Chase 4/5
ಬದುಕಲ್ಲಿ ಎಲ್ಲದಕ್ಕೂ ಲೆಕ್ಕಾಚಾರ ಹಾಕುತ್ತೇವೆ. ಒಂದೊಳ್ಳೆ ಬಟ್ಟೆ ಹಾಕಲು, ಬಯಸಿದ್ದನ್ನು ತಿನ್ನಲೂ, ಇಷ್ಟದ ಸಿನಿಮಾ ನೋಡಲು ಕೂಡಾ ಎಲ್ಲಿ ಖರ್ಚಾಗಿಬಿಡತ್ತೋ ಅಂತಾ ಯೋಚಿಸಿರುತ್ತೀವಿ. ಅಷ್ಟೇ ಯಾಕೆ ತರಕಾರಿ ಅಂಗಡಿ ಮುಂದೆ ನಿಂತು ಐದು ರುಪಾಯಿ ಸೊಪ್ಪು ತಗೊಳ್ಳಲು ಚೌಕಾಸಿ ಮಾಡುವವರಿದ್ದೇವೆ.
ಕೈಲಾಗದ ಭಿಕ್ಷುಕರಿಗೆ ಕೊಡಲು ಒಂದು ರುಪಾಯಿ ಚಿಲ್ಲರೆ ಕಾಸಿಗಾಗಿ ಜೇಬಿಡೀ ತಡಕಾಡುತ್ತೇವೆ. ಅನಾರೋಗ್ಯ, ಆಸ್ಪತ್ರೆ ಅಂತಾ ಬಂದಾಗ, ಯಾಕೆ ಏನು ಅಂತಲೂ ವಿಚಾರಿಸದೇ ರಪ್ಪಂತಾ ತೆಗೆದು ಅವರು ಕೇಳಿದಷ್ಟು ಹಣ ಕಟ್ಟಿಬಿಡ್ತೀವಿ. ʻನಮ್ಮವರ ಜೀವ ಉಳಿದರೆ ಸಾಕುʼ ಅನ್ನೋದಷ್ಟೇ ಆ ಕ್ಷಣದ ಮನಸ್ಥಿತಿಯಾಗಿರುತ್ತದೆ. ಸಾಮಾನ್ಯ ಜನರ ಇಂಥ ಸೆಂಟಿಮೆಂಟನ್ನೇ ಬಂಡವಾಳ ಮಾಡಿಕೊಂಡ ಆಸ್ಪತ್ರೆಗಳು ಅಕ್ಷರಶಃ ದರೋಡೆ ಮಾಡುತ್ತಿವೆ. ಜೀವನವಿಡೀ ಊಟ, ಬಟ್ಟೆಗೆ ಕೊರತೆ ಮಾಡಿಕೊಂಡು ಜೋಡಿಸಿಟ್ಟ ಕಾಸನ್ನು ಈ ಆಸ್ಪತ್ರೆಗಳು ಒಂದು ದಿನದಲ್ಲಿ ಕಿತ್ತು ಬಾಯಿಗೆ ಹಾಕಿಕೊಳ್ಳುತ್ತವೆ. ಜೀವ ಉಳಿಸುವ ವೈದ್ಯರೇ ಇಂದು ಯಮಸ್ವರೂಪಿಯಾಗಿದ್ದಾರೆ.
ಆಸ್ಪತ್ರೆಗಳು ಕಾಸು ಮಾಡುವ ಉದ್ಯಮದಂತಾದರೆ, ಎಂ.ಬಿ.ಬಿ.ಎಸ್ ಓದಿ ವೈದ್ಯರಾದವರು ಎಂ.ಬಿ.ಎ. ಸರ್ಟಿಫಿಕೇಟು ತಗೊಂಡವರಂತೆ ಬ್ಯುಸಿನೆಸ್ ಮಾಡುತ್ತಿದ್ದಾರೆ. ಅದರಲ್ಲಿ ಯಾರಾದರೂ ಮನುಷ್ಯತ್ವ, ಮಾನವೀಯತೆ ಅಂತಾ ಮಾತಾಡಿದರೆ ಅವರ ಮೇಲೆ ಇಲ್ಲದ ಕೇಸು ಹಾಕಿ ಒಳಕ್ಕೆ ತಳ್ಳಿಸುತ್ತಾರೆ. ಅನ್ಯಾಯಗಳ ವಿರುದ್ಧ ದನಿಯೆತ್ತುವ ಜೀವಪರ ವೈದ್ಯರನ್ನು ವ್ಯವಸ್ಥಿತವಾಗಿ ಸಿಕ್ಕಿಸಿ ಸದ್ದಡಗಿಸುತ್ತಾರೆ. ಅಕ್ರಮಗಳ ವಿರುದ್ಧ ಮಾತಾಡಿದ ವೈದ್ಯರು ಜೀವಬಿಟ್ಟ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ.
