ಅಭಿಷೇಕ್ ನಿರ್ದೇಶನದ “ಬ್ಯಾಂಕ್ ಆಫ್ ಭಾಗ್ಯಲಕ್ಷಿ” ಚಿತ್ರಕ್ಕೆ ಅಜೇಯ್ ರಾವ್ ನಾಯಕ.
“ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ದಂತಹ ಸೂಪರ್ ಹಿಟ್ ಚಿತ್ರಗಳ ನಿರ್ಮಾಪಕ ಹೆಚ್. ಕೆ ಪ್ರಕಾಶ್ ಅವರ ನಿರ್ಮಾಣದಲ್ಲಿ ‘ಬ್ಯಾಂಕ್ ಆಫ್ ಭಾಗ್ಯಲಕ್ಷಿ’ ಎಂಬ ಚಿತ್ರ ಬರುತ್ತಿದೆ.
ದೀಪಾವಳಿ ಸುಸಂದರ್ಭದಲ್ಲಿ ಅಜಯ್ ರಾವ್ ನಾಯಕರಾಗಿ ನಟಿಸುತ್ತಿರುವ ಈ ನೂತನ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ಶೀರ್ಷಿಕೆ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಹೊಸ ಪ್ರತಿಭೆಗಳಿಗೆ ಉತ್ತೇಜನ ನೀಡುತ್ತಾ ಬಂದಿರುವ ನಿರ್ಮಾಪಕ ಪ್ರಕಾಶ್ ಅವರು, ಈ ಚಿತ್ರವನ್ನು ನಿರ್ದೇಶಿಸಲು ನೂತನ ಪ್ರತಿಭೆ ಅಭಿಷೇಕ್ ಅವರಿಗೆ ಅವಕಾಶ ನೀಡಿದ್ದಾರೆ. ಸಿಂಪಲ್ ಸುನಿ ಅವರ ಜೊತೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಅನುಭವ ಅಭಿಷೇಕ್ ಅವರಿಗಿದೆ. ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಅಭಿಷೇಕ್, “ಪಿನಾಕ” ಎಂಬ ವಿ ಎಫ್ ಎಕ್ಸ್ ಸ್ಟುಡಿಯೋ ಹೊಂದಿದ್ದಾರೆ.
ಬ್ಯಾಂಕ್ ದರೋಡೆ ಮಾಡಲು ಹೊರಟಿರುವವರ ಸುತ್ತ ಈ ಕಥೆ ಹೆಣೆಯಲಾಗಿದೆ ಎಂದಿರುವ ನಿರ್ದೇಶಕರು, ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಹೆಚ್. ಕೆ ಪ್ರಕಾಶ್ ಅವರು ತಮ್ಮ ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಐದನೇ ಚಿತ್ರವಿದು.
ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ, ತೇಜಸ್ ಆರ್ ಸಂಕಲನ ಹಾಗೂ ರಾಘು ಅವರ ಕಲಾ ನಿರ್ದೇಶನ ‘ಬ್ಯಾಂಕ್ ಆಫ್ ಭಾಗ್ಯಲಕ್ಷಿ’ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ತಾರಬಳಗದ ಮಾಹಿತಿ ಸದ್ಯದಲ್ಲೇ ತಿಳಿಯಲಿದೆ.