ರಶ್ಮಿಕಾ ಡೀಪ್‌ಫೇಕ್‌  ವಿಡಿಯೊ ವೈರಲ್‌ ಮೂಲ ವಿಡಿಯೊದ ಝರಾ ಪಟೇಲ್ ಹೇಳಿದ್ದೇನು?

ಆಂಗ್ಲೋ ಇಂಡಿಯನ್ ಯುವತಿ ಝರಾ ಪಟೇಲ್ (Zara Patel) ಅವರ ಹಾಟ್ ವಿಡಿಯೊಗೆ ರಶ್ಮಿಕಾ ಮಂದಣ್ಣ ಮುಖ ಅಂಟಿಸಿ ವೈರಲ್ ಮಾಡಲಾಗಿತ್ತು.  ಡೀಪ್‌ಫೇಕ್‌ ವಿಡಿಯೊದಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ಅಕ್ಟೋಬರ್ 9ರಂದು ಲಿಫ್ಟ್ ಏರುತ್ತಿರುವ ವಿಡಿಯೊವನ್ನು ಝರಾ ಪೋಸ್ಟ್ ಮಾಡಿದ್ದರು. ಅದಕ್ಕೆ ರಶ್ಮಿಕಾ ಮುಖವನ್ನು ಎಡಿಟ್‌ ಮಾಡಲಾಗಿದೆ. 

ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಅವರು ತಮ್ಮ ನೋವನ್ನು ಹೊರ ಹಾಕಿದ್ದಾರೆ. ʼʼಹಾಯ್‌, ನನ್ನ ಶರೀರಕ್ಕೆ ಜನಪ್ರಿಯ ನಟಿಯ ಮುಖ ಎಡಿಟ್‌ ಮಾಡಿದ ಡೀಪ್‌ಫೇಕ್‌ ವಿಡಿಯೊ ವೈರಲ್‌ ಆಗಿರುವುದು ಗಮನಕ್ಕೆ ಬಂದಿದೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.  

ಮಹಿಳೆಯರು ಮತ್ತು ಹುಡುಗಿಯರ ಭವಿಷ್ಯದ ಬಗ್ಗೆ ಚಿಂತೆ ಕಾಡತೊಡಗಿದೆ. ಅವರು ಈಗ ಸೋಶಿಯಲ್‌ ಮೀಡಿಯಾದಲ್ಲಿ ತೊಡಗಿಸಿಕೊಳ್ಳಲು ಇನ್ನೂ ಹೆಚ್ಚು ಭಯಪಡುವಂತಗಿದೆ. ದಯವಿಟ್ಟು ಯಾವುದೇ ವಿಡಿಯೊ, ಫೋಟೊ ನೋಡುವ ಮುನ್ನ, ಶೇರ್‌ ಮಾಡುವ ಮೊದಲು ಅದರ ನಿಜಾಂಶವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಅಂತರ್ಜಾಲದಲ್ಲಿ ಎಲ್ಲವೂ ನಿಜವಲ್ಲ” ಎಂದು ಅವರು ಬರೆದುಕೊಂಡಿದ್ದಾರೆ. 

ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಇದು ಸಂಭವಿಸಿದ್ದರೆ ಇದನ್ನು ಹೇಗೆ ನಿಭಾಯಿಸುತ್ತಿದ್ದೆ ಎನ್ನುವುದನ್ನು ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ. ಹೆಚ್ಚಿನ ಜನರು ತೊಂದರೆಗೆ ಒಳಗಾಗುವುದಕ್ಕೂ ಮುನ್ನವೇ ಈ ಸಮಸ್ಯೆಯ ಬಗ್ಗೆ ನಾವು ಗಮನ ಹರಿಸಬೇಕಿದೆ 

‘ಡೀಪ್‌ಫೇಕ್’ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾಡಿದ ವಿಡಿಯೊಗಳು. ಇವು ನೈಜವಾಗಿಯೇ ಕಾಣಿಸುತ್ತವೆ. ಡೀಪ್‌ಫೇಕ್ ವೀಡಿಯೊದಲ್ಲಿ ಸಾಮಾನ್ಯವಾಗಿ ಬೇರೆ ಬೇರೆ ವ್ಯಕ್ತಿಗಳ ದೇಹ ಮತ್ತು ಮುಖವನ್ನು ಡಿಜಿಟಲ್ ಮ್ಯಾನಿಪುಲೇಟ್ ಮಾಡಿ ಜೋಡಿಸಿ ಒರಿಜಿನಲ್‌ ಆಗಿ ಕಾಣುವಂತೆ ಮಾಡಲಾಗುತ್ತದೆ.