ಇಂದು ಜೋಗದೂರು ಶಿವಮೊಗ್ಗದಲ್ಲಿ ಸಿನಿಹಬ್ಬ – ಮಲೆನಾಡ ಕಿರುಚಿತ್ರೋತ್ಸವ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು. ಸತ್ಯ ಪಿಕ್ಚರ್ಸ್ ಸಹಯೋಗದಲ್ಲಿ ತೀರ್ಥಹಳ್ಳಿಯ ಕುರ್ಕುರೆ ಕ್ರಿಯೇಷನ್ಸ್ ಹಾಗೂ ಶಿವಮೊಗ್ಗದ ಶಿವಮೊಗ್ಗ ಸಿನಿಮಾಸ್ ಅಡ್ಡ ಜಂಟಿಯಾಗಿ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ‘ಸಿನಿಹಬ್ಬ’ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕನ್ನಡ ಚಲನಚಿತ್ರರಂಗದಲ್ಲಿ ತಮ್ಮ ವಿಶೇಷ ಶೈಲಿಯಿಂದ ಹೊಸ ಛಾಪು ಮೂಡಿಸುತ್ತಿರುವ ಯುವ ನಿರ್ದೇಶಕರಾದ ಡಿ.ಸತ್ಯಪ್ರಕಾಶ್ ಹಾಗೂ ಕುಶಾಲ್ ಗೌಡ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿನಿಹಬ್ಬದಲ್ಲಿ ಕಿರುಚಿತ್ರಗಳನ್ನು ವೀಕ್ಷಿಸಿ, ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಲೆನಾಡಿನ ಯುವಪ್ರತಿಭೆಗಳು ಸಿನಿಮಾರಂಗದಲ್ಲಿ ಮತ್ತಷ್ಟು ಸಕ್ರಿಯರಾಗುವಂತೆ ಪ್ರೋತ್ಸಾಹಿಸಿದರು.
ಅನ್ ಲಾಕ್ ರಾಘವ ಚಲನಚಿತ್ರದ ನಿರ್ಮಾಪಕರಾದ ಡಿ.ಮಂಜುನಾಥ್ ಅವರು ಸಿನಿಹಬ್ಬವನ್ನು ಉದ್ಘಾಟಿಸಿ, ಉತ್ತಮ ಸಿನಿಕತೆಗಳಿಗೆ ವೇದಿಕೆ ಕಲ್ಪಿಸಿಕೊಡುವುದಕ್ಕಾಗಿ ಪ್ರೋತ್ಸಾಹವಿದ್ದೇ ಇರುತ್ತದೆ ಎಂದರು. ಸಿನಿಹಬ್ಬದಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ಶಂಕರ್ ನಾಗ್ ಅವರಿಗೆ ಪುಷ್ಪನಮನವನ್ನು ಸಲ್ಲಿಸಲಾಯಿತು.
“ಕನ್ನಡ ಚಿತ್ರರಂಗಕ್ಕೆ ಪ್ರಾದೇಶಿಕ ಸೊಗಡಿನ ಕತೆಗಳ ಅವಶ್ಯಕತೆ ಇದೆ. ಯುವಕರು ನಟನೆಯತ್ತ ಮಾತ್ರ ಹೊರಳದೇ ಅಲ್ಲದೇ ತಾಂತ್ರಿಕ ವಿಭಾಗಗಳಲ್ಲೂ ತೊಡಗಿಸಿಕೊಳ್ಳಬೇಕು” ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಡಿ.ಸತ್ಯಪ್ರಕಾಶ್ ಹೇಳಿದರು. ತೀರ್ಥಹಳ್ಳಿಯ ನವಪ್ರತಿಭೆ, ಅನ್ ಲಾಕ್ ರಾಘವ ಚಲನಚಿತ್ರದ ನಾಯಕನಟ ಮಿಲಿಂದ್ ಅವರಿಗೆ ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿದರು.
ಮಲೆನಾಡ ಯುವ ಪ್ರತಿಭೆಗಳ ಐದು ಕಿರುಚಿತ್ರಗಳು ಸಿನಿಹಬ್ಬದಲ್ಲಿ ಪ್ರದರ್ಶಿತಗೊಂಡದ್ದು ವಿಶೇಷ. ಕಾರ್ತಿಕ್ ಶ್ರೀಯನ್ ನಿರ್ದೇಶನದ ‘ಕಂಪೋಸರ್’, ರಾಕೇಶ್ ಬಿ ಜೆ ಹಾಸನ್ ನಿರ್ದೇಶಿಸಿರುವ ‘ಮಾಧ ಪುರಾಣ’, ಅನೀಶ್ ಎಸ್ ಶರ್ಮಾ ನಿರ್ದೇಶನದ ‘ವಡ್ಡಾರಾಧಕ’, ವಿನಯ್ ಶೆಟ್ಟಿ ನಿರ್ದೇಶಿಸಿರುವ ‘ಅಸ್ಪಷ್ಟ’, ಕಾರ್ತಿಕ್ ಕುರ್ಕುರೆ ನಿರ್ದೇಶಿಸಿರುವ ‘ಅಧ್ಯಾಯ ಮೂರು’ ಹಾಗೂ ‘ಎಕ್ಸಿಬಿಷನಿಸಮ್’ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ಎಲ್ಲ ಕಿರುಚಿತ್ರಗಳೂ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿದವು.
ಸಿನಿಹಬ್ಬ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಸಿನಿಮಾ ನಿರ್ಮಾಪಕರಾದ ನಾಗೇಂದ್ರ ಜೋಯಿಸ್, ಶಿವಮೊಗ್ಗ ಸಿನಿಮಾಸ್ ಅಡ್ಡದ ರಘು ಕಡೂರು ಗುಂಡ್ಲು, ಕುರ್ಕುರೆ ಕ್ರಿಯೇಷನ್ಸ್ ನ ವಿನಯ್ ಶೆಟ್ಟಿ ಹಾಗೂ ಕಾರ್ತಿಕ್ ಕುರ್ಕುರೆ, ಶಿವಮೊಗ್ಗದ ರಂಗಾಯಣದ ನಿರ್ದೇಶಕರಾದ ಸಂದೇಶ್ ಜವಳಿ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.