ಹಿರಿಯ ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡು ಆರಂಭದಿಂದಲೇ ಭರ್ಜರಿ ಸದ್ದು ಮಾಡುತ್ತಲೇ ಬಂದ ಚಿತ್ರ ’90 ಬಿಡಿ ಮನೀಗ್ ನಡಿ’. ಉತ್ತರ ಕರ್ನಾಟಕ ಶೈಲಿಯ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥೆ ಎನ್ನುತ್ತಾ, ‘ಟೀಸರ್’ ಮೂಲಕ ಚಿತ್ರ ಭರವಸೆ ಮೂಡಿಸಿತ್ತು. ಇದೀಗ ಚಿತ್ರತಂಡ ಚಿತ್ರದ “ಟೈಟಲ್ ಸಾಂಗ್” ಬಿಡುಗಡೆಗೊಳಿಸುವ ಸುದ್ದಿ ಮಾಡಿಕೊಂಡಿದೆ. ಈ ಹಿಂದೆ “ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರನ್ ಬಾರಸ್ತಿ..” ಎಂಬ ಕಚಗುಳಿ ಇಡುವ ಸಾಲುಗಳುಳ್ಳ ಪಕ್ಕಾ ಉತ್ತರಕರ್ನಾಟಕದ ಜವಾರಿ ಹಾಡು ಬಿಡುಗಡೆ ಕಾಣಿಸಿ ಸಖತ್ ಸೌಂಡು ಮಾಡಿಕೊಂಡಿತ್ತು. ಎಪ್ಪತ್ತು ವರ್ಷದ ಬಿರಾದಾರ್, ಇಪ್ಪತ್ತರ ನವ ತರುಣನಂತೆ ಹೆಜ್ಜೆ ಹಾಕಿದ ಪರಿಗೆ ಪ್ರೇಕ್ಷಕಪ್ರಭು ಫುಲ್ ಮಾರ್ಕ್ಸ್ ನೀಡಿದ್ದ. ಆ ಮೂಲಕ ಜನಮಾಸದಲ್ಲಿ ಚಿತ್ರದ ಮೇಲೊಂದು ಸ್ಪೆಷಲ್ ನಿರೀಕ್ಷೆ ಹುಟ್ಟಿಕೊಂಡಿತ್ತು. ಅದರಂತೆ ಮುಂದುವರೆದ ಚಿತ್ರತಂಡ ಸದ್ಯ “ಸಂಜೆ ಗಂಟ ಸುಮ್ನೆ ದುಡಿ.. ನೈಂಟಿ ಹೊಡಿ ಮನೀಗ್ ನಡಿ..” ಎಂಬ ಶೀರ್ಷಿಕೆ ಗೀತೆಯ ಮೂಲಕ ಪ್ರೇಕ್ಷಕರಿಗೆ ನೈಂಟಿಯ ನಶೆ ಏರಿಸಲು ಸಜ್ಜಾಗಿದೆ.
‘ಅಮ್ಮ ಟಾಕೀಸ್ ಬಾಗಲಕೋಟೆ’ ಸಂಸ್ಥೆಯಡಿಯಲ್ಲಿ ರತ್ನಮಾಲ ಬಾದರದಿನ್ನಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ, ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿ ನಿರ್ದೇಶನವಿದೆ. ಹಾಡು ಇದೇ ಸೋಮವಾರ ಸಂಜೆ 5 ಘಂಟೆಗೆ A2 ಮ್ಯೂಸಿಕ್ ವಾಹಿನಿಯಲ್ಲಿ ಬಿಡುಗಡೆಗಡೆಗೊಳ್ಳುತ್ತಿದ್ದು, ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು, ಬಲು ಅಪರೂಪಕ್ಕೆ ಮೆಲೋಡಿ ಕಿಂಗ್ ಡಾ. ರಾಜೇಶ್ ಕೃಷ್ಣನ್ ಈ ‘ಎಣ್ಣೆ ಹಾಡಿ’ಗೆ ಧ್ವನಿಯಾಗಿದ್ದಾರೆ. ಇದೇ ಚಿತ್ರದ “ಸಿಂಗಲ್ ಕಣ್ಣಾ” ಹಾಡಿಗೆ ಕೊರಿಯೋಗ್ರಫಿ ಮಾಡಿದ್ದ ಭೂಷಣ್ ನೈಂಟಿಯ ಎಣ್ಣೆ ಏಟಿನ ಹಾಡಿಗೆ ಹೆಜ್ಜೆಹೊಂದಿಸಿದ್ದಾರೆ. ಹಾಡಿನಲ್ಲಿ ಬಿರಾದಾರ್, ಕರಿಸುಬ್ಬು, ಪ್ರಶಾಂತ್ ಸಿದ್ಧಿ ಪ್ರಮುಖವಾಗಿ ಕಾಣಿಸಿಕೊಂಡಿದ್ದು, ಕನ್ನಡಕ್ಕೆ ಮತ್ತೊಂದು “ಹಿಟ್ ಎಣ್ಣೆ ಹಾಡು” ಕೊಡಲು ತಯಾರಾದಂತಿದೆ. ಅಸಲಿಗೆ, ಸೋಮವಾರ ಸಂಜೆ “ನೈಂಟಿ”ಯ ಈ ಹಾಡು ಪ್ರೇಕ್ಷಕರ ಮಡಿಲು ಸೇರಲಿದ್ದು, ನಶೆ ಏರಿಸುವತ್ತ ಹಾಡು ನಿರೀಕ್ಷೆ ಹೆಚ್ಚಿಸಿಕೊಂಡಿದೆ.