Dollu 4/5
ಹಣ ಸಂಪಾದನೆ ಎಲ್ಲರ ಆದ್ಯತೆ. ಹಣ ಸಂಪಾದಿಸಬೇಕು. ಎಲ್ಲ ಬಗೆಯ ಸುಖ ಅನುಭವಿಸಬೇಕು. ತಲೆತಲಾಂತರಗಳಿಂದ ಬೆಳೆದು ಬಂದಿರುವ ಕಲೆ, ಸಂಪ್ರದಾಯಗಳನ್ನು ಉಳಿಸಬೇಕು, ಬೆಳೆಸಬೇಕು ಅಂತಾ ಯಾರಾದರೂ ಬಯಸಿದರೆ ಜಗತ್ತಿನ ಇವತ್ತಿನ ನಿಯಮಕ್ಕೆ ವಿರುದ್ದವಾಗಿ ಯೋಚಿದಂತಾಗುತ್ತದೆ. ಅಂಥವರು ಸಮಾಜದ ಕಣ್ಣಿಗೆ ಅಪ್ರಯೋಜಕರಾಗಿ ಕಾಣಿಸಿಬಿಡುಯ್ತಾರೆ.
ಎಲ್ಲೆಲ್ಲಿಂದಲೋ ಬಂದು ಬೆಂಗಳೂರು ಸೇರಿದವರ ಪಾಡಂತೂ ಥೇಟು ಮಷಿನ್ನುಗಳಂತಾಗಿರುತ್ತದೆ. ನಮ್ಮವರು ತಮ್ಮವರಂತಾ ಯಾರಾದರೂ ಹುಡುಕಿಕೊಂಡು ಬರುತ್ತಾರೆ ಅಂದುಕೊಳ್ಳಿ; ಅವರ ಜೊತೆಗೆ ಕೂತು ನಾಲ್ಕು ಮಾತಾಡುವ ವ್ಯವಧಾನ ಯಾರಿಗೂ ಇರೋದಿಲ್ಲ. ಒಬ್ಬೊಬ್ಬರಿಗೂ ಇಲ್ಲಿ ಅವರದ್ದೇ ಆದ ಧಾವಂತ, ಮುಂದೆ ಮುಂದೆ ಹೋಗಿ ನಿಲ್ಲುವ ಚಡಪಡಿಕೆ. – ಇಂಥ ಎಲ್ಲ ವಿಚಾರಗಳನ್ನು ಒಳಗೊಂಡ ಸಿನಿಮಾ ಡೊಳ್ಳು.
ಯಾವ ಕಾರಣಕ್ಕೂ ಇದನ್ನು ದುಡ್ಡಿಗೆ ಮಾರಿಕೊಳ್ಳಬೇಡ ಅಂತಾ ಹೇಳಿ ಅಪ್ಪ ಕಲಿಸಿದ ಡೊಳ್ಳು ವಿದ್ಯೆ. ಬೆಳೆದ ಹುಡುಗ ತನ್ನದೇ ತಂಡ ಕಟ್ಟಿಕೊಂಡು ಡೊಳ್ಳು ಕಾರ್ಯಕ್ರಮ ನೀಡುತ್ತಾ ಬರುತ್ತಿರುತ್ತಾನೆ. ಆಯೋಜಕರು ನೀಡುವ ಪುಡಿಗಾಸು ಯಾವುದಕ್ಕೂ ಸಾಲುವುದಿಲ್ಲ. ಎಷ್ಟು ದಿನಾಂತ ಹೀಗೇ ಬದುಕು ಸಾಗಿಸೋದು? ನಾವೂ ಎಲ್ಲರಂತೆ ಜೀವನವನ್ನು ಅನುಭವಿಸೋದು ಬೇಡವಾ ಅನ್ನೋದು ತಂಡದ ಉಳಿದವರ ಪ್ರಶ್ನೆ. ಇದಕ್ಕೆ ಉತ್ತರದಂತೆ ರೂಪುಗೊಂಡಿರುವ ಚಿತ್ರ ಡೊಳ್ಳು.
ದಡ್ಡು ಯಾರನ್ನೂ ಒಂದು ಮಾಡೋದಿಲ್ಲ.. ಯಾವತ್ತಿದ್ರೂ ಅದು ಎಲ್ಲರನ್ನೂ ದೂರ ಮಾಡುತ್ತೆ – ಇದು ತಂದೆ ಮಗನಿಗೆ ಹೇಳುವ ಮಾತು. ಈ ಮಾತನ್ನು ನಿಜವಾಗಿಸುವ ನಿಟ್ಟಿನಲ್ಲಿ ಇಲ್ಲಿನ ಪಾತ್ರಗಳೂ ವರ್ತಿಸುತ್ತವೆ. ಡೊಳ್ಳು ಬಡಿಯುತ್ತಾ ಬದುಕು ಸವೆಸುವುದು ನಮಗಿಷ್ಟವಿಲ್ಲ ಅಂತಾ ತಂಡದ ಸದಸ್ಯರೆಲ್ಲಾ ಬೆಂಗಳೂರಿಗೆ ಬಂದು ನೆಲೆಸುತ್ತಾರೆ. ನಾಯಕ ಮಾತ್ರ ಏನೇ ಆದರೂ ನಾನು ಈ ವಾದ್ಯದ ನಂಟು ಬಿಡುವುದಿಲ್ಲ ಅಂತಾ ತೀರ್ಮಾನಿಸುತ್ತಾನೆ. ಇಷ್ಟೆಲ್ಲದರ ನಡುವೆ ವಿಘಟನೆಗೊಂಡ ತಂಡ ಮತ್ತೆ ಒಂದು ಸೇರುತ್ತದಾ? ಇಲ್ಲವಾ? ಅನ್ನೋದು ಕತೆಯ ಗುಟ್ಟು.
