BANARAS 4/5
ಅವಳು ಅಪ್ಪ-ಅಮ್ಮನನ್ನು ಕಳೆದುಕೊಂಡು, ಚಿಕ್ಕಪ್ಪ-ಚಿಕ್ಕಮ್ಮನ ಮಮತೆಯಲ್ಲಿ ಬೆಳೆದವಳು. ಓದುತ್ತಲೇ, ಉದಯೋನ್ಮುಖ ಹಾಡುಗಾರ್ತಿಯಾಗಿಯೂ ಹೆಸರು ಮಾಡಿರುತ್ತಾಳೆ. ಇಂತವಳ ಮುಂದೆ ಅದೊಂದು ದಿನ ಹುಡಗ ಪ್ರತ್ಯಕ್ಷನಾಗುತ್ತಾನೆ. ಅವಳ ಹೆಸರು, ಹಿನ್ನೆಲೆ, ಇಷ್ಟ-ಕಷ್ಟಗಳನ್ನೆಲ್ಲಾ ಪಟಪಟನೆ ವಿವರಿಸುತ್ತಾನೆ. ನಾನು ಭವಿಷ್ಯದಲ್ಲಿ ನಿನ್ನ ಗಂಡನಾಗುವವನು. ನಮಗೆ ಇಂಥದ್ದೇ ಹೆಸರಿನ ಹೆಣ್ಣುಮಗು ಹುಟ್ಟುತ್ತದೆ… ಎಂಬಿತ್ಯಾದಿಯಾಗಿ ತ್ರಿಕಾಲ ಜ್ಞಾನಿಯಂತೆ ಭವಿಷ್ಯ ನುಡಿಯುತ್ತಾನೆ. ಹಿಂದಿನದ್ದನ್ನು ಕರಾರುವ್ಕಾಗಿ ಹೇಳಿದವನು ಮುಂದಿನದ್ದೂ ಕರೆಕ್ಟಾಗಿ ನುಡಿಯುತ್ತಿರುಬೇಕು ಅಂತಾ ಆಕೆ ನಂಬುತ್ತಾಳೆ… ಅಲ್ಲಿಂದ ಅಸಲೀ ವರಸೆಯೂ ಶುರುವಾಗುತ್ತದೆ.
ಜೀವನವಿಡೀ ಮಾಡಿದ ಪಾಪ-ಕರ್ಮಗಳನ್ನು ತೊಳೆದುಕೊಳ್ಳಲು ಕೊನೆಗೆ ಕಾಶಿಗೆ ಹೋಗುತ್ತಾರಲ್ಲಾ? ಈ ಹುಡುಗ ಬದುಕಿನ ಶುರುವಿಗೇ ಪ್ರಾಯಶ್ಚಿತ್ತಕ್ಕಾಗಿ ಬನಾರಸಿಗೆ ಪ್ರಯಾಣ ಬೆಳೆಸುತ್ತಾನೆ. ಕ್ಷಮಿಸೇ ಅಂತಾ ಬೇಡುತ್ತಾ ಹುಡುಗಿಯ ಬೆನ್ನುಬಿದ್ದವನಿಗೆ ಬೊಗಸೆ ತುಂಬಾ ಪ್ರೀತಿಯೂ ಸಿಕ್ಕಿಬಿಡುತ್ತದೆ. ಸಿನಿಮಾದಲ್ಲಿರುವ ಸರ್ವನಾಶದಲ್ಲಿ ನವಸೃಷ್ಟಿ ಎನ್ನುವ ಡೈಲಾಗಿಗೆ ತಕ್ಕಂತೆ ಸುಡುಗಾಡಲ್ಲಿ ಪ್ರೇಮಾಂಕುರವಾಗುತ್ತದೆ. ಅಲ್ಲಿಗೆ ಕತೆ ಮುಗಿದುಹೋಯ್ತಲ್ಲಾ ಅಂದುಕೊಳ್ಳೋ ಹೊತ್ತಿಗೇ ಆರಂಭವಾಗುವುದು ʻಸಮಯದ ಆಟʼ. ಟೈಮ್ ಲೂಪ್ ಒಳಗೆ ಸಿಕ್ಕಿಬೀಳುವ ಹೀರೋ ಮುಂದಾಗುವ ಅನಾಹುತದಿಂದ ಪಾರಾಗಲು ಸಾಧ್ಯವಾ ಅನ್ನೋದು ಚಿತ್ರದ ಎರಡನೇ ಭಾಗವನ್ನು ಆವರಿಸಿಕೊಳ್ಳುತ್ತದೆ.
