ನೆನಪುಗಳೇ ಹಾಗೆ… ವಯಸ್ಸು ಬೆಳೆದಂತೆಲ್ಲಾ ಹಳೆಯದ್ದನ್ನು ಬೆದಕುತ್ತಿರುತ್ತವೆ. ಬಂದ ದಾರಿಯನ್ನು ಮತ್ತೆ ಮತ್ತೆ ತಿರುಗಿನೋಡುವಂತೆ ಮಾಡುತ್ತವೆ. ಓದಿ ಬೆಳೆದ ಸ್ಕೂಲು, ಕಾಲೇಜಿನ ಮುಂದೆ ಅಡ್ಡಾಡಿದಾಗಲೆಲ್ಲಾ ತಲೆಯಲ್ಲಿ ಅಡಕವಾದ ಸಂಗ್ರಹವೆಲ್ಲಾ ಮುನ್ನೆಲೆಗೆ ಬಂದುನಿಲ್ಲುತ್ತವೆ. ಮುದ ನೀಡುವುದರ ಜೊತೆ ಜೊತೆಗೇ ಹಳೇ ಗಾಯಗಳನ್ನೆಲ್ಲಾ ಮತ್ತೆ ಇರಿದು ಎದೆಯೊಳಗೆ ಚುರುಗುಟ್ಟುವಂತೆ ಮಾಡುತ್ತವೆ. ಅದಕ್ಕೇ ಏನೋ ಬಹಳಷ್ಟು ಜನ ಬದುಕು ರೂಪಿಸಿದ ಶಾಲೆ, ಕಾಲೇಜಿನ ಆಸುಪಾಸಲ್ಲೇ ಸುಳಿದರೂ ಒಮ್ಮೆಯೂ ಒಳಗೆ ಹೋಗುವ ಧೈರ್ಯ ಮಾಡೋದಿಲ್ಲ. ಎಲ್ಲಿ ಹಳೆಯದ್ದೆಲ್ಲಾ ಮತ್ತೆ ಕಣ್ಣೆದುರು ಇಣುಕಿ ಅಣಕ ಮಾಡುತ್ತವೋ ಎನ್ನುವ ಭಯದಿಂದ.
ಜೊತೆಗಿದ್ದ ನಾಲ್ಕೈದು ವರ್ಷಗಳಲ್ಲಿ ಒಬ್ಬೊಬ್ಬರ ಬದುಕಲ್ಲೂ ಥರಹೇವಾರಿ ವಿಚಾರಗಳು ಘಟಿಸಿರುತ್ತವೆ. ಭವಿಷ್ಯದಲ್ಲಿ ಎದುರಾಗುವ ಎಲ್ಲಾ ಕ್ಯಾರೆಕ್ಟರುಗಳ ಸ್ಯಾಂಪಲ್ಲುಗಳು ಅಲ್ಲಿ ಜೊತೆಯಾಗಿರುತ್ತವೆ. ಆಟ, ಪಾಠ, ಪ್ರೀತಿ, ಸ್ನೇಹ, ಸೆಳೆತ, ಕಾಮದ ಜೊತೆಗೆ ವೈರಿಗಳಂತೆ ವರ್ತಿಸುವ ಮಿತ್ರರು, ಜೊತೆಗಿದ್ದೇ ಸ್ಕೆಚ್ಚು ರೂಪಿಸುವ ಹಿತಶತ್ರುಗಳು, ಅದರಿಂದ ಎದುರಾಗುವ ಗ್ಯಾಂಗ್ ವಾರುಗಳು, ಡಿಬಾರುಗಳೆಲ್ಲಾ ಜರುಗಿರುತ್ತವೆ.
