ಕರೊನಾ ಮೊದಲ ಲಾಕ್ಡೌನ್ ಸಂದರ್ಭದಲ್ಲಿ ಸ್ಥಾಪನೆಯಾದ ಪಿಎಂ ಕೇರ್ಸ್ ಫಂಡ್‌ನ ಸಲಹಾ ಮಂಡಳಿಗೆ ಹೆಮ್ಮೆಯ ಕನ್ನಡತಿ ಮತ್ತು ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಆಯ್ಕೆಯಾಗಿದ್ದಾರೆ.
ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಯಾಗಿರುವ ಈ ಪಿಎಂ ಕೇರ್ಸ್ ಫಂಡ್, ಎರಡೂವರೆ ವರ್ಷಗಳ ಹಿಂದೆ ಮಾರ್ಚ್ 28, 2020ರಂದು ಸ್ಥಾಪನೆಯಾಯಿತು. ಈ ನಿಧಿಗೆ ಕಾರ್ಪೊರೇಟ್ ಸಂಸ್ಥೆಗಳು ಸೇರಿದಂತೆ ಎಲ್ಲಾ ನಾಗರಿಕರು ಕೊಡುಗೆ ನೀಡುವ ಮೂಲಕ ವಿಪತ್ತಿನ ಸಂದರ್ಭದಲ್ಲಿ ದೇಶದ ಜನರಿಗೆ ಸಹಾಯ ಮಾಡಬಹುದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ನಿಧಿಗೆ ಟ್ರಸ್ಟಿಗಳು ಮತ್ತು ಸಲಹಾ ಮಂಡಳಿಯ ಸದಸ್ಯರನ್ನು ನಾಮನಿರ್ದೇಶನ ಮಾಡಲಾಯಿತು. ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟಿಗಳಾಗಿ ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕೆ.ಟಿ. ಥಾಮಸ್ ಮತ್ತು ಮಾಜಿ ಲೋಕಸಭಾ ಸ್ಪೀಕರ್ ಕರಿಯಾ ಮುಂಡಾ ಆಯ್ಕೆಯಾದರೆ, ಟ್ರಸ್ಟ್ ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ರಾಜೀವ್ ಮೆಹ್ರಿಷಿ, ಮಾಜಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಮತ್ತು ಟೀಚ್ ಫಾರ್ ಇಂಡಿಯಾ ಸಹ-ಸಂಸ್ಥಾಪಕ ಆನಂದ್ ಶಾ ಅವರನ್ನು ಸಲಹಾ ಮಂಡಳಿಗೆ ನೇಮಿಸಲಾಗಿದೆ. ಈ ಸಭೆಯಲ್ಲಿ ನೂತನ ಟ್ರಸ್ಟಿಗಳು ಮತ್ತು ಸಲಹೆಗಾರರು ಭಾಗವಹಿಸಿದ್ದರು.
ಹೊಸ ಟ್ರಸ್ಟಿಗಳು ಮತ್ತು ಸಲಹೆಗಾರರ ಆಯ್ಕೆಯಿಂದ ಪಿಎಂ ಕೇರ್ಸ್ ಫಂಡ್‌ನ ಕಾರ್ಯಚಟುವಟಿಕೆಗಳು ಇನ್ನಷ್ಟು ವ್ಯಾಪಕವಾಗಲಿವೆ ಎಂದು ಪ್ರಧಾನಮಂತ್ರಿ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿನ ಅವರ ಅಪಾರ ಅನುಭವವು, ಈ ನಿಧಿ ಹೆಚ್ಚುಹೆಚ್ಚು ಜನರ ಅಗತ್ಯಗಳಿಗೆ ಸ್ಪಂದಿಸುವಂತೆ ಮಾಡಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಭೆಯಲ್ಲಿ, 4345 ಮಕ್ಕಳನ್ನು
ವಿದ್ಯಾಭ್ಯಾಸವನ್ನು ಪೋಷಿಸುವ ಹೊಸ ಯೋಜನೆ ಸೇರಿದಂತೆ ಪಿಎಂ ಕೇರ್ಸ್ ನಿಧಿಯ ಸಹಾಯದಿಂದ ಕೈಗೊಂಡಿರುವ ಗಂಭೀರ ಉಪಕ್ರಮಗಳ ಕುರಿತು ಪ್ರಸ್ತುತಿಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತರಿದ್ದರು.
ಟೆಲ್ಕೋನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸುಧಾ ಮೂರ್ತಿ, ಆ ನಂತರ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇದರ ಜತೆಗೆ ಅವರು ತಮ್ಮ ಬರಹಗಳಿಂದ ಸಾವಿರಾರು ಜನರನ್ನು ಪ್ರೇರೇಪಿಸಿದ್ದಾರೆ. ಸುಧಾ ಮೂರ್ತಿ ಅವರಿಗೆ ಭಾರತ ಸರ್ಕಾರವು 2006ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಈಗ ಅವರು ಪಿಎಂ ಕೇರ್ಸ್ ಫಂಡ್ ಸಲಹಾ ಮಂಡಳಿಗೆ ಆಯ್ಕೆಯಾಗಿರುವುದು ಕನ್ನಡಿಗರಿಗೆ ಇನ್ನಷ್ಟು ಖುಷಿ ನೀಡುವ ವಿಚಾರವಾಗಿದೆ.