ಚಿತ್ರರಂಗ ಎಂದರೆ ಎಲ್ಲ ರೀತಿಯ ಸಿನಿಮಾಗಳನ್ನೂ ಮಾಡಬೇಕು. ಹೊಸ ಶೈಲಿಯ ಕಥೆಗಳನ್ನು, ಹೊಸ ಆಲೋಚನೆಗಳನ್ನು ಬರಮಾಡಿಕೊಳ್ಳಬೇಕು. ಹೊಸ ಯೋಚನೆಗಳಿರುವ ಕಥೆಗಾರರನ್ನು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪರಂವಃ ಸ್ಟುಡಿಯೋಸ್ ಹೆಜ್ಜೆ ಇಟ್ಟಿದ್ದು, ‘ಮಿಥ್ಯ’ ಅಂಥದ್ದೊಂದು ವಿನೂತನ ಪ್ರಯತ್ನವಾಗಲಿದೆ.
‘ಮಿಥ್ಯ’, ರಕ್ಷಿತ್ ಶೆಟ್ಟಿ ನಿರ್ಮಾಣದ ಹೊಸ ಚಿತ್ರ. ಈ ಚಿತ್ರದ ಮೂಲಕ ಸುಮಂತ್ ಭಟ್ ಸ್ವತಂತ್ರ ನಿರ್ದೇಶಕರಾಗಿ ಕಾಲಿಡುತ್ತಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ 11 ವರ್ಷದ ಬಾಲಕನ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ. ಅವನ ನೋವು ಮತ್ತು ವಿಮೋಚನೆಯ ಕಥೆಯನ್ನು ಹೇಳವ ಪ್ರಯತ್ನ ಮಾಡುತ್ತಿದ್ದಾರೆ.
ತಂದೆ-ತಾಯಿಯ ನಿಧನದ ನಂತರ, ಅವರ ನೆನಪುಗಳಿಂದ ಹೊರಬರಲಾರದ ಪುಟ್ಟ ಬಾಲಕನೊಬ್ಬ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ ‘ಮಿಥ್ಯ’.
ಮೂಲತಃ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಸುಮಂತ್ ಭಟ್ಗೆ ಸಿನಿಮಾ ಎನ್ನುವುದು ಪ್ಯಾಶನ್. ಇದಕ್ಕೂ ಮುನ್ನ ಪರಂವಃ ಸ್ಟುಡಿಯೋಸ್ ನಿರ್ಮಾಣದ ‘ಏಕಂ’ ಎಂಬ ವೆಬ್ಸೀರೀಸ್ನ ಏಳು ಕಂತುಗಳಲ್ಲಿ, ನಾಲ್ಕು ಕಂತುಗಳನ್ನು ಬರೆದು ನಿರ್ದೇಶಿಸಿದವರು ಅವರು. ಜತೆಗೆ ಪರಂವಃ ಕಥಾತಂಡದ ಸಕ್ರಿಯರಾಗಿ ಗುರುತಿಸಿಕೊಂಡವರು. ಈಗ ಅವರು ಸ್ವತಂತ್ರ ನಿರ್ದೇಶಕರಾಗಿ ‘ಮಿಥ್ಯ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಮತ್ತು ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ಆತಿಶ್ ಶೆಟ್ಟಿ, ಇಲ್ಲಿ ಮಿಥುನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅವನೊಂದಿಗೆ ಪ್ರಕಾಶ್ ತುಮ್ಮಿನಾಡು, ರೂಪಾ ವರ್ಕಾಡಿ ಮುಂತಾದವರು ನಟಿಸುತ್ತಿದ್ದಾರೆ.
‘ಮಿಥ್ಯ’ ಚಿತ್ರಕ್ಕೆ ಉದಿತ್ ಖುರಾನ ಅವರ ಛಾಯಾಗ್ರಹಣವಿದ್ದು, ಮಿಥುನ್ ಮುಕುಂದನ್ ಅವರ ಸಂಗೀತವಿದೆ. ಭುವನೇಶ್ ಮಣಿವಣ್ಣನ್ ಸಂಕಲನಕಾರರಾಗಿ, ಶ್ರೇಯಾಂಕ್ ನಂಜಪ್ಪ ಸೌಂಡ್ ಡಿಸೈನರ್ ಆಗಿ ಕಾರ್ಯನಿರ್ವಹಿಸಲಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.