ಆಡಿಯೋ ಮಾರುಕಟ್ಟೆ ಪಾತಾಳದಲ್ಲಿದೆ ಎಂಬ ಹೊತ್ತಲ್ಲಿ, ಹಾಸ್ಯ ನಟ ಬಿರಾದಾರ್ ಅಭಿನಯದ “90 ಬಿಡಿ ಮನೀಗ್ ನಡಿ” ಸಿನಿಮಾದ ಹಾಡುಗಳು ಭಾರೀ ಮೊತ್ತಕ್ಕೆ ಸೋಲ್ಡೌಟ್ ಆಗಿದೆ!!.
ಹೌದು! ‘A2 ಮ್ಯೂಸಿಕ್’ ಕಂಪೆನಿಯು ಚಿತ್ರತಂಡ ನಿರೀಕ್ಷಿಸದ ಭಾರೀ ಮೊತ್ತ ಕೊಟ್ಟು ಹಾಡುಗಳನ್ನ ಕೊಂಡುಕೊಂಡಿದೆ.! ಹಿರಿಯ ನಟ ‘ವೈಜನಾಥ ಬಿರಾದಾರ್’ ಅಭಿನಯದ ಐನೂರನೇ ಚಿತ್ರ ಎಂಬ ಸದ್ದಿನೊಂದಿಗೆ ತಣ್ಣಗೆ ಸುದ್ದಿಯಲ್ಲಿದ್ದ ಚಿತ್ರಕ್ಕೆ, ಇದೀಗ ಆಡಿಯೋ ಕಂಪೆನಿ ಕೊಟ್ಟ ಆಫರ್ ಮೈಲೇಜ್ ಹೆಚ್ಚಿಸಿದೆ. ಅಲ್ಲಿಗೆ ಹಾಸ್ಯನಟ ಬಿರಾದಾರ್ ಅವರನ್ನ ಕಮರ್ಷಿಯಲ್ ನಾಯಕನನ್ನಾಗಿಸುವಂಥ ಸಾಹಸ ತೋರಿದ ಬಾಗಲಕೋಟೆಯ “ಅಮ್ಮಾ ಟಾಕೀಸ್” ಸಂಸ್ಥೆಗೆ ಸಹಜವಾಗೇ ಖುಷಿ ಇಮ್ಮಡಿಯಾಗಿದೆ.
ಅಸಲಿಗೆ, ಈ ಸಿನಿಮಾ ಇತ್ತೀಚೆಗೆ ಸೆನ್ಸಾರ್ ಮಂಡಳಿಯಿಂದ ಟೈಟಲ್ ತಗಾದೆ ಎದುರಿಸಿ, “90 ಹೊಡಿ ಮನೀಗ್ ನಡಿ” ಬದಲಿಗೆ “90 ಬಿಡಿ ಮನೀಗ್ ನಡಿ” ಎಂದು ಟೈಟಲ್ ಬದಲಿಸಿಕೊಂಡು ಒಲ್ಲದ ಮನಸ್ಸಿನಿಂದಲೇ ಮಗ್ಗುಲು ಬದಲಿಸಿತ್ತು. ಅದಾದ ಮೇಲೆ ನಡೆದ ಈ ಆಡಿಯೋ ಮೂಲದ ಭಾರೀ ಬೆಳವಣಿಗೆಯಿಂದಾಗಿ ಚಿತ್ರತಂಡ ಫುಲ್ ಖಷ್ ಆಗಿದೆ. ಹಾಗೆ ನೋಡಿದರೆ, ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಗಾಂಧಿ ನಗರದಲ್ಲಿ ಇವರ ಹೊಸ ಸಾಹಸದ ಬಗ್ಗೆ ಸದ್ದಂತು ಇದ್ದೇ ಇತ್ತು.!
