VIKIPEDIA 3.5/5
ಇವತ್ತಿನ ಸಿಟಿ ಹುಡುಗರಿಗೆ ಅಪ್ಪ ಎನ್ನುವ ಜೀವವನ್ನು ದ್ವೇಷಿಸಲು ನಿರ್ದಿಷ್ಟ ಕಾರಣವೇ ಬೇಕಿಲ್ಲ. ಒಳ್ಳೇ ಬದುಕು ರೂಪಿಸಿಕೊಳ್ಳಲಿ ಅಂತಾ ಹೇಳುವ ನಾಲ್ಕು ಮಾತುಗಳೂ ಇವರಿಗೆ ಬೈಗುಳದಂತೆ, ತಿವಿದಂತೆ ಕಾಣುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡು ಲೈಕು, ಕಮೆಂಟು ಪಡೆಯುವ ಈಗಿನ ಹುಡುಗರಿಗೆ ಹೆತ್ತವರ ಸ್ಟೇಟಸ್ ಬಗ್ಗೆ ಯೋಚನೆಯೇ ಇರೋದಿಲ್ಲ. ʻನಿಮ್ಮ ಮಗ ಏನು ಮಾಡ್ತಿದ್ದಾನೆ?ʼ ಅಂತಾ ಯಾರಾದರೂ ಪ್ರಶ್ನಿಸಿದರೆ ಪೋಷಕರ ಬಳಿ ಸ್ಪಷ್ಟ ಉತ್ತರವೇ ಇರೋದಿಲ್ಲ.
ಇಂಥದ್ದೇ ಹಿನ್ನೆಲೆಯ ಹುಡುಗ ವಿಕ್ಕಿ. ಸೆಲ್ ಫೋನ್ ಹುಟ್ಟಿದ ದಿನವೇ ಹುಟ್ಟಿದವನು. ನಿಮ್ಮ ಹಂಗಿಲ್ಲದೇ ಬದುಕಬಲ್ಲೆ ಅಂತಾ ಬಾಯಿ ಮಾತಿಗೆ ಹೇಳಿ ಮನೆ ಬಿಡುತ್ತಾನೆ. ಅಪ್ಪನ ದುಡಿಮೆಯಲ್ಲಿ ಕಷ್ಟ ಎನ್ನುವ ಪದದ ಅರ್ಥವೇ ಗೊತ್ತಿಲ್ಲದೇ ಬೆಳೆದವನು ಏಕಾ ಏಕಿ ಬೀದಿಗೆ ಬೀಳುತ್ತಾನೆ. ಆ ತನಕ ನೋಡಿಲ್ಲದ ಬದುಕು ಇವನದ್ದಾಗುತ್ತದೆ. ಹಸಿವಿನ ಪರಿಚಯವಾಗುತ್ತದೆ. ನಮ್ಮವರು ಅಂದುಕೊಂಡವರು ಯಾವತ್ತಿಗೂ ಬೇರೆಯವರೇ ಉಳಿಯುವುದರ ಜೊತೆಗೆ ಬೇರೆ ಯಾರೋ ಬಂದು ನಮ್ಮವರಾಗುತ್ತಾರೆ ಎನ್ನುವ ಸತ್ಯ ಕೂಡಾ ಈತನಿಗೆ ಮನದಟ್ಟಾಗುತ್ತದೆ. ದುಡ್ಡು ಕಾಸಿಲ್ಲದೇ ಪ್ರಯಾಣ ಆರಂಭಿಸುವ ವಿಕ್ಕಿಯ ಪಯಣದಲ್ಲಿ ಹುಡುಗಿ ಕೂಡಾ ಸೇರಿಕೊಳ್ಳುತ್ತಾಳೆ. ವಯಸ್ಸಾದ ಹಿರಿಯ, ಗೊತ್ತೂ ಗುರಿ ಇಲ್ಲದವರನ್ನು ಪೊರೆಯುವ ಅಜ್ಜಿ, ಬಂಧುತ್ವದ ಬೆರಗು ಮೂಡಿಸುವ ಮಂಗಳಮುಖಿ… ಹೀಗೆ ಸಾಕಷ್ಟು ಜೀವಗಳು ಎದುರುಗೊಳ್ಳುತ್ತವೆ.
