ಸಿನಿಮಾ ಸಂಗೀತದಲ್ಲಿ ಅಚ್ಚಳಿಯದ ಗುರುತು ಮೂಡಿಸಿ, ಹಿಟ್ಮೇಲ್ ಹಿಟ್ ಕೊಟ್ಟ ಬಹುದೊಡ್ಡ ಹೆಸರು ವಿ. ಮನೋಹರ್. ಜೊತೆಗೆ ಕಚಗುಳಿ ಇಡುವ ಚಿತ್ರ ಸಾಹಿತ್ಯದಲ್ಲೂ ಇವರದ್ದು ಗೆಲುವಿನ ಕೈ. ಬರದದ್ದರಲ್ಲಿ ಹೆಚ್ಚಿನವು ಜನಮನ ರಂಜಿಸಿ ಗೆದ್ದು ಬೀಗಿವೆ. ಇವರ ಸಂಗೀತ ನಿರ್ದೇಶನದ ಹಾಡುಗಳು ಇಂದಿಗೂ ಜನಜನಿತ. ಒಂದು ಕಾಲದ ಈ ಹಿಟ್ ಸಂಗೀತ ನಿರ್ದೇಶಕ ಸೈಡ್ ಲೈನ್ ಆದದ್ದು ಇಂಡಸ್ಟ್ರಿ ಲಾಸ್ ಎನ್ನಬಹುದು.
ಸದ್ಯ ಒಂದೆರಡು ಹಾಡು ಹಿಟ್ ಕೊಟ್ಟವರು ಫೋಸು ಕೊಡವ ಈ ಕಾಲದಲ್ಲಿ, ಹಿಟ್ ಹಾಡುಗಳ ರಾಶಿಯನ್ನೇ ಹಾಕಿರುವ ಮನೋಹರ್ ಸೈಡ್ ಲೈನ್ ಆಗಿದ್ದು, ಹೊಸ ಅಲೆಯ ಹೆಸರಲ್ಲಿ ಇವರ ಕನಸುಗಳು ಕೊಚ್ಚಿ ಹೋದದ್ದು ಮಾತ್ರ ದುರಂತವೇ ಸರಿ. ಸೌಮ್ಯ ಸ್ವಭಾವವೇ ಒಂದೊಮ್ಮೆ ಇವರಿಗೆ ಮುಳುವಾಯಿತೇನೋ ಎಂಬಷ್ಟರ ಮಟ್ಟಿಗೆ ಇವರದ್ದು ಸರಳ ಸಜ್ಜನಿಕೆಯ ವ್ಯೆಕ್ತಿತ್ವ.
ಅನ್ಯಾಯಕ್ಕೆ ಹೋಗದ, ಅಪ್ಪಿ ತಪ್ಪಿಯೂ ಬಕೀಟು ಹಿಡಿಯದ ಕಟ್ಟರ್ ಸ್ವಾಭಿಮಾನಿ. ಕರಾವಳಿ ಮೂಲದ ಇವರು ಅದೆಷ್ಟೋ ಸಿನಿಮಾಸಕ್ತರಿಗೆ ಬದುಕು ಕೊಟ್ಟವರು. ಮದುವೆಯಾಗುವ ಮೊದಲು ಇವರ ಮನೆ ಸಿನಿಮಾಸಕ್ತರಿಗೆ ಧರ್ಮ ಛತ್ರವಿದ್ದಂತಿತ್ತು. ಅದರಲ್ಲೂ ವಿಶೇಷವಾಗಿ ಕರಾವಳಿ ಮೂಲದಿಂದ ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳುವ ಕನಸು ಹೊತ್ತು ಬೆಂಗಳೂರು ಬಸ್ಸು ಹತ್ತಿ ಬಂದ ಅನೇಕರು ಮನೋಹರ್ ಛತ್ರದಲ್ಲೇ ಬದುಕಿ ಹೋಗಿದ್ದಾರೆ. ತೀರಾ ಹತ್ತಿರದವರು ಹೇಳುವಂತೆ ಅಲ್ಲೇ ತಿಂದು ಅಲ್ಲೇ …. ಹಾಳಗೇಡಿತನ ತೋರಿ ಹೋದವರಿದ್ದಾರೆ. ಎಂದಿಗೂ ಆ ಬಗ್ಗೆ ದ್ವೇಷ ಕಾರದ ಮನೋಹರ್, ಹಾಳಗೇಡಿ ಎದುರಾದರೂ, ಮತ್ತದೇ ಮುಗ್ಧ ನಗು ಬೀರಿ ಮುಂದೆ ಸಾಗುತ್ತಾರೆ. ಅಸಲಿಗೆ ಇವರದ್ದು ಅದಾಗಲೇ ಸಾಧನೆಯ ಪಟ್ಟಿಯಲ್ಲಿ ಗುರುತಾದ ಹೆಸರು. ಆದರೂ, ಇಂದಿಗೂ ಅದೊಂದು ಕೊರಗು ಕೊರೆಯುತ್ತಲೇ ಇತ್ತು. ಸಂಗೀತ ಕ್ಷೇತ್ರದಲ್ಲಿ ಏರಿದ ಎತ್ತರಕ್ಕೆ ತಕ್ಕಂತೆ ಸಿನಿಮಾ ನಿರ್ದೇಶಕನಾಗಿಯೂ ಒಳ್ಳೊಳ್ಳೆ ಸಿನಿಮಾ ಕೊಡುವ ಇವರ ಕನಸು ಕಮರುತ್ತಾ ಸಾಗಿ ಕಳೆದು ಹೋದದ್ದು ಬರೋಬ್ಬರಿ ಇಪ್ಪತ್ಮೂರು ವರ್ಷ!!.
ಹೌದು. ತನ್ನ ಯಶಸ್ವಿ ದಿನಗಳಲ್ಲಿ ‘ಓ ಮಲ್ಲಿಗೆ’ಯಂಥ ಸಿನಿಮಾ ಕೊಟ್ಟ ನಿರ್ದೇಶಕ, ಎರಡನೇ ಸಿನಿಮಾ ‘ಇಂದ್ರ ಧನುಷ್’ ಕೊಟ್ಟ ನಂತರದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಆಸೆ ಕೈಗೂಡಿರಲಿಲ್ಲ. ಸಿನಿಮಾ ಸೆಟ್ಟೇರುತ್ತಿದ್ದವೇ ಹೊರತು; ಕಾರಣಾಂತರಗಳಿಂದ ಪೂರ್ತಿಗೊಳ್ಳಲೇ ಇಲ್ಲ. ಪರಿಣಾಮವಾಗಿ ನಿರ್ದೇಶನದ ಹಿಂದೆಬಿದ್ದು ಒಂದಷ್ಟು ಸಂಗೀತ ನಿರ್ದೇಶನ ಮಾಡಬೇಕಿದ್ದ ಸಿನಿಮಾಗಳನ್ನ ಕಳೆದುಕೊಂಡರು. ವರುಷ ಕಳೆದಂತೆ ಚೇತರಿಸಿಕೊಂಡು ಮತ್ತೆ ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಗುಡುಗಿದರು. ಇಪ್ಪತ್ಮೂರು ವರುಷ ಕಳೆದರೂ, ನಿರ್ದೇಶನದ ಕನಸು ಕನಸಾಗೇ ಇತ್ತು. ಅದೀಗ ನನಸಾಗಿದೆ. “ದರ್ಬಾರ್” ಎಂಬ ಔಟ್ ಅಂಡ್ ಔಟ್ ಕಾಮಿಡಿ ಚಿತ್ರದ ಮೂಲಕ ಮತ್ತೆ ಡೈರೆಕ್ಟರ್ ಕ್ಯಾಪ್ ತಲೆಗೇರಿಸಿದ ಮನೋಹರ್, ಸದ್ದಿಲ್ಲದೆ ಚಿತ್ರ ಮುಗಿಸಿ ತೆರೆಕಾಣಿಸಲು ತಯಾರಾಗಿದ್ದಾರೆ. ಅಲ್ಲಿಗೆ ಭರ್ಜರಿ ಇಪ್ಪತ್ಮೂರು ವರ್ಷದ ಸುದೀರ್ಘ ವನವಾಸ ಮುಗಿಸಿಕೊಂಡಿದ್ದಾರೆ.
