ಅಂದು ನಾವೆಲ್ಲರೂ ಬ್ರಹ್ಮ ಕಮಲ ಚಿತ್ರದ ಚಿತ್ರೀಕರಣಕ್ಕಾಗಿ ಚನ್ನಪಟ್ಟಣದ ಸ್ಮಶಾನವನ್ನು ಸೇರಿದ್ದೆವು. ಜೀವಂತವಾಗಿಯೇ . ಸಾಮಾನ್ಯವಾಗಿ ಸ್ಮಶಾನ ಸೇರಿದೆವು ಅಂದರೆ ಅದನ್ನು ನೀವು ಇನ್ಯಾವರೀತಿಯಲ್ಲಿ ಅಥೈಸಿಕೊಳ್ಳುವಿರೋ ಎಂದು ಹೈ ಲೈಟ್ ಮಾಡಿದ್ದೇನೆ. ಸಾಲದ್ದಕ್ಕೆ ಅಮಾವಾಸ್ಯೆಯ ಮುಂದಿನ ದಿನವಾದ ಅಂದು ಚಿತ್ರದ ಪ್ರಮುಖ ದೃಶ್ಯವನ್ನು ಚಿತ್ರಿಸುವ ಸಲುವಾಗಿ ಅಲ್ಲಿ ಸೇರಿದ್ದೆವು. ಸುಮಾರು ಒಂದೂವರೆ ತಾಸಿನ ಪ್ರಯಾಣ ಆದ ಕಾರಣ, ದಾರಿಯಲ್ಲೇ ನಾವು ಕಾಫಿ ತಿಂಡಿ ಮುಗಿಸಿದ್ದೆವು. ಹೊಸ ಜಾಗವಾದ ಕಾರಣವೋ, ಏನೋ. ನಾವು ಅಂದುಕೊಂಡ ವೇಗದಲ್ಲಿ ಚಿತ್ರೀಕರಣ ಸಾಗಲಿಲ್ಲ.
ಆ ಗೋರಿಗಳ ನಡುವೆ ಮಧ್ಯಾನದವರೆಗೂ ಚಿತ್ರೀಕರಣ ನಡೆಸಿದೆವು. ಊಟದ ಸಮಯ ಆಡಿದಂತೆ ಬಂದೆ ಬಿಟ್ಟಿತು. ನಮ್ಮ ಪ್ರೊಡಕ್ಷನ್ ತೋಪೆ ಗೌಡ್ರು ಊಟ ತಿಂಡಿಗೆ ಟೇಬಲ್ ಹಾಕುವ ಮುನ್ನ ಕೆಲವೊಮ್ಮೆ ಕೇಳುತ್ತಿದ್ದರು ‘ಸರ್ ಇಲ್ಲಿ ಊಟಕ್ಕೆ ಟೇಬಲ್ ವ್ಯವಸ್ಥೆ ಮಾಡಬಹುದಾ ಎಂದು’. ಆದರೆ ಅಂದು ಅವರೇಕೊ ಏನೂ ಕೇಳದೆ ಸ್ಮಶಾನದ ಒಳಗೆ ಊಟದ ಟೇಬಲ್ ಆಕಿಬಿಟ್ಟಿದ್ದರು. ನಾನು ಅದನ್ನು ನೋಡಿ ಒಮ್ಮೆ ಹಿಂದೆ ತಿರುಗಿ ನೋಡಿದೆ ಊಟಕ್ಕೆ ನಾವು ಮಾತ್ರವಲ್ಲ ಬೆನ್ನ ಹಿಂದೆ ಇನ್ನು ಇಬ್ಬರು ನಾಯಕಿಯರು ಇದ್ದರೂ, ಸ್ಮಶಾನದಲ್ಲಿ ಚಿತ್ರೀಕರಣ ಎಂದರೇ ಹಿಂದೆ ಮುಂದೆ ನೋಡುವ ಈ ಹೆಂಗಳೆಯರು ಇಲ್ಲಿ ಕುಳಿತು ಊಟ ಮಾಡುತ್ತಾರೆಯೇ ಎಂಬುದು ನನ್ನ ಅನುಮಾನ. ಅಲ್ಲಿಗೆ ಬರುವ ಮುನ್ನ ಯಾವ ಯಾವ ದೇವರಿಗೆ ಎಷ್ಟು ಕೈ ಮುಗಿದು ಒಳಗೆ ಬಂದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ.