ಕ್ರಮೇಣ ಪಲ್ಲಟಗೊಂಡ ಬದುಕಿನಲ್ಲಿ ಎಲ್ಲವೂ ಅಸ್ತವ್ಯಸ್ತಗೊಂಡಿರುತ್ತವೆ. ಬಿಡುವಿರದ ಬದುಕಿನಲ್ಲಿ ಅವರನ್ನವರು ಕಳೆದುಕೊಂಡಿರುತ್ತಾರೆ. ವರ್ಷಾಂತರಗಳ ನಂತರ ತಿರುಗಿ ನೋಡಿದರೆ ಆ ಎಲ್ಲ ಸಿಹಿ, ಕಹಿ ಘಟನೆಗಳು ಒಬ್ಬೊಬ್ಬರನ್ನೂ ಒಂದೊಂದು ಬಗೆಯಲ್ಲಿ ಕಾಡುತ್ತಿರುತ್ತವೆ. ಎಷ್ಟೊಂದು ವಿಚಾರಗಳು ಬಾಲಿಷ ಅನ್ನಿಸಿದರೂ, ಅವು ಆ ಕ್ಷಣಕ್ಕೆ ಭವಿಷ್ಯದ ದಾರಿಯನ್ನೇ ಅಳಿಸಿಹಾಕಿರುತ್ತವೆ…
ಇಂಥ ಎಲ್ಲ ನೆನಪುಗಳನ್ನೂ ಒಂದು ಸಲ ತಿರುವಿಹಾಕಿದರೆ ಹೇಗಿರುತ್ತದೆ? ಗಜಾನನ ಮತ್ತವನ ಸಹಚರರ ಕಾಲೇಜು ದಿನಗಳ ಸುಂದರ ಮತ್ತು ಆಘಾತಕಾರಿ ನೆನಪುಗಳ ಸರಮಾಲೆಯನ್ನು ಏಕಕಾಲದಲ್ಲಿ ತೆರೆದಿಡುವ ಪ್ರಯತ್ನ ಇಲ್ಲಿ ಆಗಿದೆ.
ಕಾಲೇಜು, ಎರಡು ಗುಂಪು, ಕದನ, ಪ್ರೀತಿ, ಬ್ರೇಕಪ್ಪುಗಳ ಜೊತೆಗೇ ಸ್ನೇಹ ಅಂದರೇನು? ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡುವ ಸಿನಿಮಾ ಗಜಾನನ ಅಂಡ್ ಗ್ಯಾಂಗ್. ತನಗೆ ದಕ್ಕದ್ದು ಬೇರೆ ಯಾರಿಗೂ ಸಿಗಬಾರದು, ಯಾವ ಪ್ರೀತಿಯೂ ಊರ್ಜಿತವಾಗಬಾರದು ಎಂದು ಬಯಸೋದು ಕೂಡಾ ಮಾನಸಿಕ ಕಾಯಿಲೆ ಅನ್ನೋದು ಸಿನಿಮಾದಲ್ಲಿ ನಿರೂಪಿತಗೊಂಡಿದೆ. ಚಿತ್ರದ ಬಹುತೇಕ ಕಾಲೇಜು ಬ್ಯಾಕ್ ಡ್ರಾಪಲ್ಲೇ ಕದಲುತ್ತದೆ. ಮೊದಲ ಭಾಗ ಬಹುತೇಕ ಎರಡು ಗುಂಪಿನ ಕಿತಾಪತಿಗಳಲ್ಲೇ ಕಳೆದುಹೋಗುತ್ತದೆ. ಸೆಖೆಂಡ್ ಹಾಫ್ ಬೇರೆ ಬೇರೆ ದಿಕ್ಕಿಗೆ ಹೊರಳುತ್ತದೆ. ಇಡೀ ಸಿನಿಮಾಗೆ ಪ್ರದ್ಯುತನ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಜೀವಧಾತುವಾಗಿದೆ.
ತನ್ನವಳನ್ನು ಕಳೆದುಕೊಂಡರೂ, ದ್ರೋಹವೆಸಗಿದ ಗೆಳೆಯನನ್ನು ಮನ್ನಿಸುವ ವಿಶಾಲ ಹೃದಯಿ ಹುಡುಗನಾಗಿ ಶ್ರೀ ಮಹಾದೇವ್ ಇಷ್ಟವಾಗುತ್ತಾರೆ. ಅಭಿಷೇಕ್ ಶೆಟ್ಟಿ ನಿರ್ದೇಶನದ ಜೊತೆಗೆ ತಂಡದ ಪ್ರಮುಖ ಸದಸ್ಯನಾಗಿ ಮಿಂಚಿದ್ದಾರೆ. ನಾಯಕಿ ಅದಿತಿ ಪ್ರಭುದೇವಾ ಕಡಿಮೆ ದೃಶ್ಯಗಳಿದ್ದರೂ ʻನೆನಪಾಗಿ ಉಳಿದುಬಿಡುತ್ತಾರೆʼ!
ಅಪಾರ ಹಾಸ್ಯಪ್ರಜ್ಞೆ ಹೊಂದಿರುವ ಪ್ರಜಾ ಟೀವಿ ಕಾರ್ತಿಕ್ ಇಷ್ಟು ಚೆಂದಗೆ ನಟಿಸಿ, ನಗಿಸಬಲ್ಲರು ಅನ್ನೋದು ಖುಷಿ. ಇತ್ತೀಚೆಗೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡು ಅಚ್ಛರಿ ಮೂಡಿಸುತ್ತಿರುವ ಪ್ರತಿಭೆ ಚೇತನ್ ದುರ್ಗ. ಈ ಹುಡುಗನ ಸಹಜಾಭಿನಯ ʻಗಜಾನನ ಗ್ಯಾಂಗ್ʼ ಬಲ ಹೆಚ್ಚಿಸಿದ್ದಾರೆ. ಅನಿಲ್ ಯಾದವ್, ರಘು ಗೌಡ ಥರದ ಪ್ರತಿಭೆಗಳನ್ನು ಸಣ್ಣ ಪಾತ್ರಕ್ಕೆ ಸೀಮಿತಗೊಳಿಸಬಾರದಿತ್ತು. ನಾಟ್ಯ ರಂಗ ಎನ್ನುವ ಯುವಕ ಕನ್ನಡದ ಪ್ರಮುಖ ನಟರ ಲಿಸ್ಟಿಗೆ ಸೇರುವ ದಿನ ದೂರವಿಲ್ಲ. ಅಶ್ವಿನ್ ಹಾಸನ್ ಸೀರಿಯಸ್ ನಟನೆ ಪಾತ್ರಕ್ಕೆ ಪೂರಕವಾಗಿದೆ.
ವರ್ಧನ್ ತೀರ್ಥಹಳ್ಳಿ ಹೀರೋ ಆಗಿ ಮಾತ್ರವಲ್ಲ, ವಿಲನ್ ಆಗಿಯೂ ಅಬ್ಬರಿಸಬಹುದು ಅನ್ನೋದಿಲ್ಲಿ ಸ್ಪಷ್ಟವಾಗಿ ಗೊತ್ತಾಗಿದೆ. ಫ್ರೆಂಚ್ ಬಿರಿಯಾನಿ ಮಹಂತೇಶ್, ಸುಚೇಂದ್ರ ಪ್ರಸಾದ್, ರಘು ಪಾಂಡೇಶ್ವರ, ವಿಜಯ್ ಚೆಂಡೂರ್, ಪ್ರಕಾಶ್, ನಾಗೇಂದ್ರ ಅರಸ್, ನಿರ್ಮಾಪಕ ಎಸ್. ಕುಮಾರ್ ಜೊತೆಗೆ ಹಲವು ಯೂಟ್ಯೂಬ್ ಸ್ಟಾರ್ ಗಳಿಲ್ಲಿ ಸಣ್ಣ ಪುಟ್ಟ ಪಾತ್ರಗಲ್ಲಿ ಕಾಣಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಯಾರೆಲ್ಲಾ ಕನ್ನಡದ ಸಿನಿಮಾ ಪರದೆಯನ್ನು ಅಂದಗೊಳಿಸುತ್ತಾರೋ, ಆ ಎಲ್ಲ ನಟರನ್ನು ಒಂದು ಕಡೆ ಸೇರಿಸಿ, ಎಲ್ಲರಿಗೂ ಒಂದೊಂದು ಪಾತ್ರ ಸೃಷ್ಟಿಸಿರುವುದು ಡೈರೆಕ್ಟರ್ ಅಭಿ ಜಾಣ್ಮೆ. ಅಭಿಷೇಕ್ ಶೆಟ್ಟಿ ʻನಮ್ ಗಣಿ ಬಿಕಾಂ ಪಾಸ್ʼ ಚಿತ್ರದ ಮೂಲಕ ನಟನೆ ಮತ್ತು ನಿರ್ದೇಶನ ಎರಡನ್ನೂ ಮಾಡಿ ಗೆಲುವಿನ ಖಾತೆ ತೆರೆದಿದ್ದರು. ಈಗ ಗಜಾನನ ಅಂಡ್ ಗ್ಯಾಂಗ್ ಕೂಡಾ ಎಲ್ಲರಿಗೂ ಇಷ್ಟವಾಗುವ ಗುಣ ಹೊಂದಿದೆ.