್ ಹುಡುಗರು, ಉಪುಕು ತುಪುಕು ಉಪುಕು ತುಪುಕು ಅಂತಾ ಬಾಯಲ್ಲೇ ಮ್ಯೂಸಿಕ್ ಬಾರಿಸಿಕೊಂಡು, ಬೈಗುಳವನ್ನೇ ಹಾಡಾಗಿಸುವ ಪಾಪ್ ಸಿಂಗರ್… ಹೀಗೆ ಹತ್ತಾರು ಪಾತ್ರಗಳು ಬಂದು ಎಷ್ಟು ಬೇಕೋ ಅಷ್ಟು ನಗಿಸುತ್ತವೆ.
ರಿಷಭ್ ನಟನೆ ಸಿನಿಮಾದಿಂದ ಸಿನಿಮಾಗೆ ಬೇರೆ ಲೆವೆಲ್ಲಿಗೆ ತಲುಪುತ್ತಿದೆ. ಪ್ರಮೋದ್ ಶೆಟ್ಟರಂತೂ ಕಾಮಿಡಿ ಪೊಲೀಸ್ ಆಗಿ ಸಿಕ್ಕಾಪಟ್ಟೆ ನಗಿಸುತ್ತಾರೆ. ಹೆಂಗೇ ನಾವು ರಚನಾ ಅಂತೂ ಈ ಥರದ ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದಾಳೆ. ಒಂದೇ ಟೇಕಲ್ಲಿ ಬುಡಬುಡಿಕೆ ಶೈಲಿಯಲ್ಲಿ ಇಷ್ಟೂದ್ದ ಮಾತಾಡಿ ಅಚ್ಚರಿ ಮೂಡಿಸುತ್ತಾಳೆ. ಪಿಡಿ ಸತೀಶ್, ತಪಸ್ವಿನಿ ಪೂಣಚ್ಛ, ಹೊನ್ನವಳ್ಳಿ ಕೃಷ್ಣ, ದಿನೇಶ್ ಮಂಗಳೂರ್ ಸೇರಿದಂತೆ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳನ್ನೂ ನಿರ್ದೇಶಕದ್ವಯರಾದ ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಗಿರಿಕೃಷ್ಣ ಬರೆದ ಕಥೆಗೆ ಪ್ರತಿಯೊಬ್ಬರೂ ಗೌರವ ಕೊಟ್ಟು ನಟಿಸಿದ್ದಾರೆ.
ಕಣ್ಣೆದುರಿಗಿನ ದೃಶ್ಯಗಳಲ್ಲಿ ಲಾಜಿಕ್ಕು ಹುಡುಕದೇ, ನಗುವೊಂದನ್ನೇ ಬಯಸಿ ಹೋದವರಿಗೆ ಹರಿಕಥೆ ಅಲ್ಲ ಗಿರಿಕಥೆ ಸಖತ್ ಮಜಾ ಕೊಡುತ್ತದೆ. ಮನಸ್ಸಿಗೂ ಹತ್ತಿರವಾಗುತ್ತದೆ.