Dharani Mandala Madhyadolage 4/5
ಒಂದೇ ಸಿನಿಮಾದಲ್ಲಿ ಏಕಕಾಲದಲ್ಲಿ ನಡೆಯುವ ಟ್ರ್ಯಾಕುಗಳು. ನಾಲ್ಕಾರು ಕಡೆಗಳಲ್ಲಿ ನಡೆಯುವ ಕತೆ ಕಡೆಗೆ ಒಂದೇ ಕಡೆಗೆ ಬಂದು ಸೇರುವ ಧಾಟಿಯ ಸಿನಿಮಾಗಳು ಸಾಕಷ್ಟು ಬಂದಿವೆ. ಆದರೆ ಅವೆಲ್ಲಕ್ಕಿಂತಾ ಭಿನ್ನ ರೀತಿಯಲ್ಲಿ ಅರಳಿರುವ ಸಿನಿಮಾ ಧರಣಿಮಂಡಲ ಮಧ್ಯದೊಳಗೆ. ಈ ಚಿತ್ರದಲ್ಲಿ ಒಬ್ಬ ಹೀರೋ, ಒಂದು ಕತೆಯಿಲ್ಲ. ಏಳೆಂಟು ವೆರೈಟಿಯ ಕತೆಯ ಜೊತೆಗೆ ಚೆಲ್ಲಾಪಿಲ್ಲಿಯಾದ ಸಾಕಷ್ಟು ಪಾತ್ರಗಳು, ಮಧ್ಯಂತರದ ಹೊತ್ತಿಗೆ ಬಂದು ಒಂದು ಕಡೆ ಜಮಾವಣೆಯಾಗುತ್ತವೆ. ಮತ್ತೆ ಎಲ್ಲೆಲ್ಲೋ ಚೆದುರಿಹೋಗುತ್ತವೆ. ಹಾಗೆ ಅಸ್ತವ್ಯಸ್ತಗೊಂಡ ಪಾತ್ರಗಳು ಮತ್ತೆ ಒಂದು ಕಡೆ ಸೇರುತ್ತವಾ? ಅನ್ನೋದು ಕಟ್ಟಕಡೆಗೆ ಗೊತ್ತಾಗುತ್ತದೆ.
ಪ್ರೀತಿ ಅಂದರೆ ಹುಡುಕೋದಲ್ಲ. ಅದಾಗದೇ ಸಿಗೋದು. ಕೆಲವೊಂದು ಸಲ ಕಳೆದುಕೊಂಡ ವಸ್ತುಗಳು ಸಿಕ್ಕಾಗ ಸಿಕ್ಕಾಪಟ್ಟೆ ಖುಷಿಯಾಗತ್ತೆ. ಕಳಕೊಳ್ಳಲೇಬಾರದು ಅಂತಿದ್ದ ವ್ಯಕ್ತಿಗಳು ಮತ್ತೆ ಸಿಕ್ಕರೆ ಹೇಗಿರುತ್ತದೆ? ಹಾಗೆ ಸಿಕ್ಕ ಜೀವ ಮತ್ತೆ ದೂರಾದಾಗ ಎದುರಾಗುವ ಸಂಕಟ ಎಂಥದ್ದು ಅನ್ನೋದನ್ನು ನವೀನ್ ಶಂಕರ್ ಮತ್ತು ಐಶಾನಿ ಪಾತ್ರಗಳು ಹೇಳುತ್ತವೆ.
ಇನ್ನೇನು ಹೆತ್ತವರು ಬಂದು ಜೊತೆಯಾಗಲಿದ್ದಾರೆ. ಅದರ ಜೊತೆ ಹೊಸ ಜೀವವೊಂದು ಮನೆ-ಮನ ತುಂಬಲಿದೆ ಎನ್ನುವ ನಿರೀಕ್ಷೆಯಲ್ಲಿದ್ದವರ ಬದುಕಲ್ಲಿ ಏನೆಲ್ಲಾ ಘಟನೆಗಳು ಸಂಭವಿಸುತ್ತವೆ ಎನ್ನುವ ವಿಚಾರವನ್ನು ಕೂಡಾ ಇಲ್ಲಿ ಅನಾವರಣಗೊಂಡಿದೆ.
ಬೆಂಗಳೂರೆನ್ನುವ ಕೇಂದ್ರ ಸ್ಥಾನದಲ್ಲಿ ಏಕಕಾಲದಲ್ಲಿ ನಡೆಯುವ ಹತ್ತಾರು ವಿಚಾರಗಳು, ಅದರ ಸುತ್ತುವರಿದ ಪಾತ್ರಗಳು.. ಇಲ್ಲಿ ಎಲ್ಲವೂ ಅನಿರೀಕ್ಷಿತ. ಇದು ಹೀಗೇ ಆಗುತ್ತದೆಂದುಕೊಂಡರೆ ಅದು ತಪ್ಪು. ಅಂದುಕೊಂಡಿದ್ದು ಒಂದಾದರೆ ಆಗುವುದೇ ಒಂದು. ಎದುರಾಗುವ ಕಷ್ಟಗಳು ಸವಾಲುಗಳು ಏನೇ ಆಗಿದ್ದರೂ ಕಡೆಯದಾಗಿ ಒಳ್ಳೇದು ಮಾಡಿದರಷ್ಟೇ ಇಲ್ಲಿ ಉತ್ತಮ ಫಲ. ಅವರವರು ಮಾಡಿದ್ದನ್ನು ಅವರೇ ಉಣ್ಣಬೇಕು ಎನ್ನುವ ಕರ್ಮಸಿದ್ದಾಂತದ ಆಧಾರದಲ್ಲಿ ʻಧರಣಿಮಂಡಲ ಮಧ್ಯದೊಳಗೆʼ ಚಿತ್ರ ರೂಪುಗೊಂಡಿದೆ.