ಅಂದುಕೊಂಡಿದ್ದೆಲ್ಲಾ ನಡೆಯುವಂತಿದ್ದರೆ, ಅದು ನಡೆಯದಹಾಗೆ ತಪ್ಪಿಸುವುದು ಹೇಗೆ? ಬದುಕು ಭ್ರಮೆಯಲ್ಲಿ ಮುಳುಗಿರಬಹುದಾ? ಭ್ರಮೆಯೇ ಬದುಕಾಗಿರಬಹುದಾ? ಹೀಗೆ ಚಿತ್ರದಲ್ಲಿ ನಾಯಕನನ್ನು ಮಾತ್ರವಲ್ಲದೆ, ನೋಡುವ ಪ್ರೇಕ್ಷಕರಿಗೂ ಪ್ರಶ್ನೆಗಳು ಕಾಡಲು ಶುರುವಾಗಿಬಿಡುತ್ತದೆ. ಮುಂದೆ ಹೋದ ಬದುಕು ಮತ್ತೆ ಒಂದು ಸಲ ಹಿಂದೆ ಬರುವಂತಾಗಿಬಿಟ್ಟರೆ, ನಡೆದ ತಪ್ಪುಗಳನ್ನೆಲ್ಲಾ ಸರಿಪಡಿಸಿಕೊಳ್ಳಬಹುದಲ್ಲಾ? ಮಾನಸಿಕ ಮತ್ತು ಭೌತಿಕವಾಗಿ ನಮ್ಮನ್ನು ಬಿಟ್ಟು ಹೋದವರನ್ನೆಲ್ಲ ಉಳಿಸಿಕೊಂಡು ಬಿಡಬಹುದಲ್ಲವಾ? ಅಂತೆಲ್ಲಾ ಅನ್ನಿಸಲು ಆರಂಭವಾಗುತ್ತದೆ.
ಹೀಗೆ ಬನಾರಸ್ ಹಲವು ಬಗೆಯಲ್ಲಿ ನೋಡುಗರನ್ನು ಕಾಡುತ್ತದೆ. ಜೈದ್ ಖಾನ್ ಅಭಿನಯದ ಮೊದಲ ಸಿನಿಮಾ ಎನ್ನುವ ಕಾರಣಕ್ಕೆ ಹೆಚ್ಚು ಪ್ರಚಲಿತದಲ್ಲಿದ್ದ ಚಿತ್ರ ಬನಾರಸ್. ಸಿನಿಮಾ ವಿಚಾರದಲ್ಲಿ ಜೈದ್ ಪ್ರಚಾರ ಪಡೆದಿದ್ದಾರೆ ನಿಜ. ಆದರೆ ಚಿತ್ರದ ಒಳಗೆ ನಿರ್ದೇಶಕ ಜಯತೀರ್ಥ ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ. ಯಾಕೆಂದರೆ ಇದು ಅಪ್ಪಟ ಅವರದ್ದೇ ಶೈಲಿಯ ಸಿನಿಮಾ. ಸಾಮಾನ್ಯಕ್ಕೆ ದೊಡ್ಮನೆ ಹುಡುಗರು ಸಿನಿಮಾಗೆ ಬಂದಾಗ ಅವರ ತೇಜೋಮಂಡಲಕ್ಕೆ ಹೊಂದುವ ಕತೆ ಹೆಣೆದು, ಅವರ ಕುಟುಂಬದ ಇಮೇಜಿಗೆ ಅನುಗುಣವಾಗಿ ಸಿನಿಮಾ ಮಾಡಿದ ಸಾಕಷ್ಟು ನಿದರ್ಶನಗಳಿವೆ. ಜಯತೀರ್ಥ ಕೂಡಾ ಹಾಗೇ ಮಾಡಿದ್ದಾರಾ ಅನ್ನುವ ಅನುಮಾನ ಕೂಡಾ ಹಲವರಲ್ಲಿತ್ತು. ಆದರೆ ಬನಾರಸ್ ಅವೆಲ್ಲವನ್ನೂ ಸುಳ್ಳಾಗಿಸಿದೆ.
ಸ್ವತಃ ನಿರ್ಮಾಣದಲ್ಲಿ ಭಾಗಿಯಾಗಿದ್ದೂ, ನಿರ್ದೇಶಕರ ಕಲ್ಪನೆಯನ್ನು ಗೌರವಿಸಿ ಸಂಪೂರ್ಣ ಅವರಿಗೆ ಸ್ವಾತಂತ್ರ್ಯ ಕೊಟ್ಟ ಖಾನ್ ಕುಟುಂಬದ ಬಗ್ಗೆ ಗೌರವ ಹೆಚ್ಚಾಗುತ್ತದೆ. ಅಷ್ಟರ ಮಟ್ಟಿಗೆ ಬನಾರಸ್ ನಿರ್ದೇಶಕನ ಸಿನಿಮಾವಾಗಿದೆ. ದೇವರಾಜ್ ಮತ್ತು ಸುಜಯ್ ಶಾಸ್ತ್ರಿ ಹೇಳುವ ಸಣ್ಣ ಉಪಕತೆಗಳು ಚಿತ್ರದ ತೂಕ ಹೆಚ್ಚಿಸುತ್ತವೆ.
