'ಬಬ್ರುವಾಹನ' ನಾಯಕಿಯ ಬದುಕು-ಬವಣೆ
ಸ್ನೇಹಿತರಿರಲಿ, ಬಂಧುಗಳಿರಲಿ, ಹಿತೈಷಿಗಳೇ ಇರಲಿ ಈಗಲೂ ನನ್ನನ್ನು ಕಂಡ ತಕ್ಷಣ ಹೇಳುವ ಹೆಸರೆಂದರೆ : ‘ಕಾಂಚನಾ’.
ಈ ಮಹಾನಟಿಯ ಬೆಂಗಳೂರಿನ ಆರಂಭಿಕ ಬದುಕನ್ನು ಕರ್ನಾಟಕದ ಜನತೆಗೆ ಪರಿಚಯಿಸಿದ್ದಕ್ಕಾಗಿ ನನಗೆ ಈ ಹೆಸರು ಬಂದು ಬಿಟ್ಟಿದೆ!
ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗವನ್ನಾಳಿದ ನಟಿ ಕಾಂಚನಾ ತಮ್ಮ ಹೆತ್ತವರ ಧನದಾಹಕ್ಕೆ ಬಲಿಯಾಗಿ ಬರಿಗೈಲಿ ಬೆಂಗಳೂರು ಸೇರಿಕೊಂಡಿದ್ದವರು.
ಎಲ್ಲವೂ ಸಿನೆಮಾದ ಕಥೆಯಂತೆಯೇ ನಡೆದು ಹೋಯಿತು. ಕಾಂಚನಾ ಅವರ ಬದುಕೇ ಒಂದು ಸ್ಕ್ರಿಪ್ಟ್! ಧನದಾಹಿ ಹೆತ್ತವರ ಕಿರುಕುಳದಿಂದ ಬೇಸತ್ತ ಕಾಂಚನಾ ನೆಮ್ಮದಿಯ ಬದುಕಿಗಾಗಿ ಹಪಹಪಿಸಿ ಸೇರಿಕೊಂಡದ್ದು ಬೆಂಗಳೂರಿನ ಯಲಹಂಕದ ತಮ್ಮ ಸೋದರಿ ಮನೆಯನ್ನು.
ವಾಸ್ತವವಾಗಿ ಕಾಂಚನಾ ಅವರು ವೃತ್ತಿಬದುಕನ್ನು ಆರಂಭಿಸಿದ್ದು ಗಗನಸಖಿಯಾಗಿ! ಇಂಡಿಯನ್ ಏರ್’ಲೈನ್ಸ್’ನಲ್ಲಿ ಉದ್ಯೋಗ. ಕೈತುಂಬಾ ಸಂಬಳ ಬಾರದಿದ್ದರೂ ಗೌರವಾನ್ವಿತ ಬದುಕು.
ಆದರೆ ಇವರ ಹೆತ್ತವರಿಗೆ ಬೇಕಾದದ್ದು ಹಣ ಹಣ ಹಣ!!! ಈ ಕಾರಣಕ್ಕಾಗಿಯೇ ಗಗನಸಖಿ ಹುದ್ದೆಯಿಂದ ಬಿಡಿಸಿ ಚಿತ್ರರಂಗಕ್ಕೆ ಕರೆತಂದರು ಹೆತ್ತವರು! ಕಾಂಚನಾಗೆ ಇದು ರವಷ್ಟೂ ಇಷ್ಟವಿರಲಿಲ್ಲ. ಆದರೆ ಹೆತ್ತವರ ಮಾತನ್ನು ಮೀರುವುದುಂಟೆ?
ಹೀಗಾಗಿಯೇ ಇಂಡಿಯನ್ ಏರ್’ಲೈನ್ಸ್’ಗೆ ರಾಜೀನಾಮೆ ನೀಡಿ ಈ ಗ್ಲಾಮರ್ ಲೋಕಕ್ಕೆ ಕಾಲಿರಿಸಿದರು ಕಾಂಚನಾ.
