ಇಬ್ಬರ ಈ ಸಾಧನೆಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರಿಂದ ಅಭಿನಂದನೆ.
ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಲಹರಿ ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷಗಳು ಕಳೆದಿದೆ. ಈಗ ಮತ್ತೊಂದು ವಿಶೇಷವೆಂದರೆ ಈ ಸಂಸ್ಥೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿಕೇಜ್ ನೇತೃತ್ವದಲ್ಲಿ “ಡಿವೈನ್ ಟೈಡ್ಸ್” ಎಂಬ ಅದ್ಭುತ
ಆಲ್ಬಂ ಮೂಡಿಬಂದಿದೆ. ಈ ಆಲ್ಬಂ ಗಾಗಿ ರಿಕ್ಕಿಕೇಜ್ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಅವಾರ್ಡ್ ಬಂದಿರುವುದು ಇದು ಎರಡನೇ ಬಾರಿ.
ಈ ಸಂತಸ ಹಂಚಿಕೊಳ್ಳಲು ಲಹರಿ ಸಂಸ್ಥೆ ಆತ್ಮೀಯ ಸಮಾರಂಭ ಏರ್ಪಡಿಸಿತ್ತು. ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವರಾದ ಸುಧಾಕರ್, ಪಬ್ಲಿಕ್ ಟಿವಿ ಮುಖ್ಯಸ್ಥರಾದ ರಂಗನಾಥ್, ಕ್ರೇಜಿಸ್ಟಾರ್ ರವಿಚಂದ್ರನ್, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಾಜೇಂದ್ರ ಸಿಂಗ್ ಬಾಬು, ವಸಿಷ್ಠ ಸಿಂಹ, ಗುರುಕಿರಣ್, ಉದಯ್ ಕೆ ಮೆಹ್ತಾ, ಕೆ.ಪಿ. ಶ್ರೀಕಾಂತ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಾನು ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ವೇಲು ಅವರನ್ನು ಮೊದಲಿನಿಂದಲೂ ಬಲ್ಲೆ. ನಮ್ಮ ಪಕ್ಕದ ಮನೆಯವರು ಅವರು. ಲಹರಿ ಸಂಸ್ಥೆ ಈ ಎತ್ತರಕ್ಕೆ ಬೆಳೆದಿರುವುದು ಖುಷಿ ತಂದಿದೆ. ಇಲ್ಲಿಗೆ ಬಂದಾಗ ಈ ಆಲ್ಬಂ ನ ಒಂದು ಹಾಡು ನೋಡಿ ತುಂಬಾ ಸಂತೋಷವಾಯಿತು. ಗ್ರ್ಯಾಮಿ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಅದರ ಬಗ್ಗೆ ತಿಳಿದು ಆಶ್ಚರ್ಯವಾಯಿತು. ರಿಕ್ಕಿಕೇಜ್ ಎರಡು ಸಲ ಈ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ಅಭಿನಂದನಾರ್ಹ. ಅವರ ಸಾಧನೆ ಇಡೀ ಕನ್ನಡಿಗರು ಹೆಮ್ಮೆ ಪಡುವಂತದು. ಅವರಿಂದ ಇನ್ನಷ್ಟು ಈ ರೀತಿಯ ಸಾಧನೆಯಾಗಲಿ. ಅದು ಎಲ್ಲರಿಗೂ ಸ್ಪೂರ್ತಿಯಾಗಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.
ನನಗೆ ಇದು ಕುಟುಂಬದ ಸಮಾರಂಭ ಇದ್ದ ಹಾಗೆ. ಕಳೆದವರ್ಷ ಕೊರೋನ ದಿಂದ ಅನೇಕ ಜನ ಹತ್ತಿರದವರನ್ನು ಕಳೆದುಕೊಂಡಿದ್ದೀವಿ. ಕೆಟ್ಟಸಮಯ ಹೋದ ಮೇಲೆ ಒಳ್ಳೆಯ ಸಮಯ ಬರುತ್ತದೆ ಎನ್ನುತ್ತಾರೆ. ಈಗ ಒಳ್ಳೆಯ ಸಮಯ ಬಂದಿದೆ. ಕೆ.ಜಿ.ಎಫ್ ೨ ಚಿತ್ರ ಪ್ರಚಂಡ ಜಯಭೇರಿ ಬಾರಿಸುತ್ತಿದೆ. ರಿಕ್ಕಿಕೇಜ್ ಗೆ ಗ್ರ್ಯಾಮಿ ಬಂದಿದೆ. ಇನ್ನೂ ಲಹರಿ ಸಂಸ್ಥೆ ಜೊತೆ ನನ್ನ ಸ್ನೇಹ ಬಹಳ ವರ್ಷಗಳದು. ನನ್ನ ಪ್ರೇಮಲೋಕ ಸೇರಿದಂತೆ ಅನೇಕ ಚಿತ್ರಗಳ ಹಾಡುಗಳು ಈ ಸಂಸ್ಥೆ ಮೂಲಕ ಬಿಡುಗಡೆಯಾಗಿದೆ ಅಂದರು ಕ್ರೇಜಿಸ್ಟಾರ್ ರವಿಚಂದ್ರನ್.
ನಿಜಕ್ಕೂ ಇದೊಂದು ಆತ್ಮೀಯ ಸಮಾರಂಭ. “ಮನ ಮೆಚ್ಚಿದ ಹುಡುಗಿ” ಸೇರಿದಂತೆ ನಮ್ಮ ಸಂಸ್ಥೆಯ ಅನೇಕ ಚಿತ್ರಗಳು ಲಹರಿ ಮೂಲಕ ಬಿಡುಗಡೆಯಾಗಿದೆ. ಈಗ ಅವರ ಸಂಸ್ಥೆಯ ನಿರ್ಮಾಣದ ಆಲ್ಬಂ ಸಾಂಗ್ ಗಾಗಿ ರಿಕ್ಕಿಕೇಜ್ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ಇಬ್ಬರಿಗೂ ಶುಭಾಶಯ ಎಂದರು ಶಿವರಾಜಕುಮಾರ್.
ಕೇವಲ ಐನ್ನೂರು ರೂಪಾಯಿಯಿಂದ ಆರಂಭವಾದ ಈ ಸಂಸ್ಥೆ ಈ ಮಟ್ಟಕ್ಕೆ ಬರಲು ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ. ಇದರಲ್ಲಿ ಅಣ್ಣ ಮನೋಹರ್ ನಾಯ್ಡು ಅವರ ಪರಿಶ್ರಮ ಸಾಕಷ್ಟಿದೆ. ಲಹರಿ ನಿರ್ಮಾಣದ ಆಲ್ಬಂ ಗಾಗಿ ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿರುವುದು ಸಂತೋಷ. ಅದಕ್ಕಾಗಿ ರಿಕ್ಕಿಕೇಜ್ ಅವರಿಗೆ ಧನ್ಯವಾದ ಎಂದರು ಲಹರಿ ವೇಲು.
ಲಹರಿ ಜೊತೆಗಿನ ಸಂಬಂಧ ಹಾಗೂ ಈ ಆಲ್ಬಂ ಸಾಂಗ್ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟ ರಿಕ್ಕಿಕೇಜ್ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಪಬ್ಲಿಕ್ ಟಿ ವಿ ರಂಗನಾಥ್ ಅವರು ಸೇರಿದಂತೆ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರು ಲಹರಿ ಸಂಸ್ಥೆ ಹಾಗೂ ರಿಕ್ಕಿಕೇಜ್ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.