😂 ಇವತ್ತು ಇವರಿಬ್ಬರೂ ಉಪವಾಸ ಗ್ಯಾರೆಂಟಿ ಅಂದುಕೊಂಡೆ. ಅದಕ್ಕೆ ಇನ್ನೊಂದು ಕಾರಣವೂ ಇತ್ತು. ನಾಳೆ ಅಮಾವಾಸ್ಯೆ ಎಂಬುದಲ್ಲ. ಊಟಕ್ಕೆ ಅಂದು ತಂದಿದ್ದ ಚಿಕನ್ ಬಿರಿಯಾನಿ . ನಾನು ಬಿರ್ಯಾನಿ ನೋಡಿ “ಗೌಡ್ರೆ ಎರಡು ಬಾಳೆ ಹಣ್ಣು ತರ್ಸಿ” ಎಂದೆ. ಅವರು ಆಯ್ತು ಸಾರ್ ಎಂದರು. ನಾನಂದೆ, ಅದು ನನಗಲ್ಲ, ಆ ಇಬ್ಬರು ನಾಯಕಿಯರಿಗೆ. ಅಲ್ಲಾ ಗೌಡ್ರೆ ಸ್ಮಶಾನದ ಶೂಟಿಂಗ್ ನಲ್ಲಿ ನಾನ್ ವೆಜ್ ತಂದಿದ್ದೀರಿ, ಅವರು ಅದನ್ನು ನೋಡಿದರೆ ಜ್ವರ ಬಂದು ಮಲಗಿ ಬಿಡುತ್ತಾರೆ ಎಂದೆ.
ಅಷ್ಟರಲ್ಲಿ ಒಬ್ಬರು ಉಪಾಯವಾಗಿ ಕಾರ್ ಅತ್ತಿ ಬಿರ್ಯಾನಿ ಮತ್ತು ಲೆಗ್ ಪೀಸ್ ಜೊತೆಯಾದರು. ಒಂದಿಬ್ಬರು ಹುಡುಗರು ಕೂಡ ಸ್ಮಶಾನದ ಒಳಗೆ ಕುಳಿತು ತಿನ್ನಲು ನಿರಾಕರಿಸಿ, ಕಾಂಪೂಂಡ್ ದಾಟಿದರು. ಆದರೆ ಋತು ಚೈತ್ರ ಅವರು ಬಂದು ನಮ್ಮ ಜೊತೆ ಟೇಬಲ್ ನಲ್ಲೆ ಕುಳಿತರು. ನಾನು ಏನನ್ನೂ ಮಾತನಾಡದೆ ಸುಮ್ಮನೆ ಬಿರ್ಯಾನಿಯ ಜೊತೆ ಮುಂದುವರೆದೆ. ಅವರು ಎಲ್ಲಾ ಲೊಕೇಶನ್ ಗಳಲ್ಲಿ ಎಷ್ಟು ಸಹಜವಾಗಿ ಕುಳಿತು ಊಟ ಮಾಡುತ್ತಾರೋ ಅಷ್ಟೇ ಸಹಜವಾಗಿ ಊಟಕ್ಕೆ ಕುಳಿತು ಬಿರ್ಯಾನಿ ಬಾಕ್ಸ್ ಓಪನ್ ಮಾಡಿದರು. ನಾನು ಅಂದುಕೊಂಡೆ ಈಗ ಚಿಕನ್ ನೋಡಿ ಓಡುತ್ತಾರೆ ಎಂದು. ಆದರೆ ಅವರು ಹೋ ಚಿಕನ್ ಬಿರ್ಯಾನಿ. ಏನ್ ಗೌಡ್ರೆ ಇವತ್ತು ವಿಶೇಷ ಎಂದರು. ಇಲ್ಲಿ ಹತ್ತಿರದಲ್ಲಿ ವೆಜ್ ಹೋಟೆಲ್ ಯಾವುದು ಒಳ್ಳೆಯದು ಸಿಗಲಿಲ್ಲ. ಬಿರ್ಯಾನಿ ಹೋಟೆಲ್ ಹೊಸದಾಗಿ ಓಪನ್ ಮಾಡಿದ್ದಾರೆ, ಆಫರ್ ಬೇರೆ ಇತ್ತು ಎಂದು ನಗುತ್ತಾ ಹೇಳಿದರು. ಒಂದು ತುತ್ತು ತಿಂದು ಚೆನ್ನಾಗಿದೆ ಗೌಡ್ರೆ ಎಂದರು ಋತು ಅವರು. ಸುಮ್ಮನೆ ಇರದೆ ಹುಡುಗನೊಬ್ಬ ಮೇಡಂ ಇದು ಸ್ಮಶಾನ ನೀವು ನಾನ್ ವೆಜ್ ಬೇರೆ ತಿನ್ನುತ್ತಿದ್ದಿರಾ ಎಂದು ಹೆದರಿಸಿದ. ನನ್ನ ಕುತೂಹಲ ಜಾಸ್ತಿಯಾಗಿತು.
ಅವರಿಂದ ಬರುವ ಉತ್ತರದ ನಿರೀಕ್ಷೆಯಲ್ಲಿದೆ. ಇದು ಸ್ಮಶಾನ ಇರಬಹುದು, ಆದ್ರೆ ಇವತ್ತು ನಾವು ಕೆಲಸ ಮಾಡುತ್ತಿರುವ ಜಾಗ. ಇಂದು ನಮ್ಮ ಪಾಲಿಗೆ ಇದೇ ದೇವಸ್ಥಾನ. ಎಂದರು. ನಾನು ಒಂದುಕ್ಷಣ ಸುಮ್ಮನೆ ಅವರನ್ನೇ ನೋಡುತ್ತಾ ಕುಳಿತೆ. ಅವರು ನನ್ನ ಮುಖ ನೋಡಿ ಸರಿ ತಾನೇ? ಎಂದರು. ನಾನು ಕಣ್ಣಲ್ಲೇ ಸರಿ ಎಂದು ಉತ್ತರಿಸಿದೆ. ನಿಜಕ್ಕೂ ನಾನು ಅವರಿಂದ ಅಂತಾದೊಂದು ಉತ್ತರ ನಿರೀಕ್ಷೆ ಮಾಡಿರಲಿಲ್ಲ. ಅವರ ಆ ಪ್ರಭುದ್ದತೆಗೆ ನಾನು ಹೆಚ್ಚೇನೂ ಹೇಳಲು ಸಾಧ್ಯವಿರಲಿಲ್ಲ. ನಾವು ಕೆಲಸ ಮಾಡುವ ಜಾಗ ಯಾವುದೇ ಇರಲಿ ಅದು ನಮ್ಮ ಪಾಲಿಗೆ ದೇವಸ್ಥಾನ ಎನ್ನುವ ಆ ಮಾತಿಗೆ ಮತ್ತೇನು ಹೇಳಲು ಸಾಧ್ಯ. ಇಂತಹ ಮನಸ್ಥಿತಿ ಇರುವ ಕಲಾವಿದೆಯ ಸಾಂಗತ್ಯ ದೊರೆತ ನಾನೇ ಧನ್ಯ ಎನಿಸಿತು. ಕೆಲವೊಮ್ಮೆ ಜೂನಿಯರ್ ಕಲಾವಿದರು ಸಹ ಏನಾದರೂ ಒಂದು ಹೇಳುತ್ತಾರೆ, ಅವರು ಹೇಳಬಾರದು ಎಂದೇನೂ ಅಲ್ಲ. ಅದರ ಆಚೆಗೂ ಎಲ್ಲಿ ಬೇಕಾದರೂ, ಇರುವ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವ ಮತ್ತು ಯಾವ ಹಮ್ಮು ಬಿಮ್ಮು ಇರದ ಕಲಾವಿದೆ ಋತು