ಕಲೆಗೆ ಅಧಿದೇವತೆ ಶಾರದಾಂಬೆ. ಅವಳು ನೆಲೆಸಿರುವುದು ಶೃಂಗೇರಿ ಯಲ್ಲಿ. ಆ ಪುಣ್ಯನೆಲ ಕಲೆಯ ನೆಲೆಯೂ ಹೌದು. ವಿವಿಧ ಕ್ಷೇತ್ರಗಳಂತೆ ಸಿನಿಮಾ ಮಾಧ್ಯಮದಲ್ಲೂ ನಭಾ ನಟೇಶ್ , ಸಂಗೀತ ಶೃಂಗೇರಿ ಯಂಥ ಕಲಾವಿದೆಯರು ಹೆಸರು ಮಾಡಿದ್ದಾರೆ.
ಇವರ ಸಾಲಿಗೆ ಮತ್ತೊಬ್ಬ ಪ್ರತಿಭಾವಂತ ನಟಿ ನಾಗಶ್ರೀ ಬೇಗಾರ್ ಬೆಳ್ಳಿತೆರೆಯಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಬಿಡುಗಡೆಗೆ ಸಿದ್ಧಗೊಂಡಿರುವ , ಮಲೆನಾಡ ಪರಿಸರದ ಕಥೆ ಹೊಂದಿದ ” ಜಲಪಾತ ” ಚಿತ್ರದ ಲೀಡ್ ರೋಲ್ ನಲ್ಲಿ ನಾಗಶ್ರೀ ಕಾಣಿಸಿಕೊಂಡಿದ್ದಾರೆ.
ಬಾಲ್ಯದಿಂದಲೂ ಮಲೆನಾಡು ಭಾಗದಲ್ಲಿ ಯಕ್ಷಗಾನ , ನಾಟಕ , ನೃತ್ಯ ಮತ್ತು ಕಿರುತೆರೆಯಲ್ಲಿ ಈಕೆ ಹೆಸರು ಮಾಡಿದ್ದ ಪ್ರತಿಭಾನ್ವಿತೆ. ನಂತರ ಈಕೆ ನಾಯಕಿಯಾಗಿ ನಟಿಸಿದ್ದ ಹುಚ್ಚಿಕ್ಕಿ ಎಂಬ ಕಿರುಚಿತ್ರ ಅಪಾರ ಹೆಸರು ತಂದುಕೊಟ್ಟಿತು.
ವೈಶಂಪಾಯನ ತೀರ ಸಿನಿಮಾದಲ್ಲಿ ಟಾಮ್ ಬಾಯಿಶ್ ಮಾದರಿಯ ಅತ್ಯಂತ ವಿಭಿನ್ನ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದರು. ಹಲವಾರು ಪ್ರತಿಷ್ಠಿತ ನಾಟಕೋತ್ಸವ , ಯುವ ಜನೋತ್ಸವದಲ್ಲಿ ಶ್ರೇಷ್ಠ ನಟಿ ಪ್ರಶಸ್ತಿಗಳನ್ನು ಬಾಚಿಕೊಂಡ ರಂಗಭೂಮಿ ಪ್ರತಿಭೆಯೂ ಆಗಿದ್ದಾರೆ ನಾಗಶ್ರೀ.
ಜಲಪಾತ ಚಿತ್ರದಲ್ಲಿ 3 ಶೇಡ್ ಇರುವ ಸಂಕೀರ್ಣ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಮಲೆನಾಡ ಪ್ರಾದೇಶಿಕ ಭಾಷೆಯನ್ನು ನಾಗಶ್ರೀ ಸಮರ್ಪಕವಾಗಿ ದುಡಿಸಿಕೊಂಡಿದ್ದು ಈ ಪ್ರತಿಭೆಗೆ ಉಜ್ವಲ ಅವಕಾಶಗಳು ತೆರೆದುಕೊಳ್ಳಲಿ.
| ಚಾಲೆಂಜಿಂಗ್ ಪಾತ್ರಗಳ ನಿರೀಕ್ಷೆಯಲ್ಲಿ.|
– ತನ್ನ ಕಲಾಚಟುವಟಿಗೆ ಶೃಂಗೇರಿ ಯಲ್ಲಿ , ಬಾಲ್ಯದಲ್ಲಿ ಸಿಕ್ಕ ಪರಿಸರ , ಊರಿನ ಸಾಂಸ್ಕೃತಿಕ ಹಿನ್ನೆಲೆ ತನಗೆ ವರದಾನವಾಯ್ತೆಂದು ತಿಳಿಸುವ ನಾಗಶ್ರೀ ಸದಾ ವಿಭಿನ್ನವಾದ ಪಾತ್ರಗಳನ್ನು ನಿರೀಕ್ಷಿಸುತ್ತಾರಂತೆ. ಈಗಾಗಲೇ ಮತ್ತೆ ಮಾಯಮೃಗ ಧಾರಾವಾಹಿ , ಬ್ಯಾಚುಲರ್ಸ್ ಪಾರ್ಟಿ , ಊರಿನ ಗ್ರಾಮಸ್ಥರಲ್ಲಿ ವಿನಂತಿ ಚಿತ್ರಗಳಲ್ಲಿ ಅಭಿನಯಿಸಿದ ಅನುಭವವೂ ಇರುವ ನಾಗಶ್ರೀ ಸ್ವತಃ ಗಾಯಕಿ . ಯಕ್ಷಗಾನ ಮತ್ತು ಭರತನಾಟ್ಯ ಕಲಾವಿದೆಯೂ ಹೌದು.
ಪಾತ್ರಗಳ ನಿರ್ವಹಣೆಗೆ ಅದರ ಒಳತೋಟಿಯನ್ನು ಹಿಡಿದು ಜೀವಿಸಬೇಕು ಎಂಬುದು ನಾಗಶ್ರೀ ಪ್ರತಿಪಾದನೆ.