ಕನ್ನಡ ಕಿರುತೆರೆ ಲೋಕದಲ್ಲಿ ಅದ್ಭುತವನ್ನೇ ಸೃಷ್ಟಿಸಿ ದಾಖಲೆ ನಿರ್ಮಿಸಿದ್ದ ಕಿರುತೆರೆ ತಜ್ಞ ಅನೂಪ್ ಚಂದ್ರಶೇಖರನ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಇನ್ 10 ಮೀಡಿಯಾ ಎಂಬ ಅಂತಾರಾಷ್ಟ್ರೀಯ ಓಟಿಟಿ ಮತ್ತು ಡಿಜಿಟಲ್ ಮಾಧ್ಯಮದ ರೀಜನಲ್ ಕಂಟೆಂಟ್ ವಿಭಾಗದ ಸಿಒಒ ಆಗಿ ನೇಮಕಗೊಂಡಿದ್ದಾರೆ. ಒಂದಷ್ಟು ಕಂಟೆಂಟ್ ಆಧಾರಿತ ಕನ್ನಡ ಸಿನೆಮಾಗಳ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಅನೂಪ್ ಹೊತ್ತಿದ್ದಾರೆ. ಇಡೀ ದಕ್ಷಿಣ ಭಾರತದ ಮಾರುಕಟ್ಟೆಯ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿರುವ ಅವರು, ಇನ್10 ಮೀಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಆದಿತ್ಯ ಪೆಟ್ಟಿ ಅವರಿಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ.
ಅನೂಪ್ ಚಂದ್ರಶೇಖರನ್ ಒಂದು ಕಾಲದಲ್ಲಿ ಕನ್ನಡ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿ ಮಾಡಿದವರು. ಮೂರು ದಶಕಗಳ ಕಾಲ ಮನರಂಜನಾ ಮಾಧ್ಯಮದಲ್ಲಿ ಅನುಭವ ಹೊಂದಿರುವ ಇವರು, ಇದಕ್ಕೂ ಮೊದಲು ಕಲರ್ಸ್ ತಮಿಳು ಚಾನೆಲ್ ನ ಬಿಜಿನೆಸ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಕನ್ನಡದ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿರುವ, ಒಂದು ಕಾಲದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ್ದ ಸ್ಟಾರ್ ಸುವರ್ಣ, ಜೀ ಕನ್ನಡದಲ್ಲಿ ಇವರು ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು, ಕನ್ನಡದ ಕೋಟ್ಯಧಿಪತಿ ಮೊದಲಾದ ಅತೀ ಜನಪ್ರಿಯ ರಿಯಾಲಿಟಿ ಶೋಗಳನ್ನು ಕನ್ನಡಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಿರುತೆರೆಗೆ ಕರೆತಂದ ಕ್ರೆಡಿಟ್ ಇವರಿಗೇ ಸಲ್ಲುತ್ತದೆ. ಇವರು ಮುಖ್ಯಸ್ಥರಾಗಿದ್ದಾಗ ಸುವರ್ಣ ವಾಹಿನಿ ನಂಬರ್ ಒನ್ ಸ್ಥಾನಕ್ಕೆ ಬಂದು ದಾಖಲೆ ನಿರ್ಮಿಸಿತ್ತು. ಶ್ರೀಲಂಕಾ ಮೂಲದ ವಾಹಿಯಿಯೊಂದನ್ನ ಲಾಂಚ್ ಮಾಡಿರುವ ಅನೂಪ್, ಕನ್ನಡದಲ್ಲಿ ಹೊಸ ಹೊಸ ಕಥೆ ಆಧಾರಿತ ವೆಬ್ ಸೀರೀಸ್ ಮತ್ತು ಚಲನಚಿತ್ರಗಳನ್ನು ನಿರ್ಮಾಣ ಮಾಡುವ ಯೋಜನೆ ಹೊಂದಿದ್ದಾರೆ.
ಈಗಾಗಲೇ ತಮಿಳಿನಲ್ಲಿ ಎರಡು ಸಿನೆಮಾಗಳನ್ನು ಕೈಗೆತ್ತಿಕೊಂಡಿದ್ದು ಕನ್ನಡಕ್ಕೆ ಇವರು ಮತ್ತೆ ವಾಪಾಸಾಗಿರುವುದು ಇಡೀ ಚಿತ್ರೋದ್ಯಮಕ್ಕೆ ನವೋಲ್ಲಾಸ ತಂದಿದೆ. ಕನ್ನಡ ಚಿತ್ರೋದ್ಯಮದಲ್ಲಿಯೂ ಇವರು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಮುಂದಾಗಿರುವುದು ಮತ್ತಷ್ಟು ದಾಖಲೆ ನಿರ್ಮಾಣಕ್ಕೆ ನಾಂದಿ ಹಾಡುವ ಲಕ್ಷಣಗಳು ಕಾಣುತ್ತಿದೆ.