ಡೊಳ್ಳು ಕರ್ನಾಟಕದ ಮಟ್ಟಿಗೆ ಅತಿ ಪುರಾತನ ವಾದ್ಯ. ಜನಪದ ಕತೆಗಳಲ್ಲೂ ಡೊಳ್ಳು ಪ್ರಾಮುಖ್ಯತೆ ಪಡೆದಿದೆ. ಡೊಳ್ಳು ರೂಪುಗೊಂಡಿದ್ದರ ಬಗ್ಗೆ ಪೌರಾಣಿಕ ಕತೆಗಳೂ ಇವೆ. ಇಂಥ ಡೊಳ್ಳು ಗಂಡು ಕಲೆ ಅನ್ನಿಸಿಕೊಂಡಿರುವುದು ವಿಪರ್ಯಾಸ. ಅಂದರೆ, ಈ ವಾದ್ಯವನ್ನು ಗಂಡಸರಷ್ಟೇ ನುಡಿಸಬೇಕು ಎನ್ನುವ ಸಂಪ್ರದಾಯ ಇದೆ. ಆದರೆ, ಚಿತ್ರದ ಕತೆಯಲ್ಲಿ ಕೂಡಾ ಹೆಣ್ಣುಮಕ್ಕಳ ಡೊಳ್ಳು ವಿದ್ಯೆ ಕಲಿಯುವ ಇಂಗಿತ ವ್ಯಕ್ತಪಡಿಸುತ್ತಾರೆ. ಅದು ಕಡೆಗೂ ಸಾಧ್ಯವಾಗುತ್ತದಾ ಇಲ್ಲವಾ ಅನ್ನೋದು ಕೂಡಾ ಚಿತ್ರದಲ್ಲಿ ತೆರೆದುಕೊಂಡಿದೆ.
ನಿರ್ದೇಶಕ ಸಾಗರ್ ಪುರಾಣಿಕ್ ಮೊದಲ ಚಿತ್ರದಲ್ಲೇ ಇಂಥದ್ದೊಂದು ಮಣ್ಣಿನ ಘಮವಿರುವ ಕತೆ ಆಯ್ಕೆ ಮಾಡಿಕೊಂಡಿರೋದು ಮೆಚ್ಚಬೇಕಿರುವ ವಿಚಾರ. ಕಥೆಯನ್ನು ಎಲ್ಲೂ ಅತಿರಂಜಕಗೊಳಿಸದೆ, ರೋಚಕತೆಯನ್ನು ಬೆರೆಸದೆ ಸರಳವಾಗಿ ನಿರೂಪಿಸಿದ್ದಾರೆ. ಸರಾಗವಾಗಿ ನೋಡಿಸಿಕೊಂಡು ಹೋಗುವಂತೆ ಶ್ರೀನಿಧಿ ಡಿ.ಎಸ್. ಚಿತ್ರಕತೆ ರೂಪಿಸಿದ್ದಾರೆ. ನಾಯಕನಟ ಕಾರ್ತಿಕ್ ಮಹೇಶ್ ನಟನೆ ಸಹಜವಾಗಿದೆ. ತಂಡದ ಉಳಿದ ಸದಸ್ಯರ ಆಯ್ಕೆ ಕೂಡಾ ಪರ್ಫೆಕ್ಟ್. ಅದರಲ್ಲೂ ಸಿದ್ದನ ಪಾತ್ರಧಾರಿಯ ನಟನೆ ಚೆಂದ. ನಾಯಕಿ ನಿಧಿ ಹೆಗಡೆಯ ಮಾತಿನ ಭಾಷೆ, ಲಿಪ್ ಸ್ಟಿಕ್ಕು, ಮೇಕಪ್ಪು ಹಳ್ಳಿಯ ವಾತಾವರಣಕ್ಕೆ ಅಸಹಜ ಅನ್ನಿಸುತ್ತದೆ. ಬಾಬು ಹಿರಣ್ಣಯ್ಯರ ಪಾತ್ರದ ಕ್ರಾಂತಿಕಾರಿ ಗುಣಕ್ಕೆ ಉಘೇ ಅನ್ನಲೇಬೇಕು. ಸಾಗರ್, ಶ್ರೀನಿಧಿ ಮುಂತಾದವರ ಈ ತಂಡದಿಂದ ಇಂಥ ಸಾಕಷ್ಟು ಉತ್ತಮ ಚಿತ್ರಗಳನ್ನು ನಿರೀಕ್ಷಿಸಬಹುದು.