ಅಮ್ಮ ಟಾಕೀಸ್ ಬಾಗಲಕೋಟ ಸಂಸ್ಥೆಯಡಿ ರತ್ನಮಾಲಾ ಬಾದರದಿನ್ನಿ ನಿರ್ಮಿಸುತ್ತಿರುವ “90 ಬಿಡಿ ಮನೀಗ್ ನಡಿ” ಚಿತ್ರ ಇದೇ 29ಕ್ಕೆ ಬಿಡುಗಡೆಯಾಗುತ್ತಿದೆ. ಹಾಸ್ಯ ನಟ ಬಿರಾದಾರ್ ಅಭಿನಯದ ಐನೂರನೇ ಚಿತ್ರ ಇದಾಗಿದ್ದು, ಚಿತ್ರದಲ್ಲಿ ವಿಭಿನ್ನ ಗೆಟಪ್ಗಳ ಮೂಲಕ ಇದಾಗಲೇ ಸದ್ದು ಮಾಡಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲೇ ಹೆಚ್ಚಾಗಿ ಚಿತ್ರೀಕರಣಗೊಂಡು ಆ ಶೈಲಿಯಲ್ಲೇ ಚಿತ್ರ ಮೂಡಿ ಬಂದಿದ್ದು, ಇದೇ ಇಪ್ಪತ್ತೊಂಬತ್ತರ ಗುರುವಾರದಿಂದ ರಾಜ್ಯಾದ್ಯಂತ ನೈಂಟಿಯ ನಶೆ ಏರಿಸಲು ಚಿತ್ರತಂಡ ಸಜ್ಜಾಗಿದೆ.
ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶಿಸಿರುವ 90ಯಲ್ಲಿ ಧರ್ಮ,ಕರಿಸುಬ್ಬು, ಪ್ರಶಾಂತ್ ಸಿದ್ದಿ, ನೀತಾ ಮೈಂದರ್ಗಿ, ಪ್ರೀತು ಪೂಜಾ, ರಿಷಭ್ ಬಾದರದಿನ್ನಿ, ಅಭಯ್ ವೀರ್, ಆರ್ ಡಿ ಬಾಬು, ವಿವೇಕ್ ಜಂಬಗಿ, ಮುರುಳಿ ಹೊಸಕೋಟೆ,ರವಿದೀಪ್ ದಳವಾಯಿ ಮುಂತಾದವರು ಬಿರಾದಾರ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕೃಷ್ಣ ನಾಯ್ಕರ್ ಛಾಯಾಗ್ರಹಣ, ಯುಡಿವಿ ವೆಂಕಟೇಶ್ ಸಂಕಲನ, ರಾಕಿ ರಮೇಶ್ ಸಾಹಸವಿರುವ 90ಗೆ ಕಿರಣ್ ಶಂಕರ್ ಮತ್ತು ಶಿವು ಭೇರಗಿ ಸಂಗೀತ ನಿರ್ದೇಶಿನವಿದೆ.
ಈಗಾಗಲೇ ಚಿತ್ರದ ಎರಡು ಹಾಡು ಬಿಡುಗಡೆ ಕಂಡು ಜನಮನ ರಂಜಿಸಿವೆ. ವಿಶೇಷವಾಗಿ ಉತ್ತರ ಕರ್ನಾಟಕ ಶೈಲಿಯ “ಸಿಂಗಲ್ ಕಣ್ಣಾ ಹಾರಸ್ತಿ ಡಬ್ಬಲ್ ಹಾರನ್ ಬಾರಸ್ತಿ..” ಎಂಬ ಕಚಗುಳಿ ಇಡುವ ಹಾಡು ಸಖತ್ ಸದ್ದಾಗಿದೆ. ಇತ್ತಿಚೆಗೆ ಬಿಡುಗಡೆಯಾದ ಟ್ರೈಲರ್ ಕೂಡ ಸದ್ದು ಮಾಡುತ್ತಿದ್ದು, ನೈಂಟಿ ಕಿಕ್ ಏರಿಸುವ ಜೊತೆಗೆ ಥ್ರಿಲ್ ಕೊಡುವ ಕಂಟೆಂಟ್ ಚಿತ್ರ ಎಂಬಂತೆ ಟ್ರೈಲರ್ ಕಟ್ಟಿಕೊಡಲಾಗಿದೆ.
ಒಟ್ಟಿನಲ್ಲಿ ಯಾವ ದೊಡ್ಡ ಸ್ಟಾರ್ ಸಿನಿಮಾಗಳು ಇಲ್ಲದ ಸಮಯಕ್ಕೆ ಐನೂರು ಚಿತ್ರಗಳ ಸರದಾರ ಬಿರಾದಾರ್ “90” ಹೊತ್ತು ತಂದಿದ್ದು, ಮುಂದಿನ ಗುರುವಾರದಿಂದ ಅದೃಷ್ಟ ಪರೀಕ್ಷೆ ನಡೆಯಲಿದೆ.