ವರ್ಸಟೈಲ್ ನಟ ‘ಪೃಥ್ವಿ ಅಂಬರ್’ ನಟನೆಯ ಮತ್ಸ್ಯಗಂಧ ಚಿತ್ರದ ಹಾಡೊಂದು ಬಿಡುಗಡೆ ಕಂಡು ಸಖತ್ ಸದ್ದು ಮಾಡುತ್ತಿದೆ. “ತೆಗಿ ತೆಗಿ ಬಾಗಿಲ್ ತೆಗಿ ಭಾಗೀರಥಿ, ನಮ್ಮೆಲ್ಲರ ಆಸೆಗೆ ನೀನೇ ಗತಿ” ಎಂಬ ಕಚಗುಳಿ ಇಡುವ ಹಾಡು, ಇಂದು ನಾಗರಾಜ್ ಮಾದಕ ಧ್ವನಿಯಲ್ಲಿ ಪಡ್ಡೆಗಳಿಗೆ ಮತ್ತೇರಿಸುತ್ತಿದೆ. ಚಿತ್ರದ ನಿರ್ದೇಶಕ ದೇವರಾಜ್ ಪೂಜಾರಿ ಸಾಹಿತ್ಯದಲ್ಲಿ ಹಸಿ- ಬಿಸಿತನ ಮೇಳೈಸಿದ್ದು ಪಡ್ಡೆಗಳ ಪಾಲಿಗೆ ರಸದೌತಣ ಉಣಿಸಿದೆ. “ಮೇ ಆಯಾ.. ಮೇ ಆಯಾ” ಎಂಬ ಮಾದಕ ಸ್ವರದೊಂದಿಗೆ ಶುರುವಾಗೋ ಈ ಹಾಡಿಗೆ ಧನಂಜಯ್ ಕೊರಿಯೋಗ್ರಫಿ ಕಣ್ಣು ಕೋರೈಸುವಂತಿದ್ದು, ಅಂಜಲಿ ಪಾಂಡೆ ಎಂಬಾಕೆಯ ಮೈ ಬಳುಕಿನಲ್ಲಿ ಹಾಡು ಸಖತ್ ಹಾಟ್ ಆಗಿ ಮೂಡಿ ಬಂದಿದೆ. ಹಾಡು ಬಿಡುಗಡೆ ಕಂಡು ಅದಾಗಲೇ ಐಟಂ ಪ್ರೀಯರ ಬಾಯಲ್ಲಿ ಗುನುಗಾಡತೊಡಗಿದೆ.
ಅಂದಹಾಗೆ, ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು ಕಲಾವಿದ ಪ್ರಶಾಂತ್ ಸಿದ್ಧಿ. ನಟನಾಗಿ ಚಿತ್ರರಂಗದಲ್ಲಿ ಗುರುತು ಮೂಡಿಸಿದ್ದ ಸಿದ್ಧಿ, ಮತ್ಸ್ಯಗಂಧ ಸಿನಿಮಾ ಮೂಲಕ ಸಂಗೀತ ನಿರ್ದೇಶಕನಾಗಿ ಹೊಸ ವೃತ್ತಿಗೆ ಕೈ ಇಟ್ಟು, ಈ ಸ್ಪೆಷಲ್ ಹಾಡಿನ ಮೂಲಕ ಮೊದ- ಮೊದಲಲ್ಲೇ ಸದ್ದು ಮಾಡಿದ್ದಾರೆ. “ತೆಗಿ ತೆಗಿ ಬಾಗಿಲ್ ತೆಗಿ ಭಾಗೀರಥಿ , ನಮ್ಮೆಲ್ಲರ ಆಸೆಗೆ ನೀನೇ ಗತಿ” ಎಂಬ ಮಾದಕ ಗೀತೆಗೆ ಮನಮೋಹಕವಾಗಿ ಸಂಗೀತ ನೀಡಿರುವ ಪ್ರಶಾಂತ್ ಸಿದ್ಧಿ ಭರವಸೆ ಮೂಡಿಸಿದ್ದಾರೆ.
ಇನ್ನು ಚಿತ್ರಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೇ, ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ, ಇತ್ತೀಚೆಗೆ ಮೋಷನ್ ಟೈಟಲ್ ಬಿಡುಗಡೆಗೊಳಿಸಿ ಸುದ್ದಿ ಮಾಡಿಕೊಂಡಿದ್ದ ಚಿತ್ರತಂಡ ಬಿಡುಗಡೆ ತಯಾರಿಯಲ್ಲಿದೆ. ಸಹ್ಯಾದ್ರಿ ಪ್ರೊಡಕ್ಷನ್ ಬ್ಯಾನರಿನಡಿ ಬಿ ಏಸ್ ವಿಶ್ವನಾಥ್ ನಿರ್ಮಿಸಿರುವ ಮತ್ಸ್ಯಗಂಧ ಚಿಯ್ರವು, ಕರಾವಳಿ ಸಂಬಂಧಿಸಿದ ಉತ್ತರಕನ್ನಡದ ಮೀನುಗಾರರ ಬದುಕು, ಬವಣೆ ತೋರಿಸುವ ನಿಟ್ಟಲ್ಲಿ , ತಯಾರಾಗಿದ್ದು, ಚಿತ್ರಕ್ಕೆ ಪ್ರವೀಣ್ ಪ್ರಭು ಛಾಯಾಗ್ರಹಣ, ಪ್ರಶಾಂತ್ ಸಿದ್ಧಿ ಸಂಗೀತ, ಶ್ರೀನಿವಾಸ್ ಕಲಾಲ್ ಸಂಕಲನವಿದೆ. ತಾರಾಗಣದಲ್ಲಿ ಪೃಥ್ವಿ ಅಂಬರ್ ಜೊತೆ ಭಜರಂಗಿ ಲೋಕಿ, ಶರತ್ ಲೋಹಿತಾಶ್ವ, ನಾಗರಾಜ್ ಬೈಂದೂರ್ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಸ್ಪೆಷಲ್ ಹಾಡು ರಸಿಕರ ಮನಗೆದ್ದಿದೆ. ಕರಾವಳಿ ಭಾಗದ ದೇಸೀ ಸೊಗಡು ಕಟ್ಟಿ ಕೊಡಲು ಹೊರಟಿರುವ ಮತ್ಸ್ಯಗಂಧ ಚಿತ್ರದ ಕಥಾ ವಸ್ತು ಸ್ಪೆಷಲ್ ಎನಿಸಿದ್ದು, ಚಿತ್ರದ ಮೇಲೊಂದು ಗಟ್ಟಿ ನಿರೀಕ್ಷೆ ಇಡುವಂತಾಗಿದೆ. ಚಿತ್ರ ಸದ್ಯದಲ್ಲೇ ತೆರೆಯತ್ತ ಬರಲಿದೆ..
ವರದಿ: ನಾಗರಾಜ್ ಅರೆಹೊಳೆ