14 ವರ್ಷಗಳ ಹಿಂದೆ ಯೋಗರಾಜ್ ಭಟ್ ‘ಗಾಳಿಪಟ’ ಚಿತ್ರ ಮಾಡಿದಾಗ, ಅವರ ಜೊತೆಗೆ ಇದ್ದಿದ್ದು ಚಿತ್ರತಂಡದವರು ಮತ್ತು ‘ಮುಂಗಾರು ಮಳೆ’ ಚಿತ್ರದ ಯಶಸ್ಸು. ಆದರೆ, ‘ಗಾಳಿಪಟ 2’ ಚಿತ್ರ ಬಿಡುಗಡೆ ಆಗುತ್ತಿರುವಾಗ, ಬರೀ ಚಿತ್ರತಂಡದವರು ಮಾತ್ರವಲ್ಲ, ‘ಗಾಳಿಪಟ’ ಚಿತ್ರದ ಯಶಸ್ಸು ಸಹ ಸೇರಿಕೊಂಡಿದೆ.
ಆ ಚಿತ್ರ ದೊಡ್ಡ ಹಿಟ್ ಆದ್ದರಿಂದ, ಈ ಚಿತ್ರದ ಮೇಲೆ ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಾಗಿವೆ. ಅದರಲ್ಲೂ ಇದು ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಷನ್ನ ಚಿತ್ರ. ಈ ಜೋಡಿ, ಈಗಾಗಲೇ ಗೆದ್ದಿರುವುದರಿಂದ ‘ಗಾಳಿಪಟ 2’ ಚಿತ್ರದ ಬಗ್ಗೆ ನಿರೀಕ್ಷೆಗಳು ನೂರ್ಮಡಿಯಾಗಿವೆ.
ಮೊನ್ನೆ ನಡೆದ ‘ಗಾಳಿಪಟ 2’ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಈ ಮಾತು ಪದೇಪದೇ ಕೇಳಿಬಂತು. ಅಂದು ಮುಖ್ಯ ಅತಿಥಿಗಳಾಗಿ ಬಂದಿದ್ದವರು ಶಿವರಾಜಕುಮಾರ್, ರಮೇಶ್ ಅರವಿಂದ್ ಮತ್ತು ಉಪೇಂದ್ರ. ಮೂವರ ಮಾತಿನಲ್ಲೂ ಗಣೇಶ್ ಮತ್ತು ಯೋಗರಾಜ್ ಭಟ್ ಅವರ ಕಾಂಬಿನೇಷನ್ನ ಕುರಿತ ನಿರೀಕ್ಷೆ ಇತ್ತು.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವರಾಜಕುಮಾರ್, ‘ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್ ಮತ್ತೊಮ್ಮೆ ಮೋಡಿ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ಈ ಚಿತ್ರದ ಸಂಭಾಷಣೆಯೊಂದರಂತೆ ನೋಡುಗರಿಗೆ ಉತ್ತಮ ಮನೋರಂಜನೆ ನೀಡುವ ಚಿತ್ರ ಇದಾಗಲಿದೆ.
ಯೋಗರಾಜ್ ಭಟ್ ಹಾಗೂ ಗಣೇಶ್ ಜೋಡಿಯ “ಗಾಳಿಪಟ” ಯಶಸ್ಸು ಕಂಡಿತ್ತು. ‘ಗಾಳಿಪಟ 2’ ಸಹ ಹಾಡುಗಳ ಹಾಗೂ ಟ್ರೇಲರ್ ಮೂಲಕ ಈಗಾಗಲೇ ಗೆದ್ದಿದೆ. ಚಿತ್ರ ಕೂಡ ಭರ್ಜರಿ ಗೆಲವು ಕಾಣಲಿದೆ ಎಂದು ರಮೇಶ್ ಅರವಿಂದ್ ಹಾರೈಸಿದರು. ‘ಯೋಗರಾಜ್ ಭಟ್ಟರು ನಿರ್ದೇಶಕರಾಗಿ, ಗೀತರಚನೆಕಾರರಾಗಿ ಹಾಗೂ ಸಂಭಾಷಣೆಕಾರರಾಗೂ ಜನಪ್ರಿಯ. ಅದಕ್ಕೆ ಈ ಚಿತ್ರದ ಟ್ರೇಲರ್ ಸಾಕ್ಷಿ. ಅವರ ಮತ್ತು ಗಣೇಶ್ ಜೊತೆಯಾಟದಲ್ಲಿ ಈ ಚಿತ್ರ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಇದೆ’ ಎಂದು ಉಪೇಂದ್ರ ಹೇಳಿದರು.
ಗಣೇಶ್ ಸಹ ಅವರ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ಬಗ್ಗೆ ಮಾತನಾಡಿದರು. ‘ನನ್ನ ಹಾಗೂ ಭಟ್ಟರ ಕಾಂಬಿನೇಶನ್ ನಲ್ಲಿ ಕೆಲವು ಚಿತ್ರಗಳು ಬಂದಿದೆ. ಆದರೆ ನಾನು ಯಾವತ್ತು ಯಾವ ಚಿತ್ರದ ಕುರಿತು ಅವರಿಗೆ ಫೋನ್ ಮಾಡಿರಲಿಲ್ಲ. ಆದರೆ ಈ ಚಿತ್ರದ ಡಬ್ಬಿಂಗ್ ಆದ ಮೇಲೆ ಫೋನ್ ಮಾಡಿ ಅದ್ಭುತ ಚಿತ್ರ ಮಾಡಿದ್ದೀರಾ ಅಂತ ಹೇಳಿ ಅಭಿನಂದನೆಗಳನ್ನು ತಿಳಿಸಿದೆ. ನಿಜಕ್ಕೂ “ಗಾಳಿಪಟ 2” ತುಂಬಾ ಚೆನ್ನಾಗಿದೆ. ನೀವೆಲ್ಲಾ ನೋಡಿ ಹಾರೈಸಿ’ ಎಂದರು ಗಣೇಶ್.