ಈ ಥರದ ಭಯಾನಕ ಮೆಡಿಕಲ್ ಮಾಫಿಯಾ ಸುತ್ತ ಆವರಿಸಿಕೊಂಡ ಸಿನಿಮಾ ಚೇಜ಼್. ಅನಿರೀಕ್ಷಿತವಾಗಿ ಪೊಲೀಸ್ ಠಾಣೆಗೆ ಬಂದ ಹುಡುಗಿ ಅನೇಕ ತಿರುವುಗಳಿಗೆ ಕಾರಣವಾಗುತ್ತಾಳೆ. ಪೊಲೀಸ್ ಅಧಿಕಾರಿ, ಆತನ ವೈದ್ಯೆ ಪತ್ನಿ, ಮಗು, ಕಿಡ್ನ್ಯಾಪ್, ಕಾರು ಅಪಘಾತ, ಪ್ರೀತಿಸಿದ ಹುಡುಗ, ಕೊಲೆ, ವಿಲಕ್ಷಣ ವ್ಯಕ್ತಿತ್ವದ ವೈದ್ಯ, ಬಹುಮುಖ ಪ್ರತಿಭೆಯ ಡಾಕ್ಟರ್, ಕಾಸಿಗಾಗಿ ಪರದಾಡುವ ಯುವಕ, ಕಾಸು ಕೊಟ್ಟು ಕವಾತ ತಿನ್ನುವ ಕಾಮಿಡಿ ಪೀಸು, ಅಕ್ರಮ ಬಯಲಿಗೆಳೆಯಲು ಹೋಗೊ ಕೊಲೆಯಾದ ಯುವತಿ… ಹೀಗೆ ಏಳೆಂಟು ಪ್ರಧಾನ ಪಾತ್ರಗಳ ಮೂಲಕ ಹೇಳಿರುವ ಕಥೆ ಇದರಲ್ಲಿದೆ. ತುಂಬಾ ತೀಕ್ಷ್ಣವಾಗಿ ಚಿಂತಿಸುವ, ಕ್ರಿಯಾಶೀಲ ನಿರ್ದೇಶಕ ಮಾತ್ರ ಕಟ್ಟಬಹುದಾದ ಸಿನಿಮಾ ಚೇಜ಼್. ಸಣ್ಣ ಪಾತ್ರ ಕೂಡಾ ಅನವಶ್ಯಕ ಅನ್ನಿಸದಂತೆ ರೂಪಿಸಿದ್ದಾರೆ. ನಿರ್ದೇಶಕರ ಶ್ರಮ ಮತ್ತು ಶ್ರದ್ಧೆ ಇಡೀ ಚಿತ್ರದಲ್ಲಿ ಎದ್ದು ಕಾಣುತ್ತದೆ.
ಎಥಿಕಲ್ ಪ್ರೊಟೋಕಾಲ್ ಇಲ್ಲದೆ ಕ್ಲಿನಿಕಲ್ ಟ್ರಯಲ್ ಗಳನ್ನು ಮಾಡುವ ಆಸ್ಪತ್ರೆಗಳು, ಆ ಮೂಲಕ ಎಷ್ಟು ಜನರ ಜೀವಕ್ಕೆ ಸಂಚಕಾರ ತರುತ್ತಿದ್ದಾರೆ… ಮಾನವನ ದೇಹದ ಮೇಲೆ ಸರ್ಜಿಕಲ್ ಇನ್ಸ್ಟುಮೆಂಟ್ ಮತ್ತು ಆರ್ಟಿಫಿಷಿಯಲ್ ವಾಲ್ವ್ಸ್ಗಳು ಹಲವು ಬಗೆಯ ದುಷ್ಪರಿಣಾಮಗಳನ್ನು ಸೃಷ್ಟಿಸುತ್ತಿವೆ. ಇಂಥ ವೈದ್ಯ ವಿಜ್ಞಾನದ ಲೋಪಗಳನ್ನು ನೇರವಾಗಿ ಹೇಳಿದ್ದಿದ್ದರೆ ಬಹುಶಃ ಅದೊಂದು ಡಾಕ್ಯುಮೆಂಟರಿ ಆಗಿಬಿಡುತ್ತಿತ್ತೋ ಏನೋ? ನಿರ್ದೇಶಕ ವಿಲೋಕ್ ಶೆಟ್ಟಿ ಗಟ್ಟಿಯಾದ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು, ಮರ್ಡರ್ ಮಿಸ್ಟರಿಗೆ ರೋಚಕತೆಯನ್ನು ಬೆರೆಸಿ ಮೆಡಿಕಲ್ ಮಾಫಿಯಾದ ಒಳಸುಳಿಗಳು ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಹೇಳಿದ್ದಾರೆ. ಟ್ರಿಕ್ಕಿ ಸ್ಕ್ರೀನ್ ಪ್ಲೇ ಮೂಲಕ ನೋಡುವ ಪ್ರೇಕ್ಷಕರನ್ನು ಕನ್ಫ್ಯೂಸ್ ಮಾಡುತ್ತಲೇ ಸ್ಪಷ್ಟ ಚಿತ್ರಣವನ್ನೂ ನೀಡಿದ್ದಾರೆ. ಅಂಧೆಯ ಪಾತ್ರದಲ್ಲಿ ನಟಿಸಿದ್ದರೂ ರಾಧಿಕಾ ಚೇತನ್ ಜಾಣ್ಮೆ, ಎದುರಾಳಿಯನ್ನು ಮಣಿಸುವ ಆಕ್ಷನ್ ದೃಶ್ಯಗಳಲ್ಲಿ ಅವರ ಅಭಿನಯ ಸೂಪರ್. ಅರವಿಂದ ರಾವ್ ಅವರ ಕ್ಯಾಟ್ ಐ ಕೂಡಾ ಪಾತ್ರಕ್ಕೆ ಸಹಕಾರಿಯಾಗಿದೆ. ಅವಿನಾಶ್ ನರಸಿಂಹರಾಜು ಥರದ ಅದ್ಭುತ ನಟನ ದನಿ ಚಿತ್ರದಲ್ಲಿ ಬಳಕೆ ಆಗದಿರುವುದು ಏನೋ ಕೊರತೆ ಅನ್ನಿಸುತ್ತದೆ. ಅರ್ಜುನ್ ಯೋಗಿ, ಶೀತಲ್ ಶೆಟ್ಟಿ, ಪ್ರಮೋದ್ ಶೆಟ್ಟಿ ಬ್ಯೂಟಿಫುಲ್ಲಾಗಿ ನಟಿಸಿದ್ದಾರೆ. ಶ್ವೇತಾ ಸಂಜೀವುಲು ಅವರಿಗೆ ಇಲ್ಲಿ ಪ್ರಾಮುಖ್ಯತೆ ಇರುವ ಪಾತ್ರ ಸಿಕ್ಕಿದೆ. ಅವರು ಕೂಡಾ ಅಷ್ಟೇ ತನ್ಮಯರಾಗಿ ಅಭಿನಯಿಸಿದ್ದಾರೆ. ತುಳು ನಟ ಅರವಿಂದ ಬೋಳಾರರ ನಟನೆ ಸ್ವಲ್ಪ ಓವರ್ ಅನ್ನಿಸುತ್ತದೆ. ಆ ಥರದ ನಟನೆಗೆ ಅವರು ಒಗ್ಗಿರುವುದರಿಂದ ಬಹುಶಃ ಅವರನ್ನು ಮೊದಲಿಂದಲೂ ನೋಡಿದವರಿಗೆ ಅದು ಗಮನಕ್ಕೆ ಬಾರದು. ಕಾರ್ತಿಕ್ ಆಚಾರ್ಯ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಿನಿಮಾದ ಅಗತ್ಯಕ್ಕೆ ತಕ್ಕಂತಿದೆ. ಇಂಥ ಸಿನಿಮಾವನ್ನು ಸಕಲನ ಮಾಡುವುದು ಕಷ್ಟದ ಕೆಲಸ. ಕ್ರೇಜಿ಼ ಮೈಂಡ್ ಶ್ರೀ ಅವರಂಥಾ ಕಸುಬುದಾರ ಎಡಿಟರ್ ಮಾತ್ರ ಅದನ್ನು ನಿಭಾಯಿಸಬಲ್ಲರು ಅನ್ನೋದಕ್ಕೆ ʻಚೇಜ಼್ʼ ಉದಾಹರಣೆಯಾಗಿದೆ. ಬಿಡುಗಡೆಯಾಗಿರುವ ಹತ್ತಾರು ಮುಕ್ಕಾಲು ಡಜ಼ನ್ ಸಿನಿಮಾಗಳ ನಡುವೆ ಚೇಸ್ ವಿಶಿಷ್ಟ ಚಿತ್ರ ಅನ್ನೋದು ನಿಜ. ಇಂಥ ಸಿನಿಮಾವನ್ನು ಜನ ನೋಡಬೇಕಷ್ಟೇ…