“ಎಪ್ಪತ್ತು ವರ್ಷದ ಹಿರಿಯ ನಟನನ್ನ, ಕಮರ್ಷಿಯಲ್ ಚಿತ್ರಕ್ಕೆ ಹೀರೋ ಮಾಡಿದ್ದೇ ಒಂದು ಹೊಸ ಪ್ರಯೋಗ ಮತ್ತು ಸಾಹಸ” ಎಂಬುದು ಸಿನಿಪಂಡಿತರ ಲೆಕ್ಕಾಚಾರದ ಮಾತಾಗಿದೆ.!! ಅದರಂತೆ ಇದೀಗ ಸಿನಿಮಾ ಪೂರ್ಣಗೊಂಡು ಫಸ್ಟ್ ಕಾಪಿ ತಯಾರಾಗಿದೆ. ಮುಂದುವರೆದ ಚಿತ್ರತಂಡ ಸಿನಿಮಾ ಸೆನ್ಸಾರ್ ಕಾರ್ಯ ಮುಗಿಸಿಕೊಂಡು, ಚಿತ್ರದ ಮುಂದಿನ ಬೆಳವಣಿಗೆಯ ಕಾರ್ಯವಾಗಿ ಆಡಿಯೋ ಕಂಪೆನಿಯ ಕದ ತಟ್ಟಿದೆ. ಅಲ್ಲಿ ಹಾಡಿಗೆ ಸಿಕ್ಕ ಪ್ರಶಂಸೆ ಮತ್ತು ಭಾರೀ ಬೆಲೆ ಕಂಡು ಚಿತ್ರತಂಡಕ್ಕೆ ” ತಮ್ಮ ರಿಸ್ಕೀ ಸಾಹಸ ಸಾರ್ಥಕ ಎನಿಸಿದೆ.”!!
“ಮೊದಲಿಗೆ ನಾವು ತೋರಿಸಿದ ಪ್ರಿವ್ಯೂವ್ ಹಾಡು ಕಂಡ ಕಂಪೆನಿಯವರು, ಎಪ್ಪತ್ತು ವರ್ಷದ ಬಿರಾದಾರ್ ಡಾನ್ಸ್ ಸ್ಟೆಪ್ಸ್ ಗೆ ಫುಲ್ ಫಿದಾ ಆಗಿ, ನಮ್ಮ ಈ ಸಾಹಸಕ್ಕೆ ಬೆನ್ನು ತಟ್ಟಿ ಭೇಷ್ ಎಂದಿದ್ದಾರೆ” ಎನ್ನುತ್ತಾರೆ ಚಿತ್ರದ ಜಂಟಿ ನಿರ್ದೇಶಕರಾದ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ. ಹೀಗೆ ಖುದ್ದು ಆಡಿಯೋ ಕಂಪೆನಿಯವರೇ “ನಿಮ್ಮ ಸಿನಿಮಾದ ಹಾಡುಗಳು ಸದ್ದು ಮಾಡುತ್ತವೆ” ಎಂದು ಹೇಳಿ, ನಿರೀಕ್ಷೆಗೂ ಮೀರಿ ಸಾಥ್ ಕೊಟ್ಟಿದ್ದು ಸಹಜವಾಗೇ “ನೈಂಟಿ” ಟೀಮಿಗೆ ಆನೆ ಬಲ ಬಂದಂತಾಗಿದೆ.
ಅದೇ ಖುಷಿಯಲ್ಲಿ ಸದ್ಯ ಟೀಸರ್ ಒಂದನ್ನ ಜನರ ಮುಂದಿಡಲು ತಯಾರಿ ನಡೆದಿದ್ದು ಸ್ಟಾರ್ ನಟರೊಬ್ಬರು ಸಾಥ್ ನೀಡುತ್ತಿದ್ದಾರಂತೆ. ಒಟ್ಟಿನಲ್ಲಿ ಕುಡಿತದ ಬಗ್ಗೆ ಹೇಳುತ್ತಾ ಕಾಮಿಡಿ ಜೊತೆ ಕ್ರೈಂ ಥ್ರಿಲ್ಲರ್ ರೂಪದಲ್ಲಿ ಚಿತ್ರ ಕಟ್ಟಿಕೊಡಲಾಗಿದದ್ದು, ಶೀಘ್ರದಲ್ಲೇ ಸಿನಿಮಾ ತೆರೆ ಕಾಣಿಸುವ ಪ್ರಯತ್ನದಲ್ಲಿದ್ದೇವೆ” ಎನ್ನುತ್ತಿದೆ ಚಿತ್ರತಂಡ.