ಯೋಗರಾಜ್ ಭಟ್ಟರು ಬರೆದ “ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು” ಹಾಡು ಎಷ್ಟು ಜನಪ್ರಿಯವಾಗಿದೆ ಎಂದು ಎಲ್ಲರಿಗೂ ತಿಳಿದ ಸಂಗತಿ. ಕುಡಿಯುವವರಿಗೆ ಹಾಗೂ ಕುಡಿಯದವರಿಗೆ ಇಬ್ಬರಿಗೂ ಈ ಹಾಡು ಮೆಚ್ಚುಗೆಯಾಗಿದೆ. ಈಗ ಯೋಗರಾಜ್ ಭಟ್ಟರು “ಗಿರ್ಕಿ” ಚಿತ್ರಕ್ಕಾಗಿ “ಗ್ಲಾಸು ಗ್ಲಾಸಿಗೆ ತಾಗೊ ಟೈಮಲಿ ದೇಶ ಚಿಂತನೆ ಮಾಡೋಣ” ಎಂಬ ಹಾಡನ್ನು ಬರೆದಿದ್ದಾರೆ. ವಿಜಯ್ ಪ್ರಕಾಶ್ ಹಾಡಿದ್ದಾರೆ. ಇತ್ತೀಚೆಗೆ ಹಾಡನ್ನು ದುನಿಯಾ ವಿಜಯ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. A2 music ಸಂಸ್ಥೆ ಈ ಹಾಡನ್ನು ಹೊರತಂದಿದೆ. ಬಿಡುಗಡೆಯಾದ ಸ್ವಲ್ಪ ಹೊತ್ತಿನಲ್ಲೇ ಈ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎಣ್ಣೆ ಪ್ರಿಯರಿಗೆ ಮತ್ತೊಂದು ಒಳ್ಳೆಯ ಹಾಡು ಸಿಕ್ಕಿದೆ. ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ.
ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್ ಸಹಯೋಗದೊಂದಿಗೆ ತರಂಗ ವಿಶ್ವ ನಿರ್ಮಿಸಿರುವ “ಗಿರ್ಕಿ” ಚಿತ್ರವನ್ನು ಯೋಗರಾಜ್ ಭಟ್ ಅವರ ಶಿಷ್ಯ ವೀರೇಶ್ ಪಿ.ಎಂ ನಿರ್ದೇಶಿಸಿದ್ದಾರೆ. ಲವ್, ಥ್ರಿಲ್ಲರ್ ಹಾಗೂ ಕಾಮಿಡಿ ಆಕ್ಷನ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವಾಸುಕಿ ಭುವನ್ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದಾರೆ. ನವೀನ್ ಕುಮಾರ್ ಛಲ್ಲ ಛಾಯಾಗ್ರಹಣ, ಮಧು ತುಂಬಕೆರೆ ಅವರ ಸಂಕಲನವಿರುವ ಈ ಚಿತ್ರಕ್ಕೆ ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ರಾಮು, ಮೋಹನ್ ಅವರ ನೃತ್ಯ ನಿರ್ದೇಶನವಿದೆ. ತಮ್ಮ ಕಾಮಿಡಿ ಮೂಲಕ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿದ್ದು, ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯಾಗಿ ನಟಿಸಿದ್ದಾರೆ.