ಇವನೇನೋ ಅಪ್ಪನ ಮೇಲೆ ಮುನಿಸಿಕೊಂಡು ಸಂಚಾರ ಆರಂಭಿಸಿರುತ್ತಾನೆ. ಸಹ ಸಂಚಾರಿಯಾದ ಹುಡುಗಿ ಯಾಕೆ ಬೈಕು ತೆಗೆದುಕೊಂಡು ಒಬ್ಬಂಟಿಯಾಗಿ ರಸ್ತೆಗಿಳಿದಿರುತ್ತಾಳೆ? ಅನ್ನೋದರ ಹಿಂದೆ ಕೂಡಾ ಕಾಡುವ ಕತೆಯೊಂದಿದೆ. ಅದೇನು ಅನ್ನೋದನ್ನು ಬಹುಶಃ ಥೇಟರಿನಲ್ಲಿ ನೋಡಿದರೇನೇ ಮಜ. ಒಟ್ಟಾರೆ ಇಬ್ಬರ ಸಹಯಾನದಲ್ಲಿ ಏನೆಲ್ಲಾ ಘಟನೆಗಳು ಸಂಭವಿಸುತ್ತವೆ? ಮೊಬೈಲಿನ ಜೊತೆಯಲ್ಲೇ ಜೀವನವನ್ನು ಕಳೆಯುತ್ತಿದ್ದ ಹುಡುಗ ಅದೇ ಮೊಬೈಲನ್ನು ಕಳೆದುಕೊಂಡು ಗುರುತಿರದ ಜಗದಲ್ಲಿ ಅನುಭವಿಸುವ ಯಾತನೆ ಹೇಗಿರುತ್ತದೆ? ಯಾವ ಬಗೆಯಲ್ಲಿ ಈತನಿಗೆ ಜ್ಞಾನೋದಯವಾಗುತ್ತದೆ? ಅದರಲ್ಲಿ ಹುಡುಗಿಯ ಪಾತ್ರವೆಷ್ಟು ಇಂಬಿತ್ಯಾದಿ ವಿವರಗಳನ್ನು ತಿಳಿಸುವ ಸಿನಿಮಾ ವಿಕ್ಕಿಪೀಡಿಯ!
ಇನ್ನು ಸ್ವಲ್ಪವೇ ಎಚ್ಚರ ವಹಿಸಿದ್ದಿದ್ದರೂ ವಿಕ್ಕಿಪೀಡಿಯಾ ಲವ್ ಮಾಕ್ಟೇಲ್, ದಿಯಾ ರೀತಿಯಲ್ಲಿ ಗಟ್ಟಿಗೊಳ್ಳುತ್ತಿತ್ತು. ಹಾಗಂತಾ ವಿಕಿಪೀಡಿಯ ಅಚ್ಚುಕಟ್ಟಿಲ್ಲದ ಚಿತ್ರವೆಂದಲ್ಲ. ಕೆಲವೊಂದು ದೃಶ್ಯಗಳನ್ನು ಶಾರ್ಪ್ ಕಟ್ ಮಾಡಬಹುದಿತ್ತು, ಅನಗತ್ಯ ಅನ್ನಿಸಿದ ದೃಶ್ಯಗಳನ್ನು ಎತ್ತಿಬಿಡಬಹುದಿತ್ತು ಅಷ್ಟೇ. ಅದು ಬಿಟ್ಟು ಗಮನ ಸೆಳೆಯುವ ಸಾಕಷ್ಟು ಅಂಶಗಳು ವಿಕಿಪೀಡಿಯಾದಲ್ಲಿದೆ. ಯಶ್ವಂತ್ ಮತ್ತು ಆಶಿಕಾ ಸೋಮಶೇಖರ್ ಎನ್ನುವ ಎರಡು ಮುದ್ದಾದ ಜೋಡಿ ಇಡೀ ಚಿತ್ರವನ್ನು ನೋಡಿಸುವಂತೆ ಮಾಡುತ್ತವೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಲವರ್ ಬಾಯ್ ಹೀರೋಗಳ ಕೊರತೆ ಇದೆಯಲ್ಲಾ? ಯಶ್ವಂತ್ ಆ ಜಾಗವನ್ನು ಧಾರಾಳವಾಗಿ ಆಕ್ರಮಿಸಿಕೊಳ್ಳಬಹುದು. ಆಶಿಕಾ ಕೂಡಾ ಅದ್ಭುತ ನಟಿ ಅನ್ನಿಸಿಕೊಳ್ಳಲು ವಿಕಿಪೀಡಿಯಾದಲ್ಲೇ ಸಾಕಷ್ಟು ಸಾಕ್ಷಿಯಿದೆ. ನಿರ್ದೇಶಕನಾಗಿ ಸೋಮು ಹೊಯ್ಸಳ ಭಾಗಶಃ ಗೆಲುವು ಕಂಡಿದ್ದಾರೆ. ಮಂಜುನಾಥ ರಘುಪತಿ ಬರೆದ ಸಂಭಾಷಣೆ ಚಿತ್ರದ ತಾಕತ್ತು ಹೆಚ್ಚಿಸಿದೆ. ಮಂಜುನಾಥ ಹೆಗ್ಡೆ ಅಪ್ಪನಾಗಿ ಆಪ್ತವಾಗಿ ನಟಿಸಿದ್ದಾರೆ. ಸಣ್ಣ ಪುಟ್ಟ ಕೊರತೆಗಳ ನಡುವೆಯೂ ಇಷ್ಟವಾಗುವ ಸಿನಿಮಾ ವಿಕಿಪೀಡಿಯಾ. ಓಟಿಟಿಗೆ ಕಾಯದೆ ಥೇಟರಿಗೇ ಹೋಗಿ ನೋಡಬಹುದಾದ ಸಿನಿಮಾ ಕೂಡಾ ಇದಾಗಿದೆ…