ಇದು ನಿರ್ದೇಶಕರ ಸಿನಿಮಾ, ಕಲಾವಿದರ ಚಿತ್ರ ಅಂತೆಲ್ಲಾ ಹೇಳುತ್ತಾರಲ್ಲಾ? ಹಾಗೆ ಇದು ಅಕ್ಷರಶಃ ಸಂಕಲನಕಾರನ ಚಿತ್ರ. ಇಲ್ಲಿ ಹತ್ತೋ ಇಪ್ಪತ್ತೋ ಪಾತ್ರಗಳಿಲ್ಲ. ಎಣಿಸಿದರೆ ನೂರಕ್ಕೂ ಹೆಚ್ಚು ಜನ ಬಂದು ಹೋಗುತ್ತಾರೆ. ಏಳೆಂಟು ಕತೆ ಒಂದೇ ಕಡೆ ಅಡಕಗೊಂಡಿವೆ. ಅದೂ ಒಟ್ಟೊಟ್ಟಿಗೇ ಬೆರೆತುಹೋಗಿವೆ. ಇಂಥದ್ದೊಂದು ಚಿತ್ರಕ್ಕೆ ಸಂಕಲನ ಮಾಡೋದು ತೀರಾ ತ್ರಾಸದ ಕೆಲಸ.
ಎಡಿಟರ್ ಉಜ್ವಲ್ ಚಂದ್ರ ನೋಡುಗರಿಗೆ ಎಲ್ಲೂ ಗೊಂದಲವಾಗದಂತೆ ಕತ್ತರಿಸಿ ಪೋಣಿಸಿದ್ದಾರೆ. ಇದನ್ನು ಸಾಧ್ಯವಾಗಿಸಿರುವುದು ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್. ಹಿನ್ನೆಲೆ ಸಂಗೀತ ಒಟ್ಟು ಸಿನಿಮಾವನ್ನು ಮೇಲಕ್ಕೆತ್ತಿ ನಿಲ್ಲಿಸಿದೆ. ಸಿನಿಮಾದ ಗೆಲುವಿನಲ್ಲಿ ಈ ಮೂವರ ಪಾತ್ರ ದೊಡ್ಡದು. ಭೂಗತ ಜಗತ್ತು, ಮಾದಕ ಜಾಲ, ಅಂಗಾಗಗಳ ಕಳ್ಳತನ, ಪ್ರೀತಿ, ಪ್ರೇಮ ಎಲ್ಲವನ್ನೂ ಸೇರಿಸಿ ಒಂದೇ ಸಿನಿಮಾದಲ್ಲಿ ಒಂಚೂರು ಹೆಚ್ಚು ಅನ್ನಿಸುವಷ್ಟು ಕಂಟೆಂಟ್ ಇಟ್ಟು, ಅದು ಅಜೀರ್ಣವಾಗದಂತೆ ಎಚ್ಚರ ವಹಿಸಿರುವ ನಿರ್ದೇಶಕ ಶ್ರೀಧರ್ ಶಿಕಾರಿ ಪುರ ಶ್ರಮ ವಹಿಸಿ ಸಿನಿಮಾ ಕಟ್ಟಿರುವುದು ಗೊತ್ತಾಗುತ್ತದೆ.
ನವೀನ್ ಶಂಕರ್, ಐಶಾನಿ ಚೆಂದಗೆ ನಟಿಸಿದ್ದಾರೆ. ನಟ ಯಶ್ ಶೆಟ್ಟಿ ಅವರಿಗೆ ಎಲ್ಲರನ್ನೂ ಆವರಿಸಿಕೊಳ್ಳುವಂತೆ ನಟಿಸುವ ಕಲೆ ಸಿದ್ದಿಸಿದೆ. ಸಿದ್ದು ಮೂಲಿಮನಿ ಕೂಡಾ ಯಾವ ಪಾತ್ರವನ್ನೂ ನುಂಗಿಕೊಂಡು ನಟಿಸುವ ಕಲಾವಿದ ಅನ್ನೋದಿಲ್ಲಿ ಗೊತ್ತಾಗಿದೆ. ಮಹಂತೇಶ್, ಪ್ರಕಾಶ್ ತುಮಿನಾಡು ಮತ್ತವರ ಜೊತೆಗಾರ, ಡಿಸ್ಕೋ ಪಾತ್ರಧಾರಿ, ಚನ್ನಕೇಶವ, ಕರಿಸುಬ್ಬು… ಎಲ್ಲರೂ ಇಷ್ಟವಾಗುತ್ತಾರೆ.
ಈ ಚಿತ್ರದಲ್ಲಿ ಎರಡು ಹಾಡುಗಳು ಒಂದು ಫೈಟನ್ನು ಅನವಶ್ಯಕವಾಗಿ ತುರುಕಿದಂತೆ ಕಾಣುತ್ತದೆ. ಉಳಿದಂತೆ ಕನ್ನಡದ ಮಟ್ಟಿಗೆ ಇದು ವಿಶಿಷ್ಟ ಸಿನಿಮಾ. ಎಲ್ಲರೂ ನೋಡಿ, ಹರಸಿ!