ಜೈದ್ ಖಾನ್ ಬನಾರಸಿನ ಒಂದೊಂದು ಫ್ರೇಮಿಗೂ ಮೆರುಗು ತರುವಂತೆ ನಟಿಸಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಾಯಕಿ ಸೋನಲ್ ಅವರನ್ನೂ ಪಕ್ಕಕ್ಕೆ ಸರಿಸಿ ಚೆಂದದ ಅಭಿನಯ ನೀಡಿದ್ದಾರೆ ಜೈದ್ ಖಾನ್. ಬನಾರಸ್ ನಿಜಕ್ಕೂ ಕನ್ನಡಕ್ಕೊಬ್ಬ ಸ್ಪುರದ್ರೂಪಿ ನಾಯಕನನ್ನು ಕೊಡಮಾಡಿದೆ. ಸುಜಯ್ ಶಾಸ್ತ್ರಿ ನಿರ್ವಹಿಸಿರುವ ಪಾತ್ರ ನೋಡಿದರೆ ಒಂದು ಸಲ ಅವರನ್ನು ಬಿಗಿದಪ್ಪಬೇಕು ಅಂತಾ ಯಾರಿಗಾದರೂ ಅನ್ನಿಸದೇ ಇರದು.
ಅಚ್ಯುತ್ ಕುಮಾರ್ ಪಾತ್ರಕ್ಕೆ ಕೂಡಾ ಅತ್ಯದ್ಭುತ ಟ್ವಿಸ್ಟ್ ಇದ್ದು ಸಖತ್ ಮಜಾ ಕೊಡುತ್ತದೆ. ಅಚ್ಯುತ್ ಬಿಟ್ಟು ಬೇರೆ ಯಾರೂ ಈ ಪಾತ್ರವನ್ನು ಇಷ್ಟು ಚೆಂದಗೆ ನಿಭಾಯಿಸಲು ಸಾಧ್ಯವಿರಲಿಲ್ಲ. ಇನ್ನು ಚಿಕ್ಕಮ್ಮನ ಪಾತ್ರಕ್ಕೂ ಮಹತ್ವ ಕೊಟ್ಟು, ನಗಿಸುವಂತೆ ಮಾಡಿರುವುದು ನಿರ್ದೇಶಕರ ಬುದ್ದಿವಂತಿಕೆ. ಸಪ್ನಾ ರಾಜ್ ಕೂಡಾ ಪಾತ್ರಕ್ಕೆ ಹೇಳಿಮಾಡಿಸಿದಂತೆ ವರ್ತಿಸಿದ್ದಾರೆ. ಇಡೀ ಸಿನಿಮಾದ ಕತೆಗೆ ಟ್ವಿಸ್ಟ್ ಕೊಡುವ ಕೀ ರೋಲಿನಲ್ಲಿ ಕಾಣಿಸಿಕೊಂಡಿರುವ ಬರ್ಕತ್ ಅಲಿಗೆ ಇಲ್ಲಿ ಪವರ್ ಫುಲ್ ಪಾತ್ರ ದಕ್ಕಿದೆ. ಅದ್ವೈತ ಗುರುಮೂರ್ತಿ ಅವರ ಬೆರಗು ಮೂಡಿಸುವ ಛಾಯಾಗ್ರಹಣ ಬನಾರಸ್ಸಿನ ಮೆರುಗು ಹೆಚ್ಚಿಸಿದೆ. ಅಜನೀಶ್ ಲೋಕನಾಥ್ ಅದ್ಯಾವ ಗಳಿಗೆಯಲ್ಲಿ ಹೊಸೆದ ಟ್ಯೂನುಗಳೋ ಅವು.. ಥೇಟು ಗಂಗೆಯಂತೆಯೇ ವಿಸ್ತಾರವಾಗಿದೆ. ಕವಿರತ್ನ ನಾಗೇಂದ್ರ ಪ್ರಸಾದ್ ಅವರ ಮಾಯಗಂಗೇ ಮಾಯಗಂಗೆ ಮನಸ್ಸಿನ ತುಂಬಾ ಆವರಿಸಿಕೊಳ್ಳುತ್ತದೆ.ಬಾಯ್ಕಾಟು ಅಂತೆಲ್ಲಾ ಬೂಟಾಟಿಕೆಯ ಮಾತಾಡುತ್ತಿರುವವರ ಸ್ವಾಟೆಗೆ ತಿವಿಯುವಂತೆ ಮೂಡಿಬಂದಿರುವ ಸಿನಿಮಾ ಬನಾರಸ್. ಬಹುಶಃ ಹುಸಿ ನಿಂದಕರೂ ಒಮ್ಮೆ ಬನಾರಸನ್ನು ನೋಡಿಬಂದರೆ ಅವರ ಮಾನಸಿಕ ಕ್ಲೇಶಗಳನ್ನು ಗಂಗಾಮಾತೆ ಶುದ್ಧಮಾಡಬಹುದು!