ರಾಷ್ಟ್ರಪ್ರಶಸ್ತಿ ವಿಜೇತ ಚೇತನ್ ಮುಂಡಾಡಿ ನಿರ್ದೇಶನದ ಮತ್ತೊಂದು ಚಿತ್ರ.
“ಮದಿಪು” ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಚೇತನ್ ಮುಂಡಾಡಿ. ಪ್ರಸ್ತುತ ಇವರು ನಿರ್ದೇಶಿಸುತ್ತಿರುವ “ಭಾವಪೂರ್ಣ” ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 8 ರಿಂದ ಆರಂಭವಾಗಲಿದೆ. ಈ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.
ಈವರೆಗೂ ಕಲಾತ್ಮಕ ಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಇದು ಮೊದಲ ಕಮರ್ಷಿಯಲ್ ಚಿತ್ರ. ಇದು ತೊಂಭತ್ತರ ಕಾಲಘಟ್ಟದಲ್ಲಿ ನಡೆಯುವ ಕಥೆ. ಭಾವನೆಗಳೇ ಇಲ್ಲಿನ ಪಾತ್ರಗಳು. ಪುಟ್ಟಗ್ರಾಮವೊಂದರಲ್ಲಿ 50ರ ವಯಸ್ಸಿನ ವ್ಯಕ್ತಿಯಲ್ಲಿ ಚಿಗುರುವ ಅನಿವಾರ್ಯ ಬಯಕೆಯನ್ನು ಈಡೇರಿಸಿಕೊಳ್ಳಲು ಆತ ಪಡುವ ಪರಿಪಾಟಗಳೇ ಚಿತ್ರದ ಮುಖ್ಯ ಕಥಾಹಂದರ. ಧರ್ಮಣ್ಣ ಎಂಬ ಮುಖ್ಯಪಾತ್ರದಲ್ಲಿ ಹಿರಿಯ ನಟ ರಮೇಶ್ ಪಂಡಿತ್ ಅಭಿನಯಿಸುತ್ತಿದ್ದಾರೆ. ಮಂಜುನಾಥ್ ಹೆಗಡೆ ಮತ್ತೊಂದು ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೈಲಶ್ರೀ, ಮಂಗಳಾ, ನಾಗೇಂದ್ರ ಶಾ, ಅಥರ್ವ ಪ್ರಕಾಶ್, ವಿ.ಮನೋಹರ್, ಸುಜಯ್ ಶಾಸ್ತ್ರಿ, ಎಂ.ಕೆ.ಮಠ, ವಿನ್ಯಾ, ಉಗ್ರಂ ಮಂಜು, ಜೆಜಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸೆಪ್ಟೆಂಬರ್ 8 ರಿಂದ ಸೌತಡ್ಕ, ಸಾಗರ, ಜೋಗ, ಮುರುಡೇಶ್ವರದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಚೇತನ್ ಮುಂಡಾಡಿ ಚಿತ್ರದ ಕುರಿತು ಮಾಹಿತಿ ನೀಡಿದರು.
ಈ ಚಿತ್ರದಲ್ಲಿ ಧರ್ಮಣ್ಣ ಎನ್ನುವ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಅನ್ವೇಷಣೆಯ ಮೇಲೆ ಕಥೆ ಸಾಗುತ್ತದೆ ಎಂದು ರಮೇಶ್ ಪಂಡಿತ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ನನಗೆ ಅಳುವ ಹಾಗೂ ಸಂದೇಶ ನೀಡುವ ಚಿತ್ರಗಳಲ್ಲಿ ಆಸಕ್ತಿ ಇಲ್ಲ. ಜನ ಸಿನಿಮಾ ನೋಡಲು ಬರುವುದು ತಮ್ಮ ನಿತ್ಯದ ಕಷ್ಟಗಳನ್ನು ಮರೆಯುವುದಕ್ಕಾಗಿ. ಚಿತ್ರದಲ್ಲೂ ದುಖದ ಸಂಗತಿ ಇದ್ದರೆ ಯಾರು ಇಷ್ಟ ಪಡುವುದಿಲ್ಲ. ಹಾಗಾಗಿ ಚೇತನ್ ಮುಂಡಾಡಿ ಒಳ್ಳೆಯ ಮನೋರಂಜನೆಯಿರುವ ಕಥೆ ಮಾಡಿಕೊಂಡಿದ್ದಾರೆ. ಅವರಿಗೆ ಬೇಕಾದನ್ನು ಒದಗಿಸುವುದನ್ನು ನಾನು ಮಾಡುತ್ತೇನೆ ಎಂದರು ನಿರ್ಮಾಪಕ ಪ್ರಶಾಂತ್ ಅಂಜನಪ್ಪ.
“ಭಾವಪೂರ್ಣ” ದ ಬಗ್ಗೆ ಸವಿಸ್ತಾರವಾಗಿ ಸಂಭಾಷಣೆ ಬರೆದಿರುವ ಸುಂದರ್ ವಿವರಿಸಿದರು. ಮತ್ತೊಬ್ಬ ಮುಖ್ಯ ಪಾತ್ರಧಾರಿ ಮಂಜುನಾಥ್ ಹೆಗಡೆ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ವಿ.ಮನೋಹರ್ ಸಂಗೀತ ನಿರ್ದೇಶನ, ಪ್ರಸನ್ನ ಛಾಯಾಗ್ರಹಣ, ಕೀರ್ತಿ ಸಂಕಲನ ಹಾಗೂ ಅನಂತರಾಜ್ ಸಹ ನಿರ್ದೇಶನವಿರುವ ಈ ಚಿತ್ರಕ್ಕೆ ಸುಂದರ್ ವೀಣಾ ಸಂಭಾಷಣೆ ಬರೆದಿದ್ದಾರೆ.