ಚೈತ್ರ ಅವರು. ಆ ಕೂಡಲೇ ನನಗೆ ಮಂಕುತಿಮ್ಮನ ಕಗ್ಗ ನೆನಪಾಯಿತು, ಎಲ್ಲರೊಳಗೊಂದಾಗು ಮಂಕುತಿಮ್ಮ ಎನ್ನುವ ಸಾಲು. ಚಿತ್ರೀಕರಣದ ಸಮಯದಲ್ಲಿ ಹಗಲು ರಾತ್ರಿ ಎಷ್ಟೇ ಹೊತ್ತಾದರೂ ನನ್ನದು ಮುಗೀತಾ? ನಾನು ಹೋಗಬಹುದ ? ಎನ್ನುವ ಮಾತು ನಾನು ಯಾವೊಂದು ದಿನವೂ ಕೇಳಲಿಲ್ಲ. ಅವರ ಜೊತೆ ಬ್ರಹ್ಮಕಮಲ ನನ್ನ ಮೂರನೇ ಚಿತ್ರ. ಕುಗ್ರಾಮ ಚಿತ್ರದಲ್ಲಿಯೂ ಸಹಾ ಋತು ಅವರು ಲೀಡ್ ನಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿ ಒಂದು ದೃಶ್ಯವಿದೆ, ಆ ದೃಶ್ಯವನ್ನು ಚಿತ್ರಿಸುವಾಗ ತನ್ನ ಸಹಪಾಠಿ ಕಲಾವಿದೆ ತೇಜು ಅವರಿಗೆ ಇವರೇ ಹೇಳುತ್ತಿದ್ದಾರೆ ನೀವು ಸಂಕೋಚ ಪಟ್ಟು ಕೊಳ್ಳಬೇಡಿ, ಹೊಡೆಯಿರಿ ಎಂದು. ಆದರೆ ತೇಜಸ್ವಿನಿ ಯವರು ಹೊಡೆಯಲು ನಿರಾಕರಿಸುತ್ತಿದ್ದರು.
ಈ ವಿಷಯವಾಗಿ ನಾನು ಮಾತಾಡಿದರೆ ಅದು ಕೆಲವರಿಗೆ ಅತಿಶಯ ಎನಿಸಬಹುದು, ಆದರೆ ನನ್ನ ವ್ಯಕ್ತಿತ್ವದ ಪರಿಚಯ ಇದ್ದವರು ಹಾಗೆ ಅಂದುಕೊಳ್ಳಲಾರರು. ಆ ಭರವಸೆಯ ಮೇರೆಗೆ ಮುಂದುವರೆದಿದ್ದೇನೆ. ಒಟ್ಟಾರೆ ಒಂದಷ್ಟು ಒಳ್ಳೆಯ ಮನಸ್ಥಿತಿಯ ಕಲಾವಿದರು ಭ್ರಹ್ಮ ಕಮಲ ಚಿತ್ರಕ್ಕೆ ಜೊತೆಯಾಗಿದ್ದಾರೆ. ಅದು ಚಿತ್ರದ ಗೆಲುವಿಗೆ ಪೂರಕವಾಗಲಿ ಎಂದು ಬೇಡಿಕೊಳ್ಳುತ್ತೇನೆ. ಬ್ರಹ್ಮ ಕಮಲ ಚಿತ್ರವು ನಿರ್ದೇಶಕರಾದ ಸಿದ್ದು ಪೂರ್ಣಚಂದ್ರ ಅವರಿಗೆ ಮತ್ತಷ್ಟು ಗೌರವ ತಂದುಕೊಡಲಿ. ಎಲ್ಲರ ಶ್ರಮಕ್ಕೆ ಒಂದಷ್ಟು ಪುರಸ್ಕಾರ ಸಿಗಲಿ ಎಂದು ಬಯಸುತ್ತೇನೆ.