ಅದೃಷ್ಟ ಇವರ ಪರವಾಗಿತ್ತು. ಚೆಂದುಳ್ಳಿ ಚೆಲುವೆಯಾಗಿದ್ದ ಕಾಂಚನಾ ಅವರನ್ನು ನಾಯಕಿ ಪಟ್ಟ ಹುಡುಕಿಕೊಂಡು ಬಂತು. ಒಂದೇ ವರ್ಷದಲ್ಲಿ ಹದಿನೈದು ಚಿತ್ರಗಳ ಅವಕಾಶ! ತಮಿಳು ಮಾತ್ರವಲ್ಲ ತೆಲುಗು, ಕನ್ನಡ, ಮಲಯಾಳಂ ಚಿತ್ರರಂಗಗಳಿಂದಲೂ ಕರೆ ಬಂತು. ಹಿಂದಿ ಚಿತ್ರರಂಗ ಕೂಡಾ ಕೈಬೀಸಿ ಕರೆಯಿತು. ಯಾರಿಗುಂಟು, ಯಾರಿಗಿಲ್ಲ ಈ ಸೌಭಾಗ್ಯ? ಕಾಂಚನಾ ಈಗ ಪಂಚಭಾಷಾ ತಾರೆ! ಆ ಕಾಲದಲ್ಲೇ ಲಕ್ಷ ಲಕ್ಷ ಸಂಪಾದನೆ. ಮನೆ ತುಂಬಾ ದುಡ್ಡಿನ ಸುರಿಮಳೆಯಾಗುತ್ತಿರುವಂತೆಯೇ ಕಾಂಚನಾ ಹೆತ್ತವರು ಲೋಭಿಗಳಾಗಿ ಬಿಟ್ಟರು. ಮಗಳ ಸಂಪಾದನೆಯನ್ನು ಕೊಳ್ಳೆ ಹೊಡೆಯಲು ಸಂಚು ರೂಪಿಸಿ ಬಿಟ್ಟರು. ಆದರೆ ಕಾಂಚನಾ ಅಷ್ಟರ ಮಟ್ಟಿಗೆ ಜಾಣೆ. ಈಕೆ ಕೋರ್ಟ್ ಮೆಟ್ಟಿಲು ಹತ್ತಿದರು. ಕೋರ್ಟಿನ ತೀರ್ಪು ಬರುವವರೆಗೆ ಕಾಂಚನಾ ಊರು ಬಿಟ್ಟು ಹೊರಡುವುದು ಅನಿವಾರ್ಯವಾಯಿತು. ಹಾಗೆ ಮದರಾಸಿನಿಂದ ಗುಳೆ ಹೊರಟದ್ದೇ ಬೆಂಗಳೂರಿಗೆ. ಉಳಿದ ವಿವರಗಳನ್ನು ಕಾಂಚನಮ್ಮ ನನ್ನ ಬಳಿ ಹೇಳಿಕೊಂಡದ್ದು ಹೀಗೆ :
‘ನಿಜ ಹೇಳಬೇಕೆಂದರೆ ಮದರಾಸಿನಿಂದ ಬೆಂಗಳೂರಿಗೆ ಹೊರಟಾಗ ನನ್ನ ಕೈಲಿ ಚಿಕ್ಕಾಸೂ ಇರಲಿಲ್ಲ. ಬರಿಗೈಲೇ ಬಂದೆ. ನನ್ನ ಅದೃಷ್ಟವೆಂದರೆ ಬೆಂಗಳೂರಿನ ಯಲಹಂಕ ಉಪನಗರದಲ್ಲಿ ಮನೆ ಮಾಡಿಕೊಂಡಿದ್ದ ನನ್ನ ಸೋದರಿ ಗಿರಿಜಾ ಪಾಂಡೆ ರಕ್ಷಣೆ ನೀಡಿದಳು. ಆಶ್ರಯ ಕೊಟ್ಟಳು. ಊಟ ಕೊಟ್ಟಳು. ಕೋರ್ಟ್’ನಲ್ಲಿ ಬಡಿದಾಡಲು ಆಕೆಯ ಗಂಡ ಕೆ.ಪಿ.ಪಾಂಡೆ ನೆರವಾದರು. ಹೆತ್ತವರ ಸ್ಥಾನದಲ್ಲಿ ನಿಂತು ರಕ್ಷಿಸಿದರು. ಒಂದು ವೇಳೆ ಆ ಹೊತ್ತಿನಲ್ಲಿ ಅವರು ನನಗೆ ರಕ್ಷಣೆ ನೀಡದಿದ್ದರೆ ನಾನು ಎಂದೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ಅವರ ಜೊತೆ ನನ್ನ ರಕ್ಷಣೆಗೆ ನಿಂತ ಮತ್ತೊಬ್ಬರೆಂದರೆ ಮಹಾಗಣಪತಿ! ಹೌದು, ನಂಬಿದ್ರೆ ನಂಬಿ ಬಿಟ್ರೆ ಬಿಡಿ, ದಿನಬೆಳಗಾದರೆ ಸಾಕು ಯಲಹಂಕದ ನಮ್ಮ ಮನೆ ಬಳಿ ಇರುವ ಈ ಮಹಾಗಣಪತಿ ದೇವಸ್ಥಾನವೇ ನನ್ನ ಪ್ರಾರ್ಥನಾ ಮಂದಿರವಾಯಿತು. ಬೆಳಿಗ್ಗೆ, ಸಂಜೆ ಪೂಜೆಯಲ್ಲೇ ಮೈ ಮರೆತೆ. ದೇವಸ್ಥಾನವನ್ನು ಶುಚಿಗೊಳಿಸಲೂ ಹಿಂದೆ ಮುಂದೆ ನೋಡಲಿಲ್ಲ. ಅಖಂಡ ಇಪ್ಪತ್ತು ವರ್ಷಗಳ ಕಾಲ ಹೀಗೆಯೇ ಬದುಕು ಸಾಗಿತು. ಕೊನೆಗೂ ಕೋರ್ಟ್ ತೀರ್ಪು ಹೊರಬಂತು. ಚೆನ್ನೈನ ಜಿ.ಎನ್.ಚೆಟ್ಟಿ ಬೀದಿಯಲ್ಲಿರುವ ಕೋಟ್ಯಾಂತರ ರೂಪಾಯಿಗಳ ಎಕರೆಗಟ್ಟಲೆ ಆಸ್ತಿ ನನ್ನ ಪಾಲಾಯಿತು. ಜೊತೆಗೆ ಕೋಟಿ ಕೋಟಿ ಹಣ ನನ್ನ ಬ್ಯಾಂಕ್ ಅಕೌಂಟ್ ಸೇರಿತು. ಎಲ್ಲವೂ ನನ್ನ ಸ್ವಂತ ಸಂಪಾದನೆಯೇ. ಯಲಹಂಕದಲ್ಲಿರುವ ಸೋದರಿಯ ಮನೆ ಪಕ್ಕದಲ್ಲೇ ಒಂದು ದೊಡ್ಡ ಸೈಟ್ ಖರೀದಿಸಿ ಈ ಅಪಾರ್ಟ್’ಮೆಂಟ್ ಕಟ್ಟಿಸಿಕೊಂಡೆ. ಒಂದನ್ನು ಮಾತ್ರ ನನ್ನ ಉಪಯೋಗಕ್ಕಿಟ್ಟುಕೊಂಡು ಉಳಿದದ್ದನ್ನು ಬಾಡಿಗೆಗೆ ಬಿಟ್ಟೆ!
‘ಈ ಎಲ್ಲಾ ಹೋರಾಟಗಳ ನಡುವೆ ಮದುವೆಯಾಗುವುದನ್ನು ಮರೆತೆ. ಅಪ್ಪ, ಅಮ್ಮನೂ ನನ್ನ ಮದುವೆಗೆ ಚಪ್ಪಡಿಕಲ್ಲು ಎಳೆದು ಬಿಟ್ಟರು! ನಾನು ಮದುವೆಯಾದರೆ ಮಾಡಿಟ್ಟ ಆಸ್ತಿಪಾಸ್ತಿ ಕೈ ತಪ್ಪಿ ಹೋಗುವುದೆನ್ನುವ ಆತಂಕದಿಂದ ನನ್ನನ್ನು ಕನ್ಯೆಯನ್ನಾಗಿಯೇ ಇಟ್ಟುಕೊಂಡರು! ಆ ಕಾಲದಲ್ಲಿ ನಾನು ಅಪರೂಪದ ಸುಂದರಿಯಾಗಿದ್ದೆ. ತಮಿಳು ಮತ್ತು ತೆಲುಗು ಚಿತ್ರರಂಗದ ಅತಿರಥ ಮಹಾರಥರೆಲ್ಲಾ ನನ್ನನ್ನು ಮದುವೆಯಾಗಲು ಮುಂದೆ ಬಂದಿದ್ದರು. ಆದರೆ ಅವರೆಲ್ಲಾ ಮದುವೆಯಾಗಿ ಸುಖಸಂಸಾರ ನಡೆಸುತ್ತಿದ್ದವರೇ! ಗಂಡ, ಮಕ್ಕಳು, ಮನೆ, ಮಠ, ಸಂಸಾರದ ಹಂಬಲ ಯಾವ ಹೆಣ್ಣಿಗಿರುವುದಿಲ್ಲ ಹೇಳಿ? ಆದರೆ ಇದು ನನ್ನ ಪಾಲಿಗೆ ಗಗನ ಕುಸುಮವಾಯಿತು. ಇಂಥಾ ಹೆತ್ತವರನ್ನು ನಾನು ಜಗತ್ತಿನ ಯಾವ ಭಾಗದಲ್ಲೂ ನೋಡಿಲ್ಲ! ಕೊನೆಗೂ ನನ್ನ ಆಸ್ತಿಯ ಮೇಲೆ ಕಣ್ಣು ಹಾಕಿದ್ದ ಅಪ್ಪ ಅಮ್ಮ ಇಬ್ಬರೂ ತೀರಿಕೊಂಡರು. ನನಗೋ ಊರು ಹೋಗು ಕಾಡು ಬಾ ಅಂತಿರೋ ವಯಸ್ಸು! ಇಂಥಾ ಸ್ಥಿತಿಯಲ್ಲಿ ಚೆನ್ನೈನ ಜಮೀನನ್ನು ಇಟ್ಟುಕೊಂಡು ನಾನೇನು ಮಾಡಲಿ? ಅದು ಆ ತಿಮ್ಮಪ್ಪ ಕೊಟ್ಟ ಭಿಕ್ಷೆ, ಅವನಿಗೇ ಅರ್ಪಿತ ಎಂದು ತೀರ್ಮಾನಿಸಿ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಗೆ ದಾನವಾಗಿ ಕೊಟ್ಟೆ. ಅದರ ಮೌಲ್ಯ 15 ಕೋಟಿ! ಎಲ್ಲಾ ಡಾಕ್ಯೂಮೆಂಟ್’ಗಳನ್ನು ನನ್ನ ತಂಗಿಯ ಜೊತೆ ಹೋಗಿ ಕೊಟ್ಟು ಬಂದೆ. ನನ್ನ ಈ ನಿರ್ಧಾರಕ್ಕೆ ತಂಗಿಯ ಮತ್ತು ಆಕೆಯ ಗಂಡನ ಒಪ್ಪಿಗೆಯೂ ಇತ್ತು. ಇದು ದೊಡ್ಡ ಸುದ್ದಿಯಾಗುವುದು ನನಗಿಷ್ಟವಿರಲಿಲ್ಲ. ಆದರೆ ಟಿ.ಟಿ.ಡಿ.ಆಡಳಿತ ಮಂಡಳಿಗೆ ಇದು ಸುದ್ದಿ. ಹೀಗಾಗಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಹೀಗೆ ಪ್ರಕಟವಾದ ಸುದ್ದಿಯನ್ನು ಓದಿ ನನ್ನ ಬಹಳಷ್ಟು ಮಂದಿ ಬಂಧು ಬಳಗದವರು ಫೋನ್ ಮಾಡಿ ‘ಎಂಥಾ ಕೆಲ್ಸ ಮಾಡಿಬಿಟ್ಟೆ ಕಾಂಚನಾ? 15 ಕೋಟಿಯ ಜಮೀನನ್ನು ವೃಥಾ ದಾನ ಮಾಡಿ ಬಿಟ್ಟೆಯಲ್ಲಾ? ನಿನಗೇನು ಹುಚ್ಚುಗಿಚ್ಚು ಹಿಡಿದಿದೆಯಾ?’ ಎಂದೆಲ್ಲಾ ಪ್ರಶ್ನಿಸಿ ಕಾಲೆಳೆದರು! ಹೌದು, ನನಗೆ ಹುಚ್ಚು ಹಿಡಿದಿತ್ತು. ಅದು ದೇವರ ಹುಚ್ಚು. ಬರಿಗೈಲಿ ಬೆಂಗಳೂರಿಗೆ ಬಂದಾಗ ನನ್ಗೆ ಯಾರಿದ್ದರು? ಈಗ ಆಸ್ತಿ ಕೈಗೆ ಬಂದಾಗ ಎಲ್ಲರೂ ಬಂಧುಗಳೇ! ಯಾರನ್ನು ನಂಬೋದು ಬಿಡೋದು? ಹೆತ್ತವರೇ ಶತ್ರುಗಳಾದಾಗ ಈ ಭೂಮಿ ಮೇಲೆ ದೇವರೇ ನನಗೆ ಬಂಧು ಬಾಂಧವರಾಗಿದ್ದವರು…ಹೀಗಾಗಿ 15 ಕೋಟಿ ಮೌಲ್ಯದ ಜಮೀನನ್ನು ಆ ದೇವರಿಗೇ ದಾನ ಮಾಡಿದ್ದೇನೆ. ಇದಕ್ಕಾಗಿ ನನ್ಗೆ ಪಶ್ಚಾತ್ತಾಪವಿಲ್ಲ. ದಾನ ಮಾಡಿರುವ ಆ ಜಮೀನಿನಲ್ಲಿ ಕಲ್ಯಾಣ ಮಂಟಪವೊಂದು ತಲೆಯೆತ್ತಲಿದೆ. ನನಗಂತೂ ಮದುವೆಯಾಗುವ ಯೋಗ ಕೂಡಿಬರಲಿಲ್ಲ. ಯೋಗ-ಯೋಗ್ಯತೆ ಇರುವವರಾದರೂ ಮದುವೆಯಾಗಿ ಸುಖವಾಗಿರಲಿ. ಸರ್ವೇ ಜನೋ ಸುಖಿನೋ ಭವಂತೂ…’ – ಎಂದು ಹೇಳುತ್ತಾ ಕಾಂಚನಮ್ಮ ಆಕಾಶಕ್ಕೆ ಕೈ ಮುಗಿದರು. ದೇವರು ‘ತಥಾಸ್ತು’ ಅಂದಿರಬೇಕು!
– ತೀರಾ ಇತ್ತೀಚೆಗೆ ಕಾಂಚನಾ ಅವರ ಸೋದರಿಯ ಮಗ ಭೂಪೇಂದ್ರ ಪಾಂಡೆಯವರಿಗೆ ಫೋನ್ ಮಾಡಿದ್ದೆ. ಅವರು ಹೇಳಿದ್ದಿಷ್ಟು : ‘ಕಾಂಚನಮ್ಮ ಈಗ ಬೆಂಗಳೂರಿನಿಂದ ಚೆನ್ನೈಗೆ ಶಿಫ್ಟ್ ಆಗಿದ್ದಾರೆ. ಹೆಲ್ತ್ ಚೆಕಪ್’ಗಾಗಿ ಮಾತ್ರ ವರ್ಷಕ್ಕೆ ಎರಡು ಸಲ ಬಂದು ಹೋಗುತ್ತಾರೆ. ಮೊನ್ನೆ ಬಂದು ಮೂರು ದಿನವಿದ್ದು ಹೋಗಿದ್ದಾರೆ. ಈಗ ಮೊದಲಿಗಿಂತಲೂ ಆರೋಗ್ಯವಾಗಿದ್ದಾರೆ, ಲವಲವಿಕೆಯಿಂದಿದ್ದಾರೆ. ಎಲ್ಲೇ ಇದ್ದರೂ ಅವರು ಸುಖವಾಗಿರಲಿ…’ – ಇದು ಪಾಂಡೆಯವರ ಬಯಕೆ ಮಾತ್ರವಲ್ಲ ನಮ್ಮ ಬಯಕೆಯೂ ಹೌದು.