ಈ ಚಿತ್ರವು ಜೂನ್ 9 ರಂದು ಬಿಡುಗಡೆಗೆಯಾಗುತ್ತಿದ್ದು, ಚಿತ್ರದ ಪ್ರಚಾರಕ್ಕಾಗಿ ದರ್ಬಾರ್ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಹೊರಟಿದ್ದು, ಈ ಕುರಿತಂತೆ ಮಾಹಿತಿ ನೀಡಲು ಬೆಂಗಳೂರಿನ ಎಸ್.ಆರ್.ವಿ. ಥಿಯೇಟರಿನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.
“ದರ್ಬಾರ್ ಚಿತ್ರದ ಮೂಲಕ ಪರಿಶುದ್ದವಾದ ಹಾಸ್ಯ ಚಿತ್ರ ಕಟ್ಟಿಕೊಟ್ಟಿದ್ದೇವೆ” ಎನ್ನುವ ಇವರು “ಇತ್ತೀಚಿನ ದಿನಗಳಲ್ಲಿ ಡಬ್ಬಲ್ ಮೀನಿಂಗ್ ಹಾಸ್ಯದ ಚಿತ್ರಗಳೇ ಹೆಚ್ಚಾಗಿ ಬರುತ್ತಿರುವುದರ ಬಗ್ಗೆ ಬೇಸರ ವ್ಯಕ್ತ ಪಡಿಸಿದರು. ಈ ಚಿತ್ರದ ಮೂಲಕ ಜನ ಮೆಚ್ಚುವ ಪರಿಶುದ್ಧವಾದ ಹಾಸ್ಯ ಚಿತ್ರ ಕೊಟ್ಟ ತೃಪ್ತಿ ಸಿಕ್ಕಿದೆ” ಎಂದರು. ಚಿತ್ರಕ್ಕೆ ಹಣ ಹೂಡಿ ನಾಯಕನಾಗಿರುವ ಸತೀಶ್ ಬಗ್ಗೆ ಮಾತನಾಡಿ “ಸತೀಶ್ ನನಗೆ ಹಿಂದೆ ದಿಲ್ದಾರ್ ಚಿತ್ರದ ಸಮಯದಲ್ಲಿ ಸ್ನೇಹಿತರಾಗಿದ್ದರು. ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಸಬ್ಜೆಕ್ಟನ್ನು ಅವರು ತುಂಬಾ ಚೆನ್ನಾಗಿ ಕಥೆ ಮಾಡಿಕೊಂಡಿದ್ದರು. ಅವರೇ ಈ ಕಥೆಗೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು ಸಿನಿಮಾ ಖರ್ಚಿನ ಬಗ್ಗೆ ಯೋಚಿಸದೆ, ‘ದರ್ಬಾರ್ ಪ್ರೊಡಕ್ಷನ್ಸ್’ ಮೂಲಕ ಕ್ವಾಲಿಟಿ ಸಿನಿಮಾ ಮಾಡಿದ್ದಾರೆ”. ಎಂದರು. ಚಿತ್ರದಲ್ಲಿ ಮಂಡ್ಯ, ಮದ್ದೂರು ಭಾಗದ ರಂಗಭೂಮಿ ಕಲಾವಿದರನ್ನೇ ಹೆಚ್ಚಾಗಿ ಬಳಸಿಕೊಳಡಿದ್ದೇವೆ. ಈ ಸಿನಿಮಾ ರಿಲೀಸಾದ ನಂತರ ಸಾಕಷ್ಟು ಜನ ಬೆಳಕಿಗೆ ಬರ್ತಾರೆ. ಹಾಗೆಯೇ, ಚಿತ್ರದಲ್ಲಿ ಗಿಚ್ಚಿ ಗಿಲಿಗಿಲಿ ಕಾರ್ತೀಕ್ , ಕಾಮಿಡಿ ಕಿಲಾಡಿ ಸಂತು, ಸಾಧು ಕೋಕಿಲ, ನವೀನ್ ಪಡೀಲ್ ಜೋಡಿ ನೋಡುಗರನ್ನು ರಂಜಿಸುತ್ತದೆ. ಈಗಾಗಲೇ ಉಪೇಂದ್ರ ಹಾಡಿರುವ ಎಲೆಕ್ಷನ್ ಸಾಂಗ್, ಡ್ಯುಯೆಟ್ ಸಾಂಗ್ ಜನ ಇಷ್ಟಪಟ್ಟಿದ್ದಾರೆ. ಚಂದನ್ ಶೆಟ್ಟಿ ಹಾಡಿರುವ ಹಾಡನ್ನು ಇನ್ನಷ್ಟೆ ರಿಲೀಸ್ ಮಾಡಬೇಕಿದೆ. ಇಡೀ ಚಿತ್ರವನ್ನು ಮಾರದೇವನಹಳ್ಲಿ ಎಂಬಲ್ಲಿ ಚಿತ್ರೀಕರಿಸಿದ್ದೇವೆ. ಆ ಊರ ಜನರು ಅಷ್ಟೇ ಚೆನ್ನಾಗಿ ಸಹಕರಿಸಿದರು” ಎಂದರು.
ಒಟ್ಟಿನಲ್ಲಿ ಚಿತ್ರತಂಡ ಹೇಳಿಕೊಂಡಂತೆ ಇದೊಂದು ರಾಜಕೀಯ ವಿಡಂಭನೆಯ ಹಾಸ್ಯಭರಿತ ಚಿತ್ರ. ಮೊನ್ನೆ ಒಟ್ಟಿಗೆ ಕುಳಿತು, ಚಿತ್ರದ ಪ್ರೀವ್ಯೂವ್ ನೋಡಿದ ಚಿತ್ರತಂಡಕ್ಕೆ ಚಿತ್ರದ ಮೇಲೆ ನಂಬಿಕೆ ಬಂದಿದೆಯಂತೆ. ಅಂದುಕೊಂಡಂತೆ ಚಿತ್ರ ಮೂಡಿಬಂದಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿದೆ ಎನ್ನಲಾಗಿದೆ. ಹಾಗೆಯೇ ಆಗಲಿ. ಕಳೆದ ಇಪ್ಪತ್ಮೂರು ವರ್ಷಗಳ ಸತತ ಪ್ರಯತ್ನದ ನಂತರ ಮತ್ತೆ ನಿರ್ದೇಶನಕ್ಕಿಳಿದಿರುವ ವಿ. ಮನೋಹರ್ , ಇತ್ತೀಚಿನ ಡಬ್ಬಲ್ ಮೀನಿಂಗಿಗೆ ಬೇಸತ್ತು, ಪರಿಶುದ್ಧವಾದ ಹಾಸ್ಯದ ಮೂಲಕವೇ ಜನಮನ ರಂಜಿಸುವೆ ಎಂದು ಹೊರಟಿದ್ದಾರೆ. ಇವರ ನಂಬಿಕೆ, ಗೆಲುವಿನ ಹಸಿವು, ಹಂಬಲ ಜೂನ್ ಒಂಬತ್ತರಂದು ಪರೀಕ್ಷೆಗೆ ಒಡ್ಡಿಕೊಳ್ಳಲಿದೆ. ಪ್ರಯತ್ನಂ ಕಾರ್ಯ ಸಿದ್ಧಿ..
ನಾಗರಾಜ್ ಅರೆಹೊಳೆ.