■ ‘ಪ್ರಚಂಡ ರಾವಣ’■
ಈಗ ನೀವು ‘ಮಹಾಭಾರತ’ ಸೀರಿಯಲ್’ನಲ್ಲಿ ನೋಡುತ್ತಿರುವ ಬೃಹತ್ ಅರಮನೆಯಂಥಾ ಮನೆ, ಜೇಬು ತುಂಬಾ ಸಂಪಾದನೆ, ಕೈಗೊಬ್ಬ ಕಾಲಿಗೊಬ್ಬ ಆಳು-ಕಾಳು, ನಾಲ್ಕಾರು ಕೋ-ಆಪರೇಟಿವ್ ಸಂಸ್ಥೆಗಳ ಅಧ್ಯಕ್ಷಗಿರಿ, ಎಕರೆಗಟ್ಟಲೆ ಜಮೀನು, ಹತ್ತಾರು ಕಾರುಗಳು, ಗಟ್ಟಿಮುಟ್ಟಾದ ನಂಬಿಕಸ್ತ ಮಕ್ಕಳು, ಆತ್ಮಾಭಿಮಾನಕ್ಕೆ ಮತ್ತೊಂದು ಹೆಸರಿನಂತಿರುವ ಹೆಂಡತಿ…ಎಲ್ಲವೂ ಇದ್ದು ‘ಪ್ರಚಂಡ ರಾವಣ’ನಂತೆಯೇ ಬದುಕು ನಡೆಸಿದ ವಜ್ರಮುನಿ ಎಂಬ ಖಳನಟ ತಮ್ಮ ಕೊನೆಯ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಪಡಬಾರದ ಪಾಡುಪಟ್ಟು ದುರಂತ ಸಾವನ್ನಪ್ಪಿದ ವ್ಯಥೆಯ ಕಥೆಯೇ ಇಂದಿನ ಅಂಕಣದ ವಸ್ತು…
ಇದು 17 ವರ್ಷಗಳ ಹಿಂದಿನ ಕಥೆ. 2003ನೇ ಇಸವಿಯ ಒಂದು ದಿನ ಬೆಂಗಳೂರಿನ ಹೊರವಲಯದಲ್ಲಿರುವ ವಜ್ರಗಿರಿಯ ವಜ್ರಮುನಿಯವರ ಅರಮನೆಗೆ ಹೋದಾಗ ನಾನು ಕಂಡದ್ದಾದರೂ ಏನು?
ಒಂದು ಕಾಲದ ನಟಭಯಂಕರ ತಮ್ಮ ಕಾಲನ್ನು ಎತ್ತಿಎತ್ತಿ ಹಾಕಿ ನಿಧಾನವಾಗಿ ತಮ್ಮ ಕಿರಿಯ ಮಗ ಜಗದೀಶನ ಕೈ ಹಿಡಿದು ಬರುತ್ತಿದ್ದರೆ ಮೊದಲ ಆಘಾತವಾಯಿತು. ಬಿಳಿಯ ಪಂಚೆ, ಬಿಳಿಯ ಶರ್ಟ್’ನಲ್ಲಿ ವಜ್ರಮುನಿಯವರು ಕರ್ರಗೆ ಕಾಣಿಸುತ್ತಿದ್ದರು.
ಕಷ್ಟಪಟ್ಟು ಕುರ್ಚಿಯೊಳಗೆ ತೂರಿಕೊಂಡ ಅವರು ಸೆಟೆದು ನಿಂತ ಬೆರಳುಗಳಿಂದ ತಮ್ಮ ತಲೆಗೂದಲನ್ನು ನೀವಿಕೊಂಡರು. ಅಲ್ಲಲ್ಲಿ ಕಪ್ಪಾದ ಚರ್ಮ, ಮಾಂಸ ಕರಗಿ ಹೋಗಿದಂತಿರುವ ಬಸವಳಿದ ಮುಖ. ದೊಡ್ಡದಾದ ನಿರ್ಜೀವ ಕಣ್ಣುಗಳು. ಎರಡೂ ಕೈಗಳ ತುಂಬಾ ಇಂಜೆಕ್ಷನ್ ಸೂಜಿ ಚುಚ್ಚಿದ ಗುರುತುಗಳು. ಔಷಧಿ, ಮಾತ್ರೆ, ಇಂಜೆಕ್ಷನ್, ಆಪರೇಷನ್, ಡಯಾಲಿಸಿಸ್’ಗಳು ವಜ್ರಮುನಿಯವರ ದೇಹವನ್ನು ಜರ್ಜರಿತವನ್ನಾಗಿ ಮಾಡಿದ್ದುವು. ಕಿವಿಗೊಂದು ಇಯರ್ ಫೋನ್. ಧೂಳಿನಿಂದ ರಕ್ಷಣೆ ಪಡೆಯಲು ಬಾಯಿಗೊಂದು ಮಾಸ್ಕ್… ಇಂಥಾ ವಜ್ರಮುನಿಯವರನ್ನು ನೀವೆಂದಾದರೂ ನೋಡಿದ್ದೀರಾ? ನನಗೋ ಶಾಕ್ ಮೇಲೆ ಶಾಕ್! ವಜ್ರಮುನಿಯವರಿಗೆ ಕಣ್ಣು ಕಾಣಿಸುತ್ತಿದ್ದರೂ ಕಿವಿ ಸಂಪೂರ್ಣ ಕಿವುಡಾಗಿತ್ತು. ಇಯರ್ ಫೋನ್ ಸಿಕ್ಕಿಸಿಕೊಂಡಿದ್ದರೂ ಅದರ ಉಪಯೋಗವೇನೂ ಇರಲಿಲ್ಲ! ನಾನು ಕೇಳಬೇಕಾದ ಪ್ರಶ್ನೆಯನ್ನು ಒಂದು ಹಾಳೆಯ ಮೇಲೆ ಬರೆಯಬೇಕಾಗಿತ್ತು. ನನ್ನ ಪರಮ ಮೋಡಿ ಅಕ್ಷರವನ್ನು ಓದಿ ಬಿಡುವಂಥಾ ಪರಮ ಚಾಣಾಕ್ಷ ವಜ್ರಮುನಿಯವರು! ಇಂಥಾ ಅನಾರೋಗ್ಯಕರ ವಾತಾವರಣದಲ್ಲೂ ಅವರು ಬರೋಬ್ಬರಿ ಎರಡು ಗಂಟೆಗಳ ಕಾಲ ನಿರರ್ಗಳವಾಗಿ ಮಾತಾಡಿದರು. ಎಲ್ಲವನ್ನೂ ಬರೆದರೆ ಅದೊಂದು ಬೃಹತ್ ‘ವಜ್ರಾಯಣ’ವಾದೀತು! ಹೀಗಾಗಿ ಈ ಅಂಕಣದ ವ್ಯಾಪ್ತಿಯಲ್ಲಿ ಎಷ್ಟನ್ನು ಹೇಳಬಹುದೋ ಅಷ್ಟನ್ನು ಹೇಳುವ ಪ್ರಯತ್ನ ನನ್ನದು…
ಹಾಗಿದ್ದರೆ ಇಂಥಾ ವಜ್ರದಂಥಾ ಕಠೋರ ಕಲಾವಿದನ ಈ ದುಃಸ್ಥಿತಿಗೆ ಕಾರಣವಾದರೂ ಏನು? ಇದೆಲ್ಲಾ ಆರಂಭವಾದದ್ದು ‘ದಾಯಾದಿ’ ಚಿತ್ರದ ಶೂಟಿಂಗ್ ಸಮಯದಲ್ಲಿ. ಬಹುಶಃ ಅದುವೇ ಕೊನೇ ಚಿತ್ರವಿರಬೇಕು. ಕಾಲು ವಿಪರೀತ ಅನ್ನುವಷ್ಟು ಊದಿಕೊಂಡಿತು. ಮೈಕೈಯೆಲ್ಲಾ ವಿಪರೀತ ನೋವು ಶುರುವಾಗಿ ಬಿಟ್ಟಿತು. ಚಿತ್ರೀಕರಣ ಮುಗಿಸಿ ಬಂದು ಮಲಗಿಕೊಂಡವರು ಎದ್ದೇಳಲಿಲ್ಲ. ಗಾಬರಿ ಬಿದ್ದ ತಂಡದವರೊಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋದರು. ಡಾಕ್ಟ್ರು ಮಾತ್ರೆ ಕೊಟ್ಟರು. ಸ್ವಲ್ಪ ವಾಸಿ ಎಂದೆನಿಸಿತು. ಅದರ ಪವರ್ ಇಳಿದ ಮೇಲೆ ಮತ್ತೆ ಕಾಲು ಊದಲು ಶುರುವಾಯಿತು. ಹೊಟ್ಟೆ ಡುಬ್ಬಾದಂತಾಯಿತು. ಅನಿವಾರ್ಯವಾಗಿ ಸ್ಕ್ಯಾನಿಂಗ್ ಮಾಡಿಸಿಕೊಂಡಾಗ ಕಿಡ್ನಿ ಫೇಲೂರ್ ಆಗಿರೋದು ದೃಢ ಪಟ್ಟಿತು. ಜತೆಗೆ ಹಾರ್ಟ್ ಪ್ರಾಬ್ಲೆಮ್. ಬಿಪಿ, ಶುಗರ್ ಕೂಡಾ ಧಾಳಿಯಿಟ್ಟಿತು. ಬೇರೆ ದಾರಿ ಕಾಣದೇ ಮಕ್ಕಳೆಲ್ಲಾ ಸೇರಿ ತಮ್ಮ ತಂದೆಯನ್ನು ಮಲ್ಯ ಆಸ್ಪತ್ರೆಗೆ ಸೇರಿಸಿದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತರಾದ ವಜ್ರಮುನಿಯವರಿಗೆ ಕಿಡ್ನಿ ಟ್ರಾನ್ಸ್’ಪ್ಲಾಂಟೇಶನ್ ಮಾಡಿಸಲು ಮನೆ ಮಂದಿಯೆಲ್ಲಾ ಸೇರಿ ನಿರ್ಧರಿಸಿದರು. ಅದೂ ಆಯಿತು. ಸ್ವಲ್ಪಯೇ ಸ್ವಲ್ಪ ಚೇತರಿಸಿಕೊಂಡು ದೈನಂದಿನ ಬದುಕಿಗೆ ಇನ್ನೇನು ಹೊಂದಿಕೊಳ್ಳುತ್ತಾರೆ ಎಂದೆನ್ನುವಷ್ಟರಲ್ಲಿ ಟ್ರಾನ್ಸ್’ಪ್ಲಾಂಟ್ ಮಾಡಿಸಿಕೊಂಡ ಕಿಡ್ನಿ ಕೈಕೊಟ್ಟಿತು. ಪ್ರಜ್ಞೆ ತಪ್ಪಿತು. ನಾಲ್ಕು ದಿನ ಬೆಡ್ ರೆಸ್ಟ್. ಅಖಂಡ 365 ದಿನಗಳ ಕಾಲ ಅಕ್ಷರಶಃ ನರಳಿದರು. ಮೂರು ತಿಂಗಳ ಕಾಲ ರೂಮೊಂದರಲ್ಲಿ ಕೂಡಿ ಹಾಕಿದ ಶಿಕ್ಷೆ! ಮುಖಕ್ಕೆ ಬಟ್ಟೆ ಕಟ್ಟಲಾಯಿತು. ಹೊರಗಿನ ಪ್ರಪಂಚದ ಸಂಪರ್ಕವೇ ಇಲ್ಲದೆ ತಿಂಗಳುಗಟ್ಟಲೆ ಕಳೆಯುವ ದೌರ್ಭಾಗ್ಯ!
ಇಂಥಾ ದುರ್ಭರ ಪರಿಸ್ಥಿಯಲ್ಲಿ ವಜ್ರಮುನಿ ಏನು ಹೇಳುತ್ತಿದ್ದರು ಗೊತ್ತಾ? ‘ಬದುಕಿನಲ್ಲಿ ನಾನು ಎಂದೂ ಯಾರಿಗೂ ಹೆದರಿದವನಲ್ಲ, ಕೇಡು ಬಗೆದವನಲ್ಲ. ಆದರೆ ಈ ಕಾಯಿಲೆಗಳು ನನ್ನನ್ನೇ ಹೆದರಿಸಿ ಬಿಟ್ಟವು! ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಓಡಾಡಿಕೊಂಡಿದ್ದವನು ನಾನು. ಈಗ ಹೀಗೆ ಅಸಹಾಯಕನಾಗಿ ಮಲಗಿಕೊಂಡಿರಲೇ ಬೇಕಾದ ಅನಿವಾರ್ಯತೆ. ನಿಜ ಹೇಳಬೇಕು ಅಂದ್ರೆ ನನ್ಗೆ ಬದುಕು ಸಾಕಾಗಿದೆ. ಮನೆಯವರಿಗೆ ಹೊರೆಯಾಗಿ ಹೀಗೆ ಸತ್ತಂತೆ ಹಾಸಿಗೆ ಮೇಲೆ ಮಲಗಿರುವುದಕ್ಕಿಂತಲೂ ಸಾಯುವುದೇ ವಾಸಿ ಎಂಬ ನಿರ್ಧಾರಕ್ಕೆ ಬಂದಿದ್ದೇನೆ…’
– ಹೀಗೆಂದು ಹೇಳಿಕೊಂಡ ಒಂದೇ ತಿಂಗಳಲ್ಲಿ ವಜ್ರಮುನಿಯವರು ಇಹಲೋಕದ ವ್ಯವಹಾರವನ್ನು ಮುಗಿಸಿದ್ದರು. ಈಗಲೂ ಜಗದೀಶ್ ನನ್ನ ಸಂಪರ್ಕದಲ್ಲಿದ್ದಾರೆ. ವಜ್ರಮುನಿಯವರ ವಾಯ್ಸ್ ಕೇಳಬೇಕೆಂದೆನಿಸಿದಾಗಲೆಲ್ಲಾ ನಾನು ಜಗದೀಶ್’ಗೆ ಫೋನ್ ಮಾಡುತ್ತೇನೆ. Ditto ವಾಯ್ಸ್. ನನ್ನ ಪ್ರೀತಿಯ, ಹೃದಯವಂತ ಕಲಾವಿದ ವಜ್ರಮುನಿಯವರ ಜತೆ ಮಾತಾಡಿದ ಗುಂಗು ವಾರಪೂರ್ತಿ ಇರುತ್ತದೆ…