ಸ್ಯಾಂಡಲ್ ವುಡ್ ಅಂಗಳದ ಮ್ಯೂಸಿಕ್ ಮಾಂತ್ರಿಕ ಮಣಿಕಾಂತ್ ಕದ್ರಿ ಸಂಗೀತ ನೀಡಿರೋ ಹಾಡುಗಳು ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ಹಿತವೆನಿಸುವ ಹಾಡು, ಮನಸ್ಸಿಗೆ ಮುದ ನೀಡೋ ಸಂಗೀತದ ಮೂಲಕ ಸದಾ ಎಲ್ಲರ ಮನಸೂರೆಗೊಳ್ಳುವ ಮಣಿಕಾಂತ್ ಕದ್ರಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಎರಡು ದಶಕ ಪೂರೈಸಿದ್ದಾರೆ.
ಯಾವುದೇ ಜಾನರ್ ಸಿನಿಮಾವಿರಲಿ ಮಣಿಕಾಂತ್ ಕದ್ರಿ ಸಂಗೀತ ಅಲ್ಲೊಂದು ಮ್ಯಾಜಿಕ್ ಮಾಡಿರುತ್ತೆ. ಹಾಡುಗಳು ಗುನುಗುವಂತೆ ಮಾಡುತ್ತೆ, ಮನಸ್ಸನ್ನು ತಲುಪುತ್ತೆ ಅದು ಇವರ ಮ್ಯೂಸಿಕ್ ಸ್ಪರ್ಶಕ್ಕಿರುವ ತಾಕತ್ತು. ‘ಪೃಥ್ವಿ’, ‘ಸವಾರಿ’, ‘ಸವಾರಿ 2’, ‘ಮದುವೆ ಮನೆ’, ‘ನಡುವೆ ಅಂತರವಿರಲಿ’, ‘ರನ್ ಆಂಟನಿ’ ಸಿನಿಮಾ ಹಾಡುಗಳು ಸೂಪರ್ ಹಿಟ್ ಆಗಿದ್ದು ಈಗಲೂ ಎಲ್ಲರ ಫೇವರೀಟ್ ಲಿಸ್ಟ್ ನಲ್ಲಿ ಮೊದಲ ಸಾಲಿನಲ್ಲಿವೆ.
‘ಗಣೇಶ’ ಸಿನಿಮಾ ಮೂಲಕ ಚಂದನವನಕ್ಕೆ ಸಂಗೀತ ನಿರ್ದೇಶಕನಾಗಿ ಹೆಜ್ಜೆ ಇಟ್ಟ ಮಣಿಕಾಂತ್ ಕದ್ರಿ ಕ್ರೇಜಿಲೋಕ, ಪೃಥ್ವಿ, ಸವಾರಿ, ಸವಾರಿ2, ರನ್ ಆಂಟನಿ, ನಡುವೆ ಅಂತರವಿರಲಿ, ಮೂಕಹಕ್ಕಿ, ಮಳೆಬಿಲ್ಲೆ, ಸ್ವಯಂವರ, ಜಾತ್ರೆ, ಮಿಸ್ಟರ್ ಗರಗಸ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ತುಳು ಚಿತ್ರರಂಗಕ್ಕೂ ಇವರ ಕೊಡುಗೆ ಅಪಾರ. ಹದಿನೈದಕ್ಕೂ ಹೆಚ್ಚು ತುಳು ಸಿನಿಮಾಗಳಿಗೆ ಸಂಗೀತ ನೀಡಿರುವ ಮಣಿಕಾಂತ್ ಕದ್ರಿ ಹಲವು ಸೂಪರ್ ಹಿಟ್ ಹಾಡುಗಳನ್ನು ತುಳು ಚಿತ್ರರಂಗಕ್ಕೆ ನೀಡಿದ್ದಾರೆ. ಹೀಗೆ ಇಪತ್ತು ವರ್ಷಗಳಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಇವರ ಸಂಗೀತ ನಿರ್ದೇಶನವಿರುವ ಹಲವು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಡಾರ್ಲಿಂಗ್ ಕೃಷ್ಣ ಅಭಿನಯದ ‘ಮಿಸ್ಟರ್ ಬ್ಯಾಚುಲರ್’, ಬಿ.ಎಸ್.ಲಿಂಗದೇವರು ನಿರ್ದೇಶನದ ‘ವಿರಾಟಪುರ ವೈರಾಗಿ’, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ಬಿರ್ದುದ ಕಂಬಳ’, ಗುರುದೇಶಪಾಂಡೆ ನಿರ್ಮಾಣದ ‘ಪೆಂಟಗಾನ್’, ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿರೋ ‘ಲೈನ್ ಮ್ಯಾನ್’ ಚಿತ್ರಗಳು ಬಿಡುಗಡೆಯಾಗಲು ರೆಡಿಯಾಗಿವೆ.
ಸಿನಿಮಾ ಸಂಗೀತ ನಿರ್ದೇಶನದ ಹೊರತಾಗಿ ತಂದೆ ಕದ್ರಿ ಗೋಪಾಲನಾಥ್ (ಖ್ಯಾತ ಸ್ಯಾಕ್ಸೋಫೋನ್ ವಾದಕ) ಹೆಸರಲ್ಲಿ ಟ್ರಸ್ಟ್ ತೆರೆದು ಯುವ ಕಲಾವಿದರಿಗೆ ವೇದಿಕೆ ಒದಗಿಸಿಕೊಡಲಾಗುತ್ತಿದೆ. ಇದರ ಜೊತೆಗೆ ನಶಿಸಿ ಹೋಗುತ್ತಿರುವ ಜಾನಪದ ಹಾಡುಗಳನ್ನು ಉಳಿಸಿಕೊಳ್ಳುವ ಕೆಲಸವೂ ಈ ಟ್ರಸ್ಟ್ ಮೂಲಕ ನಡೆಯುತ